Site icon Vistara News

Vijayanagara News: ಸುಡು ಬಿಸಿಲನ್ನು ಲೆಕ್ಕಿಸದೇ ಹಂಪಿ ವೀಕ್ಷಣೆಗೆ ಹರಿದು ಬರುತ್ತಿರುವ ಪ್ರವಾಸಿಗರು

Tourists viewing the famous stone chariot of Hampi

ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್‌ ವಿಜಯನಗರ ಜಿಲ್ಲೆ

ಹೊಸಪೇಟೆ: ಒಂದೆಡೆ ಮುಂಗಾರು ಮಳೆ ಪ್ರವೇಶ, ಮತ್ತೊಂದೆಡೆ ಬಿಸಿಲಿನ ತಾಪ. ಇವೆರಡರ ನಡುವೆ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ಪ್ರವಾಸಿಗರ ದಂಡೇ ಕಾಣುತ್ತಿದೆ, ಪ್ರವಾಸಿಗರು (Tourists) ತಂಡೋಪತಂಡವಾಗಿ ಆಗಮಿಸಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೋಡಲು ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿದೆ. ಆದರೆ ಇಲ್ಲಿ ಬಿಸಲಿನ ಪ್ರಖರತೆ ಮಾತ್ರ ಕಡಿಮೆಯಾಗುತ್ತಿಲ್ಲ. ವಾರಾಂತ್ಯದ ಜತೆಗೆ ಹಾಗೂ ಇತರೆ ದಿನಗಳಲ್ಲೂ ಸುಡು ಬಿಸಿಲು ಲೆಕ್ಕಿಸದೇ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಹಂಪಿಯ ವಿರೂಪಾಕ್ಷೇಶ್ವರ ದೇಗುಲ, ಸಾಸಿವೆ ಕಾಳು ಗಣಪತಿ, ಕಡಲೆಕಾಳು ಗಣಪತಿ, ಬಡವಿಲಿಂಗ, ಉಗ್ರನರಸಿಂಹ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ, ವಿಜಯವಿಠಲ ದೇಗುಲ, ಮಾಲ್ಯವಂತ ರಘುನಾಥ ದೇಗುಲ ಸೇರಿದಂತೆ ವಿವಿಧ ಸ್ಮಾರಕಗಳ ಬಳಿ ತಂಡೋಪ ತಂಡವಾಗಿ ವೀಕ್ಷಣೆಗೆ ಬರುತ್ತಿದ್ದಾರೆ.

ಇದನ್ನೂ ಓದಿ: Star Travel Fashion: ದುಬೈ ಡೆಸರ್ಟ್ ಸಫಾರಿಗೆ ನಟಿ ಸಂಜನಾ ಆನಂದ್‌ ಸಿಂಪಲ್‌ ಸ್ಟೈಲ್‌!

ರಾಜ್ಯ ಸೇರಿದಂತೆ ನೆರೆ ಆಂಧ್ರ ಹಾಗೂ ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ.

ಹಂಪಿ ವೀಕ್ಷಣೆಗೆ ಕಳೆದ ಅಕ್ಟೋಬರ್‌ನಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಕ್ಕಳಿಗೆ ಬೇಸಿಗೆ ರಜೆ ಇದ್ದಿದ್ದರಿಂದ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಬಿಸಲಿನಲ್ಲೂ ಹಂಪಿಯತ್ತ ಮುಖ ಮಾಡಿದ್ದಾರೆ. ಇನ್ನೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಕೂಡ ಕೆಲ ದಿನಗಳಿಂದ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗಿದೆ. ಮೇ ತಿಂಗಳ ಅಂತ್ಯದವರೆಗೂ ಪ್ರವಾಸಿಗರ ಆಗಮಿಸುವ ನಿರೀಕ್ಷೆ ಇದೆ.

ಮೂಲಸೌಕರ್ಯಗಳ ಕೊರತೆ

ಹಂಪಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ವಿಜಯ ವಿಠಲ, ಕಮಲ್ ಮಹಾಲ್ ಸೇರಿದಂತೆ ಇತರೆ ಪ್ರಮುಖ ಸ್ಮಾಕರಗಳ ಬಳಿ ಶುದ್ಧ ಕುಡಿವ ನೀರಿನ ಘಟಕಗಳು ಪಾಳು ಬಿದ್ದಿವೆ. ಇದರಿಂದಾಗಿ ಶುದ್ಧ ಕುಡಿವ ನೀರಿಲ್ಲದೇ ಪ್ರವಾಸಿಗರು ಪರದಾಡುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಕೈಯಲ್ಲಿದ್ದ ಬಾಟಲಿ ನೀರು ಕೂಡ ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿದ್ದು, ಕುಡಿವ ನೀರಿಲ್ಲದೇ ಪ್ರವಾಸಿಗರು ಹೈರಾಣವಾಗುತ್ತಿದ್ದಾರೆ.

