ಹೊಸಪೇಟೆ: ತಾಲೂಕಿನಲ್ಲಿ ಮಳೆಯಿಂದ (Rain) ಸೋರುತ್ತಿರುವ (Leaky) ಮತ್ತು ಸಂಪೂರ್ಣ ದುರಸ್ತಿಗೆ ಒಳಗಾಗಿರುವ ಒಟ್ಟು 641 ಕೊಠಡಿಗಳನ್ನು 3 ತಿಂಗಳಲ್ಲಿ ದುರಸ್ತಿ (Repair) ಮಾಡಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕುವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಶಾಲೆಯಲ್ಲಿ ಇರಬೇಕಾದ ಆಸನ, ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್ ಸೇರಿದಂತೆ ಎಲ್ಲ ಸೌಕರ್ಯ ನೀಡಿ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Education News : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮೊತ್ತ 25 ಸಾವಿರ ರೂ.ಗೆ ಏರಿಕೆ
ಕಾರ್ಮಿಕರ ಯೋಜನೆಗಳ ಜಾಗೃತಿ
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 25 ಸಾವಿರ ಕೋಟಿ ಅನುದಾನ ಇದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೊಜನೆಗಳು ಜಾರಿಯಲ್ಲಿವೆ. ಜತೆಗೆ ಕಾರ್ಮಿಕರಿಗಾಗಿ ವಸತಿ ಇಲಾಖೆಗೆ ಮಂಡಳಿಯಿಂದ 400 ಕೋಟಿ ಅನುದಾನವನ್ನು ಪಡೆದಿದ್ದೇನೆ. ಇಲಾಖೆಯವರು ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಇಲ್ಲಿನ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಇದರ ಜತೆಗೆ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿ, ಕಾರ್ಮಿಕರ ಮಕ್ಕಳಿಗೆ ಒದಗಿಸಲಾಗುವ ಶಿಕ್ಷಣ ಇತರ ಯೋಜನೆಗಳ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು.
ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಕಾರ್ಮಿಕರ ವೇತನ ಪಾವತಿ, ಇತರ ಸೌಲಭ್ಯಗಳ ಲಭ್ಯತೆ ಕುರಿತು ನಿಯಮಿತ ಮಾಹಿತಿ ಪಡೆದು ವರದಿ ಸಲ್ಲಿಸುವ ಜೊತೆಗೆ ಬಾಲಕಾರ್ಮಿಕ ಪದ್ದತಿ ನಡೆಯತ್ತಿದ್ದಲ್ಲಿ ಎಚ್ಚರವಹಿಸಬೇಕು ಎಂದು ಸೂಚಿಸಿದರು.
ಪಶುಸಂಗೋಪನಾ ಇಲಾಖೆ
ಇಲಾಖೆಯ ಪ್ರಗತಿ ವರದಿ ಪಡೆದ ಸಚಿವರು, ಸಿಡಿಲಿನಿಂದ ಮೃತಪಟ್ಟ ಕುರಿ, ಮೇಕೆಗಳಿಗೆ ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ನಿಯಮಾನುಸಾರ ನೇರವಾಗಿ ಘಟನಾ ಸ್ಥಳಕ್ಕೆ ತೆರಳಬೇಕು. ಕಚೇರಿಗೆ ಮರಣ ಹೊಂದಿದ ಪ್ರಾಣಿಗಳನ್ನು ತರಬೇಕು ಎಂದು ತಾಕೀತು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Death Due to Lightning : ಸಿಡಿಲಿಗೆ ವರ್ಷದಲ್ಲಿ 2,880 ಸಾವು! ಕರ್ನಾಟಕದಲ್ಲಿ 10 ವರ್ಷದಲ್ಲಾದ ಸಾವಿನ ಸಂಖ್ಯೆ ಆಘಾತಕಾರಿ!
