Site icon Vistara News

Vijayanagara News: ಹೊಸಪೇಟೆಯಲ್ಲಿ ವಿಸ್ತಾರ ನ್ಯೂಸ್‌ ಬೆಸ್ಟ್ ಟೀಚರ್‌ ಅವಾರ್ಡ್ ಕಾರ್ಯಕ್ರಮಕ್ಕೆ ಚಾಲನೆ

Vistara News Best Teacher Award 2023 programme inaugurated by Vijayanagara DC M.S. Diwakar at hosapete

ವಿಜಯನಗರ/ಕೊಪ್ಪಳ: ವಿಸ್ತಾರ ನ್ಯೂಸ್‌ ಬೆಸ್ಟ್ ಟೀಚರ್‌ ಅವಾರ್ಡ್ 2023 (Vistara News Best Teacher Award 2023) ರ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ, ಕೊಪ್ಪಳ ತಾಲೂಕು ಭಾಗ್ಯನಗರದ ನ್ಯಾಷನಲ್ ಸ್ಕೂಲ್, ಹೂವಿನ ಹಡಗಲಿ ತಾಲೂಕು ಹೊಳಲು ಗ್ರಾಮದ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆ ಮತ್ತು ಕೊಟ್ಟೂರು ತಾಲೂಕಿನ ಹಾರಕನಾಳದ ದ ಪ್ರಿಸ್ಟೀನ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಸ್ತಾರ ನ್ಯೂಸ್‌ ವತಿಯಿಂದ ಬೆಸ್ಟ್‌ ಟೀಚರ್‌ ಅವಾರ್ಡ್‌ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ಸಂಗತಿ. ಇದು ಸಾಮಾಜಿಕ ಕಳಕಳಿಯ ಪ್ರತೀಕ ಎಂದು ತಿಳಿಸಿದರು. ಶಿಕ್ಷಕರ ಹುದ್ದೆಯು ಅತ್ಯಂತ ಪವಿತ್ರ ಹಾಗೂ ಗೌರವಯುತವಾದದ್ದು ಎಂದು ಹೇಳಿದರು.

ಇದನ್ನೂ ಓದಿ: Masala Tea: ಚಳಿಗಾಲವೆಂದು ಅತಿಯಾಗಿ ಮಸಾಲೆ ಚಹಾ ಕುಡಿಯುತ್ತೀರಾ? ಹಾಗಾದರೆ ಎಚ್ಚರ!

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ತಮ್ಮ ತಂದೆಯವರು ಸಹ ಶಿಕ್ಷಕರಾಗಿದ್ದರು. ಈ ಕಾರ್ಯಕ್ರಮಕ್ಕೆ ಬರಲು ಅದೇ ಪ್ರೇರಣೆಯಾಗಿದೆ. ಶಿಕ್ಷಕರ ವೃತ್ತಿ ಗೌರವಯುತ ವೃತ್ತಿ. ಪ್ರತಿಯೊಬ್ಬ ವ್ಯಕ್ತಿಯ, ಸಾಧಕನ ಹಿಂದೆ ಶಿಕ್ಷಕರ ಪಾತ್ರವಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಹಂತದಲ್ಲಿ ಗೌರಮ್ಮ ಎಂಬ ಶಿಕ್ಷಕರು ತಮಗೆ ಪ್ರೋತ್ಸಾಹ ಹಾಗೂ ಪ್ರೇರಣೆಯಾಗಿದ್ದರು ಎಂದು ತಮ್ಮ ಬಾಲ್ಯದಲ್ಲಿ ಶಿಕ್ಷಣ ನೀಡಿದ ಶಿಕ್ಷಕರನ್ನು ಇದೇ ವೇಳೆ ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಹೊಸಪೇಟೆಯ ಕೊಟ್ಟೂರು ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಸಾಧನೆ ಮಾಡಲು ಗುರು ಅಥವಾ ಶಿಕ್ಷಕರ ಮಾರ್ಗದರ್ಶನವಿರುತ್ತದೆ. ಅವರ ಪ್ರೇರಣೆ ಇರುತ್ತದೆ. ಸಾಧಕರ ಸಾಧನೆ ಹಿಂದೆ ಒಬ್ಬ ಗುರುವಿರುತ್ತಾನೆ. ಗುರುವಿಲ್ಲದೆ ಏನೂ ಇಲ್ಲ. ಅಂತಹ ಗುರುಗಳನ್ನು ಅಥವಾ ಶಿಕ್ಷಕರನ್ನು ಗುರುತಿಸಿ, ಗೌರವಿಸುತ್ತಿರುವ ವಿಸ್ತಾರ ನ್ಯೂಸ್‌ನ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ದಿಢೀರನೆ 40 ರೂ. ಏರಿಕೆ; ಇಷ್ಟಿದೆ ಇಂದಿನ ದರ

ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಭಾಗ್ಯನಗರದ ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕ ಪ್ರಹ್ಲಾದ ಅಗಳಿ ಮಾತನಾಡಿ, ಸಮಾಜದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧಕರು ಇದ್ದಾರೆ. ನಿಜವಾದ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ವಿಸ್ತಾರ ನ್ಯೂಸ್ ಮಾಡುತ್ತಿದೆ. ಖಾಸಗಿ ಶಾಲೆಯ ಶಿಕ್ಷಕರನ್ನೂ ಗುರುತಿಸಿ ಅವರಿಗೂ ಗೌರವ ಸಲ್ಲಿಸುತ್ತಿರುವುದಕ್ಕೆ ವಿಸ್ತಾರ ನ್ಯೂಸ್ ಸಂಸ್ಥೆಯನ್ನು ಅಭಿನಂದಿಸುತ್ತೇನೆ.

