ವಿಜಯಪುರ: ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಮನ ಪರಿವರ್ತನೆಗೆ ಯೋಗಾಭ್ಯಾಸ, ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಅಭ್ಯಾಸ ನೀಡಲು ನವಚೇತನ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ.
