ವಿಜಯನಗರ: ಕುಷ್ಠರೋಗವನ್ನು (Leprosy) ಸೂಕ್ತ ಔಷಧ (Medicine), ಉಪಚಾರಗಳಿಂದ ಕಡಿಮೆ ಮಾಡಬಹುದಾಗಿದೆ. ಯಾವುದೇ ಭಯಕ್ಕೆ ಒಳಗಾಗದೇ ಧೈರ್ಯವಾಗಿ ತಪಾಸಣೆಗೆ ಒಳಪಟ್ಟು ರೋಗ ಮುಕ್ತತೆಗೆ ಸಹಕರಿಸಬೇಕು ಎಂದು ಶಾಸಕ ಎಚ್. ಆರ್. ಗವಿಯಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಸೋಮವಾರ ಮಹಿಳಾ ಸಮಾಜ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: Yoga Day 2023: ಇದು ಯೋಗಾಭ್ಯಾಸದ ಸುಯೋಗ; ಫೋಟೊ-ವಿಡಿಯೊ ಮಾಡಿ ವಿಸ್ತಾರ ನ್ಯೂಸ್‌ಗೆ ಕಳುಹಿಸಿ
ಕುಷ್ಠರೋಗ ಭಯಪಡುವ ಖಾಯಿಲೆಯಲ್ಲ, ಧೈರ್ಯದಿಂದ ಎದುರಿಸಬೇಕು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ಅತ್ಯವಶ್ಯವಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ತಪಾಸಣೆಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಲೀಂ ಮಾತನಾಡಿ, ಇಂದಿನಿಂದ ಏಕಕಾಲದಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನ ಆರಂಭಗೊಳ್ಳಲಿದೆ. ಈ ಹಿಂದೆ ಕುಷ್ಠರೋಗ ಹೊಂದಿದ ವ್ಯಕ್ತಿಗೆ ದೇವರ ಶಾಪ ಎಂದು ಹೇಳಿ ಊರಿನ ಹೊರಗೆ ಇಡುತ್ತಿದ್ದರು. ಈ ಖಾಯಿಲೆಯಿಂದ ಬಹಳ ನ್ಯೂನತೆ ಉಂಟಾದರೂ ಸಹ ಎದೆಗುಂದದೇ ಆರಂಭಿಕ ಹಂತದಿಂದಲೇ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಕುಷ್ಠರೋಗ ಮುಕ್ತ ಭಾರತವನ್ನಾಗಿ ನಾವು ಮಾಡಬಹುದು ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟ ಸಂದರ್ಭದಲ್ಲಿಯೇ ಮಹಾತ್ಮಾ ಗಾಂಧೀಜಿ ಅವರು ಕುಷ್ಠರೋಗ ಮುಕ್ತ ಭಾರತಕ್ಕೆ ಕರೆಕೊಟ್ಟಿದ್ದರು. ಅಂದಿನಿಂದಲೂ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾರತದಲ್ಲಿ ರೋಗ ನಿಯಂತ್ರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ರಾಜ್ಯದ 12 ಜಿಲ್ಲೆಯಲ್ಲಿ ಆಂದೋಲನ ನಡೆಯುತ್ತಿದ್ದು, ಅದರಲ್ಲಿ ವಿಜಯನಗರ ಜಿಲ್ಲೆ ಸಹ ಒಳಗೊಂಡಿದೆ. ಇಂದಿನಿಂದ 14 ದಿನಗಳ ಕಾಲ ಜಿಲ್ಲೆಯಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆಗಾಗಿ ಆಂದೋಲನ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಜೂನ್ 20 ಮರೆಯಲಾಗದ ದಿನ; ಯಾವ ಕಾರಣಕ್ಕೆ?
ಪ್ರತಿ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಮನೆ ಮನೆಗೆ ಭೇಟಿ ನೀಡಿ ಪ್ರಕರಣ ಪತ್ತೆ ಹಚ್ಚಲಾಗುತ್ತದೆ. ವಿವಿಧ ಇಲಾಖೆಗಳ ಸಹಯೋಗದಿಂದ ಆಂದೋಲನ ನಡೆಯಲಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಮನೆಗೆ ಬಂದರೆ ತಪಾಸಣೆಗೆ ಒಳಪಟ್ಟು ಸಹಕಾರ ನೀಡಬೇಕು. ತಪಾಸಣೆ ವೇಳೆ ಪ್ರಕರಣ ಕಂಡುಬಂದಲ್ಲಿ ಇಲಾಖೆಯಿಂದ ಉಚಿತವಾಗಿ ಚಿಕಿತ್ಸೆ ಜೊತೆಗೆ ವಿವಿಧ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕುಷ್ಠರೋಗ ನಿರ್ಮೂಲನೆಯಲ್ಲಿ ಸೇವೆ ಸಲ್ಲಿಸಿದ ಚರ್ಮರೋಗ ತಜ್ಞರಾದ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯ ಡಾ.ಕೋಮಲ ಎಚ್.ಟಿ., ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯ ಡಾ.ವಂದನಾ, ಹೊಸಪೇಟೆಯ ಕಿರಿಯ ಪ್ರಯೋಗಾಲಯದ ತಾಂತ್ರಿಕ ಅಧಿಕಾರಿ ಎಸ್.ಕರಿಬಸಮ್ಮ ಹಾಗೂ ಬಳ್ಳಾರಿ ವಲಯ ಡೇಮಿಯಲ್ ಫೌಂಡೇಶನ್ನಿನ ಸುಧಾಕರ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Road Accident: ಗೂಡ್ಸ್ ಗಾಡಿ ಚಕ್ರಕ್ಕೆ ಸಿಲುಕಿದ ಮಗು ಮೃತ್ಯು; ನಿಯಂತ್ರಣ ತಪ್ಪಿದ ಬೈಕ್, ಲಾರಿ ಹರಿದು ಮತ್ತಿಬ್ಬರ ಸಾವು
ಈ ವೇಳೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕಮಲಮ್ಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಶಾಲಾ ಆಡಳಿತ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಆಚಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.