-ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್
ಹೊಸಪೇಟೆ: ತಾಲೂಕಿನ ಪಾಪಿನಾಯಕನಹಳ್ಳಿಯ ಕರಿಕಲ್ಲು ಗುಡ್ಡದಲ್ಲಿ (Karikallu Hill) ಆದಿಮಾನವರು (Primitive Mans) ಕೆತ್ತಿದ ಕುಟ್ಟು ರೇಖಾಚಿತ್ರಗಳ ಇರುವಿಕೆಯನ್ನು ವಿಜಯನಗರದ ತಿರುಗಾಟ ಸಂಶೋಧನ ತಂಡವು ಪತ್ತೆ ಹಚ್ಚಿದೆ.
ಗ್ರಾಮದ ಅಂಕಾಲಮ್ಮನ ದೇಗುಲದ ಬಳಿ ಪತ್ತೆಯಾಗಿರುವ ಅಪ್ರಕಟಿತ ಶಾಸನ ಪಡಿಯಚ್ಚು ತರಲು ಸಂಶೋಧನಾ ತಂಡ ತೆರಳಿದಾಗ ಸಮೀಪದ ಕರಿಕಲ್ಲು ಬೆಟ್ಟದಲ್ಲಿ ವೈವಿಧ್ಯಮಯವಾದ ಆದಿ ಮಾನವರು ಕೆತ್ತಿದ ಕುಟ್ಟು ರೇಖಾ ಚಿತ್ರಗಳ ಇರುವಿಕೆಯನ್ನು ದೇಗುಲದ ಪೂಜಾರಿ ಎರ್ರಿಸ್ವಾಮಿ ಅವರ ಸಹಕಾರದಿಂದ ಗುರುತಿಸಿದೆ. ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ಗೋವಿಂದ, ಪ್ರೊ. ತಿಪ್ಪೇಸ್ವಾಮಿ, ಪ್ರೊ. ಗೋವರ್ಧನ, ಪ್ರೊ. ಕೃಷ್ಣೇಗೌಡ, ಶಿಕ್ಷಕ ಪರಶುರಾಮ ಅವರು ಆಕರ್ಷಕವಾದ ಕುಟ್ಟು ರೇಖಾಚಿತ್ರಗಳನ್ನು ಪತ್ತೆ ಹಚ್ಚಿದ್ದಾರೆ.
ಪ್ರಾಚೀನ ಕಾಲದ ಆದಿಮಾನವನ ನೆಲೆಗಳ ಕುರಿತು ಜಗತ್ತಿನ ಹಲವೆಡೆ ಸಂಶೋಧನೆ ನಡೆಸಲಾಗಿದೆ. ಆದಿಮಾನವರ ಕುರುಹುಗಳಲ್ಲಿ ಬಂಡೆಗಳಲ್ಲಿ ಕೊರೆದ ರೇಖಾಚಿತ್ರಗಳು ಪ್ರಮುಖ. ಈ ರೇಖಾಚಿತ್ರಗಳನ್ನು ವರ್ಣಚಿತ್ರ, ಕೊರೆದಚಿತ್ರ ಹಾಗೂ ಕುಟ್ಟುಚಿತ್ರಗಳು ಎಂದು ವಿಭಾಗಿಸಲಾಗುತ್ತದೆ. ಶಿಲಾಯುಗದ ಕುರುಹುಗಳ ಕುರಿತು ಅಧ್ಯಯನ ನಡೆಸುತ್ತಿರುವ ‘ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಮಹತ್ವದ ಶೋಧನೆ ನಡೆಸಿದೆ. ಈ ಗುಡ್ಡದ ಬುಡದಿಂದ ತುದಿಯವರೆಗೆ 150ಕ್ಕೂ ಅಧಿಕ ಕುಟ್ಟು ರೇಖಾಚಿತ್ರಗಳನ್ನು ಪತ್ತೆಹಚ್ಚಿದೆ.
ಇದನ್ನೂ ಓದಿ: Gold Rate Today: ಹಬ್ಬದ ಸೀಸನ್ ಮುನ್ಸೂಚನೆ, ಇಳಿಯಿತು ಚಿನ್ನದ ಬೆಲೆ
ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗುಡ್ಡದಲ್ಲಿ ಅದಿ ಮಾನವ ಜನಾಂಗವು ಕೊರೆದ, ಬಿಡಿಸಿದ, ಕುಟ್ಟಿದ ರೇಖಾಚಿತ್ರಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಅಲ್ಲದೆ ಈ ಗುಡ್ಡದಲ್ಲಿ ಕಲ್ಲುಗೊಡಲಿಗಳನ್ನು ಸಿದ್ಧಪಡಿಸುತ್ತಿದ್ದರೆಂದು ಅಧ್ಯಯನದಿಂದ ತಿಳಿದುಬಂದಿತ್ತು. ವಿಶ್ವದ ಸಂಶೋಧಕರ ತಂಡವು ಸಂಗನಕಲ್ಲು ಗ್ರಾಮಕ್ಕೆ ಆಗಮಿಸಿ ವಿಭಿನ್ನ ರೀತಿಯಲ್ಲಿ ಸಂಶೋಧನೆ ಕೈಗೊಂಡಿದೆ. ಇದೀಗ ಹೊಸಪೇಟೆಯಿಂದ ಬಳ್ಳಾರಿಗೆ ತೆರಳುವ ಹೆದ್ದಾರಿ ಬದಿಯಲ್ಲೇ ಕುಟ್ಟು ರೇಖಾಚಿತ್ರಗಳ ಗುಚ್ಛವೇ ಪತ್ತೆಯಾಗಿದೆ.
