ವಿಜಯನಗರ: ಐತಿಹಾಸಿಕ ಕ್ಷೇತ್ರ ಹಂಪಿಯ (Hampi) ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಅಪರೂಪದ ಬಿಳಿ ಬಣ್ಣದ ಮಣ್ಣು ಮುಕ್ಕ ಹಾವು ((Albino Sand Boa) ಪತ್ತೆಯಾಗಿದ್ದು, ಉರಗ ಮತ್ತು ವನ್ಯಜೀವಿ ರಕ್ಷಕ ಜಿ.ಬಿ. ಮಲ್ಲಿಕಾರ್ಜುನ ಹಾವನ್ನು (Snake) ರಕ್ಷಿಸಿದ್ದಾರೆ.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಕಂಡುಬಂದ ಈ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಅಲ್ಲಿನ ಭದ್ರತಾ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಗೊಂದಲಕ್ಕೀಡಾಗಿದ್ದರು. ವಿಷಯ ತಿಳಿದ ಕಮಲಾಪುರದ ಹಾವು(ಉರಗ) ಮತ್ತು ವನ್ಯಜೀವಿ ರಕ್ಷಕ ಜಿ.ಬಿ. ಮಲ್ಲಿಕಾರ್ಜುನ ಸ್ಥಳಕ್ಕೆ ಆಗಮಿಸಿ, ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: Snake Bite : 14ರ ಬಾಲಕನಿಗೆ ಸರ್ಪ ಕಾಟ; ಎರಡು ತಿಂಗಳಲ್ಲಿ 9 ಬಾರಿ ಕಡಿತ; ಆದರೆ ಆ ಹಾವು ಯಾರಿಗೂ ಕಾಣಿಸೊಲ್ಲ! ಏನಿದು ವಿಚಿತ್ರ?
ಈ ಬಗ್ಗೆ ಮಾಹಿತಿ ನೀಡಿದ ಅನಿಮಲ್ ಕನ್ಸರ್ವೇಷನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಹಾವು(ಉರಗ) ಮತ್ತು ವನ್ಯ ಜೀವಿ ರಕ್ಷಕ ವೇಣುಗೋಪಾಲ್ ನಾಯ್ಡು, “ಇದು ಬೇರೆಯ ಜಾತಿ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆʼʼ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Human Dog: ನನ್ನ ಕನಸು ನನಸಾಗಿದೆ; ಇದು ಮನುಷ್ಯನಿಂದ ಶ್ವಾನವಾಗಿ ಬದಲಾದವನ ಮನದಾಳ
ಇದು ಆನುವಂಶಿಕ ಅಸಹಜತೆಯಾಗಿದೆ. ಇವುಗಳ ಅಸಹಜತೆ, ವರ್ಣದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ‘ಅಪರೂಪ’ ಎಂದು ಕರೆಯುತ್ತಾರೆ. ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು (albino Common Sand Boa) ಕಂಡುಬಂದಿದೆ ಮತ್ತು ಈ ಹಾವುಗಳು ವಿಷಕಾರಿಯಲ್ಲದ ಹಾವಾಗಿದೆ ಎಂದವರು ಮಾಹಿತಿ ನೀಡಿದರು.
ಈ ಮಣ್ಣು ಮುಕ್ಕ ಹಾವುಗಳಲ್ಲಿ ಮೂರು ಜಾತಿಯ ಹಾವುಗಳಿದ್ದು, ಸಾಮಾನ್ಯ ಮಣ್ಣು ಮುಕ್ಕ ಹಾವು (Common Sand Boa), ಕೆಂಪು ಮಣ್ಣು ಮುಕ್ಕ ಹಾವು (Red Sand Boa) ಹಾಗೂ ವೇಟೆಕಾರ್ ಮಣ್ಣು ಮುಕ್ಕ (Whitaker’s Boa) ಹಾವುಗಳಿವೆ ಎಂದು ಅವರು ತಿಳಿಸಿದ್ದಾರೆ.