ಕೂಡ್ಲಿಗಿ: ತುಂಗಭದ್ರಾ ನದಿಯಿಂದ (Tungabhadra river) ಕೂಡ್ಲಿಗಿಯ 80 ಕೆರೆಗಳಿಗೆ (80 lakes) ನೀರು ತುಂಬಿಸುವ 710 ಕೋಟಿ ರೂ. ವೆಚ್ಚದ ಮಹತ್ವದ ಕಾಮಗಾರಿಯು ಅಂತಿಮ ಹಂತಕ್ಕೆ (final stage) ತಲುಪಿದ್ದು, ಕ್ಷೇತ್ರದ ನೂತನ ಶಾಸಕರು ಉಳಿದ ಅಲ್ಪ-ಸ್ವಲ್ಪ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ, ಉದ್ಘಾಟನೆ ಮಾಡುವುದರ ಮೂಲಕ ರೈತಪರ, ಜನಪರ ಯೋಜನೆ ಸಾಕಾರಕ್ಕೆ ಮುಂದಾಗುವರೇ ಎಂಬುದನ್ನು ಕೂಡ್ಲಿಗಿ ಕ್ಷೇತ್ರದ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಕ್ಷೇತ್ರದ ಹಿಂದಿನ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಕಾಳಜಿಯಿಂದ 80 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 710 ಕೋಟಿ ರೂ. ವೆಚ್ಚದ ಯೋಜನೆಗೆ ಕಳೆದ ವರ್ಷ ಜೂನ್ 25ರಂದು ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ರಾಜ್ಯ ಜಲಸಂಪನ್ಮೂಲ ಇಲಾಖೆ ಟೆಂಡರ್ ಕರೆದು ಗುತ್ತಿಗೆ ನೀಡಿತ್ತು. ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ.
ಇದನ್ನೂ ಓದಿ: Viral Video : ರಾಕಿ ಸಾವಂತ್ ಜತೆ ಶೀಲಾ ಕೀ ಜವಾನಿ ಎನ್ನುತ್ತಾ ಹೆಜ್ಜೆ ಹಾಕಿದ ವಿಕ್ಕಿ! ವಿಡಿಯೊ ವೈರಲ್
ಹೂವಿನಹಡಗಲಿ ಹಾಗೂ ಕೊಟ್ಟೂರು ಸಮೀಪ ಸ್ವಲ್ಪ ಪೈಪ್ ಲೈನ್ ಕಾಮಗಾರಿ ಬಾಕಿ ಬಿಟ್ಟರೆ ಉಳಿದೆಲ್ಲ ಪೈಪ್ ಲೈನ್ ಕಾಮಗಾರಿ ಮುಗಿದಿದೆ. 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಸ್ಥಾವರ, ತುಂಗಭದ್ರಾ ನದಿಗೆ ಜೋಡಿಸಿರುವ ಜಾಕ್ ವೆಲ್ ಕಾಮಗಾರಿ ಕೂಡ ಶೇಕಡ 85ರಷ್ಟು ಕಾಮಗಾರಿ ಮುಗಿದಿದ್ದು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಎನ್.ವೈ.ಗೋಪಾಲಕೖಷ್ಣ ಅವರು ಚಾಲನೆ ನೀಡಬೇಕಿತ್ತು ಆದರೆ ಅವರು ಕೂಡ್ಲಿಗಿ ಕ್ಷೇತ್ರವನ್ನು ತೊರೆದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಹೋಗಿದ್ದರಿಂದ ಈಗ ಕೂಡ್ಲಿಗಿಯ ನೂತನ ಶಾಸಕರಾಗಿ ಆಯ್ಕೆಯಾದ ಡಾ.ಎನ್.ಟಿ. ಶ್ರೀನಿವಾಸ್ ಗೆ ಉಳಿದ ಸ್ವಲ್ಪ ಕಾಮಗಾರಿ ಪೂರ್ಣಗೊಳಿಸಿ ಉದ್ಗಾಟನೆಗೊಳಿಸುವ ಮಹತ್ತರ ಜವಬ್ದಾರಿ ಇದೆ. ನೂತನ ಶಾಸಕರು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಅಧಿಕಾರಿಗಳಿಗೆ ಒತ್ತಡ ಹಾಕಿ ಕಾಮಗಾರಿ ಪೂರ್ಣಗೊಳಿಸಬೇಕಾದ ತುರ್ತು ಅಗತ್ಯ ಇದೆ.
