Site icon Vistara News

Vijayanagara News: ಹೊಸಪೇಟೆಯಿಂದ ಮುಂಬೈಗೆ ಎರಡು ಎಕ್ಸ್‌ಪ್ರೆಸ್ ಟ್ರೈನ್ ಸಂಚಾರ

Two express trains run from Hospet to Mumbai inaguarated by Ballari MP Devendrappa and Koppala MP Karadi Sanganna

ಹೊಸಪೇಟೆ: ಗದಗ (Gadag) ಮಾರ್ಗದವರೆಗೂ ಸಾಗಿಬರುತ್ತಿದ್ದ ಎಕ್ಸ್‌ಪ್ರೆಸ್ ರೈಲುಗಳು (Express Trains) ಇನ್ನುಮುಂದೆ ಹೊಸಪೇಟೆ (Hospet) ಮಾರ್ಗದವರೆಗೂ ವಿಸ್ತರಣೆಗೊಂಡಿದ್ದು, ಮುಂದಿನ ದಿನಗಳಲ್ಲಿ ಬಳ್ಳಾರಿ (Ballari Junction)) ಜಂಕ್ಷನ್ ಮಾರ್ಗದವರೆಗೂ ರೈಲು ವಿಸ್ತರಿಸಲು ರೈಲ್ವೆ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.

ನೈಋತ್ಯ ರೈಲ್ವೆ ವತಿಯಿಂದ 11139/11140 ಗದಗ-ಸಿಎಸ್‌ಎಂಟಿ (ಮುಂಬೈ) ಎಕ್ಸ್‌ಪ್ರೆಸ್, 11305/11306 ಸೊಲ್ಲಾಪುರ-ಗದಗ-ಸೊಲ್ಲಾಪುರ ಡೆಮೊ ಎಕ್ಸ್‌ಪ್ರೆಸ್ ರೈಲುಗಳನ್ನು ಹೊಸಪೇಟೆ ಜಂಕ್ಷನ್‌ವರೆಗೂ ವಿಸ್ತರಿಸಲಾಗಿದ್ದು, ಹೊಸಪೇಟೆಯ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ 11140 ಗದಗ-ಸಿಎಸ್‌ಎಂಟಿ (ಮುಂಬೈ) ಎಕ್ಸ್‌ಪ್ರೆಸ್ ರೈಲು ಪ್ರಯಾಣಕ್ಕೆ ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ವೈ.ದೇವೇಂದ್ರಪ್ಪ, ಬಳ್ಳಾರಿ ಭಾಗದ ಪ್ರಮುಖ ಉದ್ಯಮ ಎನಿಸಿರುವ ಜೀನ್ಸ್ ಉತ್ಪನ್ನಗಳ ರಫ್ತಿಗೆ ಈ ರೈಲುಗಳು ಸಹಕಾರಿಯಾಗಿದ್ದು, ಜತೆಗೆ ಪ್ರವಾಸೋದ್ಯಮ ಉತ್ತೇಜನ, ಕೈಗಾರಿಕೆ, ಕೃಷಿ, ವ್ಯಾಪಾರ ಹಾಗೂ ಗ್ರಾಹಕರಿಗೂ ಹೆಚ್ಚು ಅನುಕೂಲ ಆಗಲಿದೆ ಎಂದರು.

ಇದನ್ನೂ ಓದಿ: Weather Report : ರಾಜ್ಯಾದ್ಯಂತ ನಾಳೆ ವ್ಯಾಪಕ ಮಳೆ

ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಇಚ್ಚಾಶಕ್ತಿಯಿಂದ ಭಾರತೀಯ ರೈಲ್ವೆ ವಲಯದಲ್ಲಿ ಕ್ರಾಂತಿ ಆಗುತ್ತಿದೆ. ವಂದೇ ಭಾರತ್ ಯೋಜನೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಶಕ್ತಿಯಾಗಿದೆ. ಇನ್ನು ಬಳ್ಳಾರಿಯಲ್ಲಿ 16.7 ಕೋಟಿ ರೂ. ವೆಚ್ಚದಲ್ಲಿ ಅಮೃತ ಭಾರತ ಯೋಜನೆ ಅನುಷ್ಠಾನಗೊಂಡಿದ್ದು, 175 ವರ್ಷಗಳ ಇತಿಹಾಸ ಹೊಂದಿರುವ ಬಳ್ಳಾರಿ ಜಂಕ್ಷನ್ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.

