ಹೊಸಪೇಟೆ: ಸ್ಥಳೀಯ ರಾಣಿಪೇಟೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ (sri Raghavendra swamy) ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ (Aradhana Mahotsava) ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ (Maha Rathotsava) ನೆರವೇರಿಸಲಾಯಿತು.
ಬೆಳಿಗ್ಗೆ ಶ್ರೀರಾಯರ ಬೃಂದಾವನಕ್ಕೆ ವಿಶೇಷವಾಗಿ ರಾಯರ ಅಷ್ಟೋತ್ತರ ಪಾರಾಯಣ ಸಹಿತ ಫಲ ಪಂಚಾಮೃತಾಭಿಷೇಕ ಮಾಡಲಾಯಿತು. ನಂತರ ಶ್ರೀರಾಯರ ಬೃಂದಾವನಕ್ಕೆ ವಿಶೇಷವಾಗಿ ಹೂವಿನ ಅಲಂಕಾರ, ರೇಷ್ಮೆ, ರಜತ ಅಲಂಕಾರ ನೆರವೇರಿಸಲಾಯಿತು. ಬಳಿಕ ಶ್ರೀಮಠದ ಮುಂಭಾಗದಿಂದ ಆರಂಭಗೊಂಡ ರಥೋತ್ಸವ ನಗರದ ವಿವಿಧ ಮಾರ್ಗಗಳ ಮೂಲಕ ತೆರಳಿ ನಂತರ ಶ್ರೀಮಠಕ್ಕೆ ಆಗಮಿಸಿ ಸಂಪನ್ನಗೊಂಡಿತು. ಬಳಿಕ ಕನಾಕಭಿಷೇಕ, ಮಹಾಪೂಜಾ, ಸರ್ವಸೇವಾ ಜರುಗಿತು.
ಈ ವೇಳೆ ಶ್ರೀಮಠದ ವಿಚಾರಣಕರ್ತರು, ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಪ್ರಮುಖರಾದ ನರಸಿಂಹ ಮೂರ್ತಿ, ಅರ್ಚಕ ಮಾರುತಿ ಆಚಾರ್ಯ, ವಿಜಯಕುಮಾರ್ , ಟೀಕಾಚಾರ್ಯ ಇತರರಿದ್ದರು.
ಇದನ್ನೂ ಓದಿ: International Year of Millets : ಸಿರಿಧಾನ್ಯಗಳ ಬಗ್ಗೆ ಭಾರತಕ್ಕೆ ಏಕೆ ಇಷ್ಟು ಆಸಕ್ತಿ?
ಗಾಂಧಿ ಕಾಲೋನಿ: ಗಾಂಧಿ ಕಾಲೋನಿಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತಾರಾಧನೆ ನಿಮಿತ್ತ ಶ್ರೀಮಠದ ಆವರಣದಲ್ಲಿ ರಥೋತ್ಸವ ಜರುಗಿತು.
ಶ್ರೀರಾಯರ ಬೃಂದಾವನಕ್ಕೆ ವಿಶೇಷವಾಗಿ ಹೂವಿನ ಅಲಂಕಾರ, ರೇಷ್ಮೆ, ರಜತ ಅಲಂಕಾರ ನೆರವೇರಿಸಲಾಯಿತು. ಸ್ವಸ್ತಿವಾಚನ, ಮಹಾಮಂಗಳಾರತಿ ನಡೆಯಿತು. ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ಕೃಷ್ಣಮೂರ್ತಿ, ಪ್ರಮುಖರಾದ ಕನಕವೀಡು ಮೋಹನ್ ರಾವ್, ಶ್ರೀನಿವಾಸಾಚಾರ್ಯ, ಜಗನ್ನಾಥ ರಾವ್, ಇತರರಿದ್ದರು.
ಹಳೆಯ ರಾಯರ ಮಠ: ನಗರದ ವಿಜಯಚಿತ್ರ ಮಂದಿರ ಸಮೀಪದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತರಾರಾಧನೆ ವಿಶೇಷವಾಗಿ ನಡೆಯಿತು.
ಬೆಳಿಗ್ಗೆ ರಾಯರ ಬೃಂದಾವನಕ್ಕೆ ವಿಶೇಷವಾಗಿ ಅಷ್ಟೋತ್ತರ, ವಾಯುಸ್ತುತಿ ಪಾರಾಯಣ ಸಹಿತ ಫಲ ಪಂಚಾಮೃತಾಭಿಷೇಕ ನಡೆಯಿತು. ನಂತರ ಅಷ್ಟೋತ್ತರ ನಾಮಾವಳಿ ಪುಷ್ಪಾರ್ಚನೆ, ಕನಕಾಭಿಷೇಕ, ಮಹಾಪೂಜಾ, ಹಸ್ತೋದಕ, ನೇವೈದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು. ಉತ್ತಾರಾಧನೆ ನಿಮಿತ್ತ ಶ್ರೀಮಠದ ಆವರಣದಲ್ಲಿ ಮಹಾರಥೋತ್ಸವ ನಡೆಯಿತು.
ಇದನ್ನೂ ಓದಿ: Aditya- L1 : ಆದಿತ್ಯ ಎಲ್1 ಮಿಷನ್ನ ಉಡಾವಣೆಯ ಮೊದಲ ಚಿತ್ರಗಳು ಹೀಗಿವೆ
ಮಹಾರಥೋತ್ಸವದಲ್ಲಿ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಭಜನಾ ಮಂಡಳಿ ಸದಸ್ಯರು ಭಜನೆಯೊಂದಿಗೆ ಕೋಲಾಟ ಪ್ರದರ್ಶನ ನೀಡಿದರು. ಈ ವೇಳೆ ಶ್ರೀಮಠದ ಭೀಮಸೇನಾಚಾರ್ಯ, ಪ್ರಹ್ಲಾದಾಚಾರ್ಯ, ಗುರುರಾಜಾಚಾರ್ಯ, ಪವನಾಚಾರ್ಯ, ಅನಿಲ್, ದೇಸಾಯಿ, ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.