ಇದನ್ನೂ ಓದಿ: DA Hike News : ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಆರ್ಥಿಕ ಇಲಾಖೆಯಿಂದ ಆದೇಶ

ಸದ್ಯ ಸ್ಥಳೀಯರು ಸೇರಿದಂತೆ ದೇಶ ವಿದೇಶಿಗರು ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸಾಮಾನ್ಯವಾಗಿದೆ. ಆದರೆ ವಿಜಯನಗರ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಹಂಪಿಯಲ್ಲಿ ಹೇಳಿಕೊಳ್ಳುವಂತ ವಸತಿ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಕೂಡ ಇಲ್ಲ. ಆದ್ದರಿಂದ ಹೊಸಪೇಟೆ, ಕಮಲಾಪುರ ಸೇರಿ ಇತರೆ ಕಡೆ ಲಾಡ್ಜ್‌ಗಳ ರೂಂಗಳು ಫುಲ್ ಆಗಿವೆ. ಇದರಿಂದ ಕೆಲವರು ಲಾಡ್ಜ್‌ಗಳಿಲ್ಲದೇ ಸ್ಮಾರಕಗಳನ್ನು ವೀಕ್ಷಿಸಿ ತಮ್ಮ ಊರಿನ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನು ಹೊಟೇಲ್‌, ಹೋಂ ಸ್ಟೇಗಳು ಸಹ ಫುಲ್ ಆಗಿವೆ.

ಸುಡುವ ಬಿಸಲಿನಲ್ಲೇ ಕಲ್ಲಿನ ರಥ ವೀಕ್ಷಣೆ

ಹಂಪಿಯ ವಿಜಯ ವಿಠಲ ದೇಗುಲವನ್ನು ಹೊರತುಪಡಿಸಿ, ಎಲ್ಲಾ ಪ್ರಮುಖ ಸ್ಮಾರಕಗಳ ಬಳಿ ಹೋಗಲು ವಾಹನ ವ್ಯವಸ್ಥೆಯಿದೆ. ವಿಜಯ ವಿಠಲ ದೇಗುಲದ ಒಂದು ಕಿ.ಮೀ ದೂರದಲ್ಲಿ ಬ್ಯಾಟರಿ ಚಾಲಿತ ವಾಹನಗಳಿವೆ. ಆದರೆ ವೀಕೆಂಡ್ ಸೇರಿ ಇತರೆ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳು ಬರುತ್ತಿದ್ದಂತೆ ಫುಲ್ ಆಗಿ ಚಾಲನೆ ಮಾಡುತ್ತಿವೆ. ಸರದಿ ಸಾಲಿನಲ್ಲಿ ನಿಲ್ಲದ ಸಾವಿರಾರು ಪ್ರವಾಸಿಗರು ಬಿಸಲಿನಲ್ಲೇ ಒಂದು ಕಿ.ಮೀ ದೂರ ನಡೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಈ ಬಗ್ಗೆ ಕೇಂದ್ರ ಪುರಾತತ್ವ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Viral News : ಪ್ರತಿಭಟನೆಯ ಬಿಸಿ, ಕಾರು ಬಿಟ್ಟು ಬೈಕ್‌ನಲ್ಲಿ ಮದುವೆ ಮಂಟಪಕ್ಕೆ ತೆರಳಿದ ವರ!

ಮಕ್ಕಳಿಗೆ ಶಾಲಾ-ಕಾಲೇಜು ರಜೆ ಸಿಕ್ಕಿರುವುದರಿಂದ ಕರ್ನಾಟಕ ಪ್ರವಾಸವನ್ನು ಹಾಕಿಕೊಂಡಿದ್ದೆವೆ. ಈ ಭಾಗದಲ್ಲಿ ಮಾತ್ರವಲ್ಲ ದೇಶ ವಿದೇಶದಲ್ಲಿ ಕೂಡ ಹಂಪಿ ಪ್ರಖ್ಯಾತಿ ಪಡೆದಿದೆ. ಆದ್ದರಿಂದ ಇಲ್ಲಿ ಪ್ರವಾಸಕ್ಕೆ ಬಂದಿದ್ದೆವೆ. ಹಂಪಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ ಎಂದು ಹೊರರಾಜ್ಯ ಪ್ರವಾಸಿಗರಾದ ಮೀರಾಬಾಯಿ ತಿಳಿಸಿದ್ದಾರೆ.

Exit mobile version