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊಸಪೇಟೆ-ಬಳ್ಳಾರಿ ಮಾರ್ಗದ ರಸ್ತೆಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದ ಕಾರಣ ಸಮಸ್ಯೆಯಾಗಿದೆ. ಇದು ಅಗತ್ಯವಿರುವ ಮುಖ್ಯ ರಸ್ತೆಯಾಗಿದ್ದು, ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ ಎಂದಾಗ ಅಧಿಕಾರಿ ಮಾಹಿತಿ ನೀಡಿ, ಹೊಸದಾಗಿ ಟೆಂಡರ್ ಅನುಮೊದನೆ ಆಗಿದೆ. ಟೆಂಡರ್‌ದಾರರು ಕಾಮಗಾರಿ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಸಚಿವರು ಹೊಸಪೇಟೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಹೆಚ್ಚು ಗುಂಡಿಗಳಿದ್ದು, ಅವನ್ನು ಮುಚ್ಚಲು ತಿಳಿಸಿ, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿ ಟನಲ್‌ನಿಂದ ಮರಿಯಮ್ಮಹಳ್ಳಿವರೆಗೂ ಸೇವಾರಸ್ತೆ ನಿರ್ಮಾಣ ಆಗದ ಕಾರಣ ಅಪಘಾತ ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸುವ ಕುರಿತು ಸೂಚನೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ತಾಲೂಕಿನಲ್ಲಿ ಕೇವಲ 2 ಗಣಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕ 3 ಲಕ್ಷ ಮೆ.ಟನ್ ಅದಿರು ಉತ್ಪಾದಿಸುತ್ತಿವೆ, ಇನ್ನೂ 11 ಕಂಪನಿಗಳು ವಿವಿಧ ಕಾರಣಗಳಿಂದ ಆರಂಭಗೊಂಡಿಲ್ಲ, ಇವುಗಳು ಕಾರ್ಯಗೊಂಡಾಗ ರಾಜಧನ ಹೆಚ್ಚು ಸಂಗ್ರಹವಾಗಲಿದೆ. ಇದರಿಂದ ಅಭಿವೃದ್ಧಿಗೂ ಹೆಚ್ಚು ಅನುದಾನ ಸಿಗಲಿದೆ ಎಂಬ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿರುವ 11 ಮರಳು ಬ್ಲಾಕ್‌ಗಳನ್ನೂ ಕಾರ್ಯಗತಗೊಳಿಸಿದರೆ ಇತರ ಜಿಲ್ಲೆಗಳಿಂದ ಸಾಗಿಸುವ ಅಕ್ರಮ ಮರಳಿನ ನಿಯಂತ್ರಣ ಜತೆಗೆ ರಾಜಧನ ಸಂಗ್ರಹವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಏತ ನೀರಾವರಿ ಯೋಜನೆ
ತಾಲ್ಲೂಕಿನ ಪಾಪಿನಾಯಕನಹಳ್ಳಿ ಭಾಗದ 22 ಗ್ರಾಮದ ಕೆರೆಗಳಿಗೆ ನೀರು ಒದಗಿಸುವ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗಡುವು ನೀಡಿದ ನಂತರವೂ ಯೋಜನೆ ಅಪೂರ್ಣವಾಗಿದ್ದು, ಈ ಬಗ್ಗೆ ವರದಿಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯನಗರ ಕಾಲದ ಕಾಲುವೆಗಳ ನಿರ್ವಹಣೆ
ವಿಜಯನಗರ ಕಾಲಘಟ್ಟದ ಕಾಲುವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಮಾಹಿತಿ ಪಡೆದುಕೊಂಡರು. ಕಾಲುವೆಗಳಿಗೆ ಬಳಕೆ ನೀರು, ಯುಜಿಡಿ ನೀರು ಸೇರುತ್ತಿದ್ದು, ರೈತರ ಹೊಲಗಳಿಗೆ ತಲುಪುವ ಕಾಲುವೆ ನೀರಿನ ಅವ್ಯವಸ್ಥೆ ಸರಿಪಡಿಸಲು ಸೂಚಿಸಿದರು.
ವಕ್ಫ್ ಬೋರ್ಡ್ ಸೂಕ್ತ ಜಾಗ ಗುರುತಿಸಿ
ಜಿಲ್ಲಾ ಕೇಂದ್ರ ಹೊಸಪೇಟೆ ತಾಲೂಕಿನಲ್ಲಿ ವಕ್ಫ್ ಬೋರ್ಡ್ ಮೂಲಕ ಶಾಲೆ ಮತ್ತು ಆಸ್ಪತ್ರೆ ನಿರ್ಮಿಸುವ ಯೋಜನೆ ಇದ್ದು, ಇದಕ್ಕಾಗಿ ಸೂಕ್ತ ಜಾಗವನ್ನು ಗುರುತಿಸಿ ವರದಿ ನೀಡಬೇಕು ಎಂದು ವಕ್ಫ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Tilak Varma: ವಿರಾಟ್ ಕೊಹ್ಲಿಯ ದಾಖಲೆ ಮುರಿಯಲು ಸಿದ್ಧವಾದ ತಿಲಕ್ ವರ್ಮಾ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹಂಪಿ ವಿಶ್ವಪಾರಂಪರಿಕಾ ಪ್ರದೇಶ ನಿರ್ವಹಣಾ ಸಮಿತಿ(ಹವಾಮಾ) ಆಯುಕ್ತ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಮೊಹಮ್ಮದ್ ಅಲಿ ಅಕ್ರಂ ಶಾ, ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ್ ಇದ್ದರು.