ಇದನ್ನೂ ಓದಿ: Rain News: ಮುಂದಿನ 3 ಗಂಟೆಯಲ್ಲಿ 12 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ
ಸಿಂಗಟಾಲೂರಿನಿಂದ ವಿದ್ಯುತ್
ತಾಲೂಕಿನ 80 ಕೆರೆಗಳಿಗೆ ನೀರುಣಿಸುವ ಯೋಜನೆ ಕಾಮಗಾರಿಗೆ ಈಗಾಗಲೇ 110 ಕೆ.ವಿ.ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಸಿಂಗಟಾಲೂರಿನಿಂದ 12 ಕಿ.ಮೀ. ದೂರದಿಂದ ವಿದ್ಯುತ್ ಕಂಬಗಳನ್ನು ಹಾಕುವ ಕಾರ್ಯ ನಡೆದಿದ್ದು ಈ ಕಾರ್ಯ ಸಹ ಬಹುತೇಕ ಮುಗಿದಿದೆ. ಜುಲೈ ಒಳಗೆ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಬರಲು ಎಲ್ಲಾ ಸಾಧ್ಯತೆಗಳಿವೆ. ಎರಡು ಕಡೆ ರೈತರು ಪೈಪ್‌ಲೈನ್ ಕಾಮಗಾರಿಗೆ ಕಾನೂನಾತ್ಮಕವಾಗಿ ತಡೆಯೊಡ್ಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಡೆಯೊಡ್ಡಿದ ರೈತರ ಮನವೊಲಿಸಿ ಕಾನೂನಾತ್ಮಕ ತೊಂದರೆ ನಿವಾರಿಸಿದರೆ ಕೆಲಸ ಮುಗೀತು. ಉದ್ಘಾಟನೆ ಕಾರ್ಯಕ್ರಮ ಮಾಡುವುದಷ್ಟೇ ಬಾಕಿ ಉಳಿಯುತ್ತದೆ. ಬಿಜೆಪಿ ಸರ್ಕಾರ ಇದ್ದಾಗ ಪ್ರಾರಂಭವಾಗಿದ್ದ ಕಾಮಗಾರಿ ಈಗ ಕಾಂಗ್ರೆಸ್ ಸರ್ಕಾರ ಬಂದಾಗ ಉದ್ಘಾಟನೆಯಾಗುವ ಯೋಗ ಬಂದಿದೆ.
ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಂಜಿನಿಯರ್ ಜಯಣ್ಣ ಈ ಕುರಿತು ಮಾತನಾಡಿ, ಪೈಪ್‌ಲೈನ್ ಕಾಮಗಾರಿ ಚುರುಕಾಗಿ ಸಾಗಿದೆ, ಹಡಗಲಿ ಹತ್ತಿರ ಪೈಪ್‌ಲೈನ್ ಕಾಮಗಾರಿ ಸ್ವಲ್ಪ ಬಾಕಿ ಇದೆ. ವಿದ್ಯುತ್ ಸ್ಥಾವರ ಜಾಕ್‌ವೆಲ್ ಕಾಮಗಾರಿ ಮುಗಿಯವ ಹಂತದಲ್ಲಿದೆ. ಈಗ ಕಾಮಗಾರಿ ಮುಗಿಯವ ಹಂತಕ್ಕೆ ಬಂದಿದೆ ಎನ್ನುತ್ತಾರೆ.
ಇದನ್ನೂ ಓದಿ:Ambareesh Birthday: ಅಂಬರೀಶ್ ಸಿನಿಮಾಗಳ ಹಾಡಿನ ರೀಲ್ಸ್‌ನಲ್ಲಿ ಕಮಾಲ್ ಮಾಡಿದ ಅಭಿಷೇಕ್-ಅವಿವ ಬಿಡಪ ಜೋಡಿ
ಈ ಬಗ್ಗೆ ಹೊಸಹಳ್ಳಿಯ ರೈತ ಮಾರಪ್ಪ ಮಾತನಾಡಿ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಶಾಸಕರಾಗಿದ್ದ ಎನ್.ವೈ.ಗೋಪಾಲಕೖಷ್ಣ ಅವರು ಮಾಡಿದ್ದರು. ಕಾಮಗಾರಿ ಈಗ ಮುಗಿಯವ ಹಂತಕ್ಕೆ ಬಂದಿದೆ. ಈಗ ಕೂಡ್ಲಿಗಿಯ ನೂತನ ಶಾಸಕರಾಗಿರುವ ಡಾ.ಎನ್.ಟಿ.ಶ್ರೀನಿವಾಸ್ ಅವರ ಅವಧಿಯಲ್ಲಿ ಉದ್ಘಾಟನೆ ಮಾಡುವ ಯೋಗ ಬಂದಿದೆ. ಶಾಸಕರು ಮೊದಲು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಬಗ್ಗೆ ಗಮನಹರಿಸಬೇಕು.