ಪ್ರತಿವರ್ಷ 88 ಲಕ್ಷ ಜನ ಪದವೀಧರರಾಗುತ್ತಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರ ಸೇವೆಯೂ ಸ್ಮರಣೀಯ ಸೇವೆ. ಶೈಕ್ಷಣಿಕ ಸಾಧನೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಸೇವೆಯೂ ಸಿಂಹಪಾಲು ಇದೆ. ಶಿಕ್ಷಣ ಪದ್ದತಿಯನ್ನು ಬದಲಾಯಿಸುವ ಹಕ್ಕನ್ನು ರಾಜಕಾರಣಿಗಳಿಗೆ ನೀಡದೆ ಅಧಿಕಾರಿಗಳಿಗೆ, ಆ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ನೀಡಬೇಕು ಎಂದು ತಿಳಿಸಿದರು.

ಉದ್ಯಮಿ ಶ್ರೀನಿವಾಸ ರೆಡ್ಡಿ ಮಾತನಾಡಿದರು.

ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಗೆ ಆಯ್ಕೆಯಾದ ಕಾರಟಗಿ ತಾಲೂಕಿನ ಸೋಮನಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಕಂಠಿ, ಕುಷ್ಟಗಿ ತಾಲೂಕಿನ ಎಂ.ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ‌ ಸಹ ಶಿಕ್ಷಕ ರಾಜು ಬಿ. ರಾಠೋಡ, ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ರೋಟರಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುಸ್ವಾಮಿ ಆರ್., ಯಲಬುರ್ಗಾ ತಾಲೂಕಿನ ಬುಕನಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶಂಕ್ರಪ್ಪ ಇಂಗಳದಾಳ, ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯ ಶಿಕ್ಷಕಿ ನಾದಿರಾ ಬೇಗಂ, ಕೊಪ್ಪಳದ ಭಾಗ್ಯನಗರದ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್‌ನ ಮುಖ್ಯಗುರು ಕಲ್ಪನಾ ವಿಜಯಕುಮಾರ್, ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ನಿರಂಜನ್ ಪಿ.ಜೆ., ಕೂಡ್ಲಿಗಿ ತಾಲೂಕಿನ ಗಜಾಪುರದ ಸಿಆರ್‌‌ಪಿ ಸಂದೀಪ್ ಬಿ., ಹೂವಿನ ಹಡಗಲಿ ತಾಲೂಕು ಹೊಳಲು ಗ್ರಾಮದ ಸರ್‌‌‌.ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯ ಮುಖ್ಯಗುರು ಜಾವಿದ್‌ ಜಿ. ಹಾಲಗಿ ಅವರಿಗೆ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಪ್ರಶಸ್ತಿ ಪುರಸ್ಕೃತ ಶಿಕ್ಷಕರು.

ಕಾರ್ಯಕ್ರಮದಲ್ಲಿ ಕಲಾವಿದ ಶ್ರೀ ಮಾರುತಿರಾವ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು, ವಿಜಯನಗರ ಜಿಲ್ಲೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು, ವಿಜಯನಗರ ಜಿಲ್ಲೆ ಇವರ ಸಹಕಾರದಲ್ಲಿ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂತು.

ಇದನ್ನೂ ಓದಿ: Actor Yash: ಸಿಹಿ ಸುದ್ದಿ ಕೊಟ್ಟೇ ಬಿಟ್ರು ರಾಕಿಂಗ್‌ ಸ್ಟಾರ್‌ ಯಶ್‌; ಟೈಟಲ್ ಅನೌನ್ಸ್‌ಗೆ ಮುಹೂರ್ತ ಫಿಕ್ಸ್!

ಈ ಸಂದರ್ಭದಲ್ಲಿ ಬಿಇಒ ಚನ್ನಬಸಪ್ಪ, ಹೊಳಲು ಗ್ರಾಮದ ಸರ್‌‌‌.ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯ ನಿರ್ದೇಶಕ ಎಂ.ಎಂ. ಹಾಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಸ್ತಾರ ನ್ಯೂಸ್‌ನ ಬಳ್ಳಾರಿ ಬ್ಯೂರೊ ಮುಖ್ಯಸ್ಥ ಶಶಿಧರ ಮೇಟಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರೀನಾ ನಂದನ್ ಹಾಗೂ ಕವಿತಾ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ನಿರೂಪಿಸಿದರು.

Exit mobile version