Site icon Vistara News

Vijayanagara News: ಮಳೆ ವಿಳಂಬ, ಬಿತ್ತನೆ ಚಟುವಟಿಕೆ ಮುಂದೂಡಲು ಕೃಷಿ ಇಲಾಖೆ ಸೂಚನೆ

Vijayanagara Agriculture Department JD Sharanappa Mudgal statement

ವಿಜಯನಗರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಡಿಕೆಗಿಂತ ಮಳೆ (Rain) ವಿಳಂಬವಾಗಿದ್ದು, ಮುಂಗಾರು ಮಳೆ ಸುಧಾರಿಸುವವರೆಗೂ ಬಿತ್ತನೆ ಚಟುವಟಿಕೆಗಳನ್ನು (sowing activity) ಮುಂದೂಡಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 642 ಮಿಮೀ ಇದ್ದು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಇಲ್ಲಿಯವರೆಗೆ ವಾಡಿಕೆಯಂತೆ 59 ಮಿಮೀ ಮಳೆಯಾಗಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 24 ಮಿಮೀ ಮಳೆಯಾಗಿದ್ದು, ಶೇ.59 ರಷ್ಟು ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ.

ಇದನ್ನೂ ಓದಿ: Missing Titanic Sub: ಟೈಟಾನಿಕ್‌ ಮುಳುಗಿದ ತಾಣದಲ್ಲೇ ಇನ್ನೊಂದು ದುರಂತ, ನೋಡಲು ಹೋದ ಸಬ್‌ಮರ್ಸಿಬಲ್‌ ಸ್ಫೋಟ

ಕಡಿಮೆ ಪ್ರಮಾಣದ ಮಳೆಯಾದ ಕಾರಣ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ನೀರಾವರಿ ಲಭ್ಯತೆಯ ಮೇಲೆ ಪರಿಣಾಮ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿತ್ತನೆ ಮಾಡುವುದರಿಂದ ರೈತರಿಗೆ ಬೆಳೆ ನಷ್ಟ ಮತ್ತು ಆದಾಯ ನಷ್ಟವಾಗುವ ಸಂಭವವಿರುತ್ತದೆ. ಉತ್ತಮ ಮಳೆಯಾದ ನಂತರ ರೈತರು ಬಿತ್ತನೆ ಚಟುವಟಿಕೆಗಳನ್ನು ಪ್ರಾರಂಭಿಸಬಹುದಾಗಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತವನ್ನು ಬೆಳೆಯುವ ರೈತರು ತುಂಗಭದ್ರ ಜಲಾಶಯದ ನೀರಿನ ಮಟ್ಟವನ್ನು ಗಮನದಲ್ಲಿರಿಸಿ ನಾಟಿ ಕಾರ್ಯಕ್ಕೆ ಸಿದ್ದತೆಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ.

ತೇವಾಂಶದ ಅಭಾವದ ಪರಿಸ್ಥಿತಿಯನ್ನು ನಿಭಾಯಿಸಲು ರೈತರು ಜಲ ಸಂರಕ್ಷಣಾ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಹಾಗೂ ಅಲ್ಪಾವಧಿ ಮತ್ತು ಬರ ನಿರೋಧಕ ತಳಿಗಳ ಬೀಜಗಳನ್ನು ಬಳಸುವುದು ಸೂಕ್ತವಾಗಿದೆ. ಬಿತ್ತನೆಗೆ ಮೊದಲು ಶೇ 2 ರಷ್ಟು ಕ್ಯಾಲ್ಸಿಯಂ ಕ್ಲೋರೈಡ್‌ನಿಂದ ಬೀಜಗಳನ್ನು ಉಪಚರಿಸಿದ್ದಲ್ಲಿ ಸಸಿಗಳಿಗೆ ಬರಗಾಲದ ಪರಿಸ್ಥಿತಿಯನ್ನು ತಡೆದುಕೊಳ್ಳವ ಶಕ್ತಿಯನ್ನು ನೀಡಬಹುದಾಗಿದೆ.

ಇದನ್ನೂ ಓದಿ: Charmadi Ghat: ಚಾರ್ಮಾಡಿ ಘಾಟಿ ರುದ್ರಮನೋಹರ, ಮೋಜುಮಸ್ತಿ ಹೆಚ್ಚಾದರೆ ಹರೋಹರ! ಸೆಲ್ಫಿ ಕ್ರೇಜ್‌ನಿಂದಾಗಿ ಸಿಲುಕಿಕೊಂಡ ಆಂಬ್ಯುಲೆನ್ಸ್

ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Exit mobile version