Site icon Vistara News

Chetan Ahimsa | ಮಿ. ಚೇತನ್‌ ಇದು ಲಾಸ್ಟ್‌ ವಾರ್ನಿಂಗ್:‌ ಪಂಚಮಸಾಲಿ ಹೋರಾಟ ಪ್ರಶ್ನಿಸಿದ್ದಕ್ಕೆ ಕಾಶಪ್ಪನವರ್‌ ಎಚ್ಚರಿಕೆ

ವಿಜಯಾನಂದ ಕಾಶಪ್ಪನವರ್‌ ಮತ್ತು ಚೇತನ್‌ ಅಹಿಂಸಾ

ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾರ್ಥಕ್ಕಾಗಿ ನಡೆಯುತ್ತಿರುವ ಹೋರಾಟ ಎನ್ನುವ ನಟ ಚೇತನ್‌ ಅಹಿಂಸಾ ಅವರ ಹೇಳಿಕೆಯನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಖಂಡಿಸಿದ್ದಾರೆ. ನಟ ಚೇತನ್‌ ಹುಚ್ಚು ಹಿಡಿದ ಹಾಗೆ ಮಾತನಾಡಿದ್ದಾನೆ ಎಂದು ಕಾಶಪ್ಪನವರ್‌ ವಾಗ್ದಾಳಿ ನಡೆಸಿದ್ದಾರೆ. ಜತೆಗೆ ಇದು ಲಾಸ್ಟ್‌ ವಾರ್ನಿಂಗ್‌ ಎಂದು ಎಚ್ಚರಿಸಿದ್ದಾರೆ.

ʻʻನಮ್ಮ ಬಗ್ಗೆ ಮಾತನಾಡುವ ಚೇತನ್ ಏನು ಪ್ರಧಾನ ಮಂತ್ರಿಯೇ?ʼʼ ಎಂದು ಪ್ರಶ್ನಿಸಿರುವ ಅವರು, ʻಏನೋ ಮಿಸ್ಟರ್ ಚೇತನ್ ಎಷ್ಟನೆ ಕ್ಲಾಸ್‌ ಶಾಲೆ ಓದಿದಿಯಾ?ʼʼ ಎಂದು ಕೇಳಿದ್ದಾರೆ ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ವಿಜಯಾನಂದ ಕಾಶಪ್ಪನವರ್‌.

ʻʻಪಂಚಮಸಾಲಿ ಹೋರಾಟದ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಚೇತನ್ ಸಿನಿಮಾವನ್ನು ಪಂಚಮಸಾಲಿ ಸಮಾಜದವರು ನೋಡಬಾರದು. ಚೇತನ್ ಸಿನಿಮಾ ನೋಡಿದ್ರೆ ಪಂಚಮಸಾಲಿ ಸಮಾಜಕ್ಕೆ ಮಾಡಿದ ದ್ರೋಹ, ಅವಮಾನ. ಚೇತನ್ ಸಿನಿಮಾ ಇಡೀ ರಾಜ್ಯದಲ್ಲಿ ಯಾರೂ ನೋಡಬಾರದುʼʼ ಎಂದು ಕಾಶಪ್ಪನವರ್‌ ಹೇಳಿದರು.

ʻʻನಾವು ನಿನ್ನ ಸಿನಿಮಾ ನೋಡಿದ್ದಕ್ಕೇ ನೀ ಹೀರೋ ಆಗಿದಿ, ಇಲ್ಲಂದ್ರ ಝೀರೋ ಇರ್ತಿದ್ದಿ. ನಾವು ಹಣ ಕೊಟ್ಟು ನಿನ್ನ ಸಿನಿಮಾ ನೋಡಬೇಕಾ? ಅದರ ಅವಶ್ಯಕತೆ ನಮಗಿಲ್ಲ. ಸ್ವಾರ್ಥಕ್ಕೋಸ್ಕರ ಹೋರಾಟ ಮಾಡುತ್ತಿದ್ದೇವೆ ಅಂತಿಯಾ? ಇದೇ ಲಾಸ್ಟ್ ವಾರ್ನಿಂಗ್ ಮಿಸ್ಟರ್ ಚೇತನ್… ಹೀಗೆ ಮಾತನಾಡಿದ್ರೆ ನಿನ್ನ ಮನೆಗೆ ಬಂದು ಹೋರಾಟ ಮಾಡಬೇಕಾಗುತ್ತೆʼʼ ಎಂದ ವಿಜಯಾನಂದ ಕಾಶಪ್ಪನವರ್‌, ಚೇತನ್‌ ಭಾರತೀಯನೇ ಅಲ್ಲ ಎಂದಿದ್ದಾರೆ.

ʻʻನೀನು ಲಿಂಗಾಯತ ಸಮಾಜದವನಾಗಿ ನಮ್ಮ ಹೋರಾಟ ಬಗ್ಗೆ ಮಾತಾಡ್ತೀಯಾ? ನೀನು ನಮ್ಮ ಹೋರಾಟದ ಬಗ್ಗೆ, ಮೀಸಲಾತಿ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲʼʼ ಎಂದ ಅವರು, ʻʻಯಾಕೋ ಮಿಸ್ಟರ್ ಚೇತನ್? ಪಂಚಮಸಾಲಿ ಅಂದ್ರ ಸಡಿಲು(ಸರಳ) ಕಂಡಿ ಏನು?ʼʼ ಎಂದು ತಮ್ಮ ಸ್ಟೈಲ್‌ನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾರ್ಥದ್ದು, ಒಕ್ಕಲಿಗರಿಗೆ ನನ್ನ ಬೆಂಬಲ: ಚೇತನ್‌ ಅಹಿಂಸಾ

Exit mobile version