ಹಸು, ಜಿಂಕೆ,ಗೂಳಿ,ನಾಯಿ, ಹಂದಿ ಚಿತ್ರಗಳಲ್ಲದೆ, ಪ್ರಾಣಿಗಳ ಮೇಲೆ ಕುಳಿತುಕೊಂಡು, ಕೈಯಲ್ಲಿ ಬಿಲ್ಲು ಹಿಡಿದ ಮನುಷ್ಯ ಬೇಟೆಯಾಡುವ ಚಿತ್ರ, ಇಬ್ಬರು ಮನುಷ್ಯರು ನೃತ್ಯ ಮಾಡುವ ಚಿತ್ರ, ದೀರ್ಘ ಕೊಂಬಿನ ಹಸುವಿನ ಕುಟ್ಟುಚಿತ್ರಗಳು ಪತ್ತೆಯಾಗಿವೆ. ಬಂಡೆಗಳಲ್ಲಿನ ಕುಟ್ಟು ರೇಖಾಚಿತ್ರಗಳು ಸುಮಾರು ಕ್ರಿ.ಪೂ. 3000 ವರ್ಷಗಳ ಕಾಲಮಾನದಾಗಿರಬಹುದಾಗಿದೆ.
ಆದಿಮಾನವರಲ್ಲಿ ಪಶುಪಾಲಕರ ಗುಂಪೊಂದು ಈ ಭಾಗದಲ್ಲಿ ವಾಸವಾಗಿರಬೇಕು. ಅವರ ಸಾಮಾಜಿಕ, ಧಾರ್ಮಿಕ ಆಚರಣೆಯ ಭಾಗವಾಗಿ ಈ ಚಿತ್ರಗಳನ್ನು ರಚಿಸಿರುವ ಸಾಧ್ಯತೆಗಳಿವೆ. ಹೀಗೆ ಪತ್ತೆಯಾದ ಕುಟ್ಟು ರೇಖಾಚಿತ್ರಗಳಲ್ಲಿ ಕೆಲವು ಗುಂಡು ಕಲ್ಲುಗಳು 4ರಿಂದ 5 ಅಡಿ ಅಗಲ, 3 ಅಡಿ ಎತ್ತರದ ಚಿತ್ರಗಳು ಗಮನಸೆಳೆಯುತ್ತವೆ. ಕೆಲವು ಕುಟ್ಟು ಚಿತ್ರಗಳನ್ನು ಎತ್ತರವಾದ ಗುಂಡು ಕಲ್ಲುಗಳಿಗೂ ಕೊರೆದಿರುವುದರಿಂದ ತುಂಬಾ ಎತ್ತರವಾದ ಅದಿ ಮಾನವರು ಈ ಚಿತ್ರಗಳನ್ನು ಕೊರೆದಿರಬಹುದು. ಇವುಗಳಿಗೆ ಬಣ್ಣದ ಲೇಪನ ಮಾಡಿಲ್ಲ ಎಂದು ಸಂಶೋಧಕ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಾಧ್ಯಾಪಕ ಪ್ರೊ. ಗೋವಿಂದ ವಿಸ್ತಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Yashasvi Jaiswal: ಚೊಚ್ಚಲ ಟಿ20 ಶತಕ ಬಾರಿಸಿ ಗಿಲ್ ದಾಖಲೆ ಮುರಿದ ಜೈಸ್ವಾಲ್
ಒಂದೇ ಬೆಟ್ಟದಲ್ಲಿ ಇಷ್ಟೊಂದು ಕುಟ್ಟು ರೇಖಾಚಿತ್ರಗಳು ಬೇರೆಲ್ಲೂ ಪತ್ತೆಯಾಗಿಲ್ಲ. ಈ ಗುಡ್ಡದ ಕುಟ್ಟು ರೇಖಾಚಿತ್ರಗಳು ಶಿಲಾಯುಗದಿಂದ ಮಧ್ಯಯುಗದವರೆಗಿನ ಅದಿಮಾನವರು ಕೆತ್ತಿರುವ ಸಾಧ್ಯತೆ ಇದೆ’ ಎಂದು ಸಂಶೋಧನಾ ತಂಡದಲ್ಲಿರುವ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.