ನಂತರ ಕೊಪ್ಪಳದ ಸಂಸದ ಕರಡಿ ಸಂಗಣ್ಣ ಮಾತನಾಡಿ, ಈ ಹಿಂದೆ ಕೇವಲ 9 ರೈಲುಗಳ ಸಂಚರಿಸುತ್ತಿದ್ದ ನಿಲ್ದಾಣದಲ್ಲಿ ಈಗ 40-45 ರೈಲುಗಳು ಓಡಾಡುತ್ತಿರುವ ವಿಷಯ ತಿಳಿದು ಸಂತಸವಾಗಿದೆ. ಕೇಂದ್ರ ಸರ್ಕಾರದಿಂದ ಅಮೃತ ಭಾರತ್ ಯೋಜನೆ ಅಡಿಯಲ್ಲಿ 25 ಸಾವಿರ ಕೋಟಿ ವೆಚ್ಚದಲ್ಲಿ ದೇಶದ 550 ರೈಲು ನಿಲ್ದಾಣದ ಅಭಿವೃದ್ಧಿಗೆ ಏಕಕಾಲದಲ್ಲಿ ಅಡಿಗಲ್ಲು ಹಾಕಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಹೊಸಪೇಟೆ ರೈಲು ನಿಲ್ದಾಣವೂ ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಮಾದರಿ ಉನ್ನತೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಹುಬ್ಬಳ್ಳಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ್ ಕುಮಾರ್ ವರ್ಮಾ ಮಾತನಾಡಿ, 11139 ಮುಂಬೈ-ಗದಗ್ ರೈಲು ಹೊಸಪೇಟೆ ಮಾರ್ಗದವರೆಗೂ ವಿಸ್ತರಿಸಲಾಗಿದ್ದು, ಕೊಪ್ಪಳ ಮತ್ತು ಮುನಿರಾಬಾದ್‌ವರೆಗೂ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲು ಪ್ರತಿದಿನ ರಾತ್ರಿ 9.20ಕ್ಕೆ ಮುಂಬೈನಿಂದ ಹೊರಟು ಮರುದಿನ ಮಧ್ಯಾಹ್ನ 12.45ಕ್ಕೆ ಹೊಸಪೇಟೆ ತಲುಪಲಿದೆ. 11140 ಸಂಖ್ಯೆಯ ಹೊಸಪೇಟೆ-ಮುಂಬೈ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಹೊಸಪೇಟೆಯಿಂದ ಹೊರಟು ಮರುದಿನ ಬೆಳಿಗ್ಗೆ 5.10ಕ್ಕೆ ಮುಂಬೈ ತಲುಪಲಿದೆ.

11305 ಸಂಖ್ಯೆಯ ಸೊಲ್ಲಾಪುರ-ಗದಗ್ ಎಕ್ಸ್‌ಪ್ರೆಸ್ ರೈಲು ಹೊಸಪೇಟೆ ಮಾರ್ಗದವರೆಗೂ ವಿಸ್ತರಿಸಲಾಗಿದ್ದು ಈ ರೈಲು ಪ್ರತಿದಿನ ಬೆಳಿಗ್ಗೆ 11.50ಕ್ಕೆ ಸೊಲ್ಲಾಪುರದಿಂದ ಹೊರಟು ರಾತ್ರಿ 10 ಗಂಟೆಗೆ ಹೊಸಪೇಟೆ ತಲುಪಲಿದೆ. 11306 ಸಂಖ್ಯೆಯ ಹೊಸಪೇಟೆ-ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ನಸುಕಿನ ಜಾವ 12.15ಕ್ಕೆ ಹೊಸಪೇಟೆಯಿಂದ ಹೊರಟು ಅದೇ ದಿನ ಬೆಳಿಗ್ಗೆ 9.30ಕ್ಕೆ ಸೊಲ್ಲಾಪುರ ತಲುಪಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Asia Cup 2023: ಪಾಕಿಸ್ತಾನದಲ್ಲೂ ಪಂದ್ಯ ಆಡಲಿದೆ ಟೀಮ್​ ಇಂಡಿಯಾ!

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಎ.ಲತಾ, ರೈಲ್ವೆ ಇಲಾಖೆ ಅಧಿಕಾರಿಗಳಾದ ಭರತ್ ಕುಮಾರ್, ಅನಿತಾ ಸೇರಿದಂತೆ ಬಾಬುಲಾಲ್ ಜೈನ್, ವೈ.ಯಮುನೇಶ್ ಉಪಸ್ಥಿತರಿದ್ದರು.

Exit mobile version