ಹರಪನಹಳ್ಳಿ: ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ (MLA) ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕುಟುಂಬ ಸಮೇತ, ರಾಜ್ಯದ ಪ್ರಸಿದ್ಧ ಮಠಗಳಿಗೆ (famous monasteries) ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.
ಚುನಾವಣೆಯ ಪೂರ್ವದಲ್ಲಿ ಕ್ಷೇತ್ರದಾದ್ಯಂತ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಶಾಸಕಿಯಾಗಿ ಆಯ್ಕೆಯಾದ ಬಳಿಕ ಪತಿ ಮಲ್ಲಿಕಾರ್ಜುನ, ಪುತ್ರ ಗೌತಮ ಪ್ರಭು ಅವರೊಟ್ಟಿಗೆ ವಿವಿದ ಮಠಗಳಿಗೆ ಭೇಟಿ ನೀಡಿದ್ದಾರೆ.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ, ಮೈಸೂರಿನ ಸುತ್ತೂರು ಸಂಸ್ಥಾನ ಮಠ ಹಾಗೂ ತುಮಕೂರಿನ ಸಿದ್ದಗಂಗಾ ಮಠಗಳಿಗೆ ತೆರಳಿ ಸ್ವಾಮೀಜಿಗಳಿಗೆ ಫಲ-ಪುಷ್ಪ ಅರ್ಪಿಸಿ, ಗೆಲುವಿನ ಸಂತಸ ಹಂಚಿಕೊಂಡರು.
ಇದನ್ನೂ ಓದಿ: Meta layoffs : ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಲ್ಲಿ ಮುಂದಿನವಾರ ಮತ್ತೆ 6,000 ಉದ್ಯೋಗ ಕಡಿತ
ಈ ವೇಳೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ವಿವಿಧ ಮಠಧೀಶರ ಆಶೀರ್ವಾದ ಪಡೆದು ಕ್ಷೇತ್ರದ ಹಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಅವರಿಂದ ಸಲಹೆ ಮಾರ್ಗದರ್ಶನ ಪಡೆಯುತ್ತಿರುವೆ ಎಂದು ತಿಳಿಸಿದರು.
ಮಠಗಳಿಗೆ ಭೇಟಿ ನೀಡಿದ ವೇಳೆ ಶಾಸಕಿ ಲತಾ ಮಲ್ಲಿಕಾರ್ಜುನ ಕುಟುಂಬಸ್ಥರು, ಕೆಲವು ಜನ ಬೆಂಬಲಿಗರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.