ವಿಜಯನಗರ: ಕೊಲೆಗೆ ಯತ್ನಿಸಿದ್ದ (Attempted Murder) ಇಬ್ಬರು ಆಪಾದಿತರಿಗೆ ವಿಜಯನಗರ ಜಿಲ್ಲೆಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ (Punishment) ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕೊಲೆಯತ್ನ ಪ್ರಕರಣದ ವಿವರ
ಚಿತ್ರದುರ್ಗದ ನಿವಾಸಿಯಾದ ರಾಜು, ಕೊಟ್ಟೂರು ಪಟ್ಟಣದ ಚಿಕ್ಕಮ್ಮನ ಮಗಳನ್ನು ಪ್ರೀತಿಸುವುದಾಗಿ ಹೇಳಿಕೊಂಡು ತಿರುಗಾಡುತಿದ್ದ. ಇದನ್ನು ಕಂಡಿದ್ದ ರಾಜುವಿನ ಸಂಬಂಧಿ ವೀರಭದ್ರಪ್ಪ ಎಂಬಾತ ಕರೆಸಿ ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡಿದ್ದ ರಾಜು ತನ್ನ ಸಹಚರ ಯೋಗೇಶ್‌ನೊಂದಿಗೆ ಸೇರಿಕೊಂಡು 2016ರ ಮಾರ್ಚ್ 19ರಂದು ಕೊಟ್ಟೂರಿನ ಉಜ್ಜಯಿನಿ ವೃತ್ತದಲ್ಲಿ ವೀರಭದ್ರಪ್ಪನ ಜತೆಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಲೇಡ್ ಹಾಗೂ ಚಾಕುವಿನಿಂದ ತಿವಿದು ಹಲ್ಲೆ ಮಾಡಿ ಗಾಯಗೊಳಿಸಿದ್ದ.
ಇದನ್ನೂ ಓದಿ: Smart Virtual Clinic: ಬೆಂಗಳೂರಲ್ಲಿ ಕ್ಲಿಕ್ ಆಯ್ತು ಸ್ಮಾರ್ಟ್ ವರ್ಚುವಲ್ ಕ್ಲಿನಿಕ್; ಏನೆಲ್ಲ ಚಿಕಿತ್ಸೆ ಲಭ್ಯವಿದೆ?
ಪ್ರಕರಣ ಕುರಿತು ತನಿಖೆ ನಡೆಸಿದ್ದ ಪಿಎಸ್ಐ ಮಲ್ಲಯ್ಯ ರಾಥೋಡ್, ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ವಿಜಯನಗರ ಜಿಲ್ಲೆಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ. ನಂದಗಡಿ ಅವರು ಅಪರಾಧ ಸಾಬೀತಾಗಿದ್ದರಿಂದ ರಾಜುಗೆ 3 ವರ್ಷ ಶಿಕ್ಷೆ, 34 ಸಾವಿರ ರೂ ದಂಡ ವಿಧಿಸಿದ್ದಾರೆ. ರಾಜುಗೆ ಸಹಕರಿಸಿದ್ದ ಯೋಗೇಶ್ ಗೆ 2 ವರ್ಷ ಶಿಕ್ಷೆ, 25 ಸಾವಿರ ರೂ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೇ ಒಟ್ಟು ದಂಡದ ಮೊತ್ತದಲ್ಲಿ ಪಿರ್ಯಾದಿ ಹಾಗೂ ಗಾಯಾಳು ವೀರಭದ್ರಪ್ಪಗೆ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಶುಕ್ರವಾರ (ಮೇ 19 ರಂದು) ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ಬ್ರಿಜ್ ಭೂಷಣ್
ಸರ್ಕಾರದ ಪರವಾಗಿ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಟಿ. ಅಂಬಣ್ಣ ವಾದ ಮಂಡಿಸಿದ್ದಾರೆ.