ಕೂಡ್ಲಿಗಿ: ಭೂತಾಯಿಗೆ ಬಿತ್ತನೆ ಬೀಜ ಅರ್ಪಿಸಿದ ಬಳಿಕ ಮಳೆದೇವ (Rain) ಮುನಿಸಿಕೊಂಡರೆ ಹಲವು ಸಾಂಪ್ರದಾಯಿಕ ಆಚರಣೆಗಳು ನಡೆದುಕೊಂಡು ಬಂದಿವೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ (Kudligi) ತಾಲೂಕಿನ ಗುಡೇಕೋಟೆಯ (Gudekote) ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ, (Praying for rain) ದೇವರನ್ನೇ ಜಲ ದಿಗ್ಬಂಧನಕ್ಕೆ ಒಳಪಡಿಸಿದ್ದಾರೆ.
ಹೌದು, ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆಗಳ ಮದುವೆ, ಸುತ್ತಲಿನ ಪರಿಸರದ ದೇವರಿಗೆ ಹರಕೆ ತೀರಿಸುವುದು, ದೇವರ ಹೆಸರಲ್ಲಿ ಜನಪದ ಆಟ ಇತ್ಯಾದಿ ವಿಶೇಷ ಆಚರಣೆಗಳನ್ನು ನಡೆಸುವುದು ಕಂಡುಬರುತ್ತದೆ. ಆದರೆ ಈ ಎಲ್ಲಕ್ಕಿಂತಲೂ ವಿಭಿನ್ನವಾಗಿ ಗುಡೇಕೋಟೆ ಗ್ರಾಮಸ್ಥರು ದೇವರನ್ನೇ ಜಲ ದಿಗ್ಬಂಧನಕ್ಕೆ ಒಳಪಡಿಸಿ, ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.
ಕಳೆದ ಐದಾರು ವರ್ಷಗಳ ಹಿಂದೆ ಮಳೆ ಬಾರದಿದ್ದಾಗ ಗುಡೇಕೋಟೆ ಗ್ರಾಮಸ್ಥರು ಗ್ರಾಮದ ಶ್ರೀ ಕಾಳಿಕಾ ದೇವಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದ್ದರು. ಭಕ್ತರು ಕಾಳಿಕಾ ದೇವಿಗೆ ಪೂಜೆ ಸಲ್ಲಿಸಿ ಗರ್ಭಗುಡಿಯಲ್ಲಿ ನೀರು ತುಂಬಿಸಿ ದೇವಸ್ಥಾನದ ಬಾಗಿಲು ಮುಚ್ಚಿದ್ದರು. ಪವಾಡ ಎಂಬಂತೆ ಬಾಗಿಲು ಮುಚ್ಚಿದ್ದ ಐದನೇ ದಿನವೇ ಮಳೆ ಸುರಿದಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದೀಗ ಮತ್ತೆ ಕಾಳಿಕಾ ದೇವಿಯ ಮೊರೆ ಹೋಗಿರುವ ಭಕ್ತರು ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಿ ಜಲ ದಿಗ್ಬಂಧನ ಹಾಕಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಧೋನಿ ಹಾಗು ಪುತ್ರಿ ಝಿವಾ
ಸರಿಯಾದ ಸಮಯಕ್ಕೆ ಮಳೆ ಬಾರದಿರುವುದು ಹಾಗೂ ಬರಗಾಲದ ಛಾಯೆ ಆವರಿಸಬಾರದು ಎಂಬ ಆತಂಕದಿಂದ ಕಾಳಿಕಾ ದೇವಿಗೆ ಜನರು ಪೂಜೆ ಸಲ್ಲಿಸಿದ್ದಾರೆ. ಮಂಗಳವಾರ ಮಳೆಗಾಗಿ ಪ್ರಾರ್ಥಿಸಿ, ಮದುವೆಯಾಗದ ಹುಡುಗರು ಮಡಿಯಲ್ಲಿ ತಂದ 521 ಕೊಡಗಳ ನೀರಿನಿಂದ ಕಾಳಿಕಾ ದೇವಿಯ ಗರ್ಭಗುಡಿಯ ಬನ್ನಿ ಮರದ ಸುತ್ತಲೂ ನೀರು ತುಂಬಿಸಲಾಯಿತು. ಮಹಿಳೆಯರು ಸೋಬಾನೆ ಹಾಡುತ್ತಾ ಪ್ರಾರ್ಥನೆ ಮಾಡಿದರು. ಬಳಿಕ ದೇವಸ್ಥಾನದ ಬಾಗಿಲು ಮುಚ್ಚಿದ್ದಾರೆ. ಮಳೆಯಾಗುವವರೆಗೆ ಗರ್ಭಗುಡಿಯ ಬಾಗಿಲು ತೆರೆಯದಿರಲು ಭಕ್ತರು ನಿರ್ಧರಿಸಿದ್ದಾರೆ.
ಮಳೆಯಿಲ್ಲದೆ, ಹಳ್ಳ-ಕೊಳ್ಳ, ಕೆರೆಗಳಲ್ಲಿ ನೀರು ಖಾಲಿಯಾಗುತ್ತಿವೆ. ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೋರ್‌ವೆಲ್‌ಗಳಲ್ಲೂ ನೀರಿನ ಸಾಮರ್ಥ್ಯ ಕ್ಷೀಣಿಸಿದೆ. ಮಳೆ ಬಾರದಿದ್ದರೆ ರೈತರ ಬದುಕು ಕಷ್ಟಕರವಾಗಲಿದೆ. ಹಾಗಾಗಿ ದೇವರು ನಮ್ಮ ಮೇಲೆ ಕೃಪೆ ತೋರಿ ಉತ್ತಮ ಮಳೆ ಸುರಿಸಲಿ, ರೈತರ ಬಾಳು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
ಇದನ್ನೂ ಓದಿ: BRICS Summit 2023: ಬ್ರಿಕ್ಸ್ ಸಂಘಟನೆಗೆ ಸೇರಲಿವೆ ಇನ್ನೂ ಆರು ದೇಶಗಳು
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಲ್ಲನಾಯಕ ನಿಂಗಣ್ಣ, ಬಂಗಾಳಿ ಓಬಯ್ಯ, ವೈ.ಬೋಮ್ಮಣ್ಣ, ಗಾಂಧಿ, ಸುರೇಶ್, ನಾರಾಯಣಪ್ಪ, ಕುಮಾರ್, ರಾಜೇಶ್, ಕೌಶಿಕ್, ಸೂರಲಿಂಗ, ಸುರೇಶ್, ಯರ್ರಿಸ್ವಾಮಿ, ವೆಂಕಟೇಶ್, ಶಿವಕುಮಾರ್, ನಂದೀಶ್ ಇತರರು ಉಪಸ್ಥಿತರಿದ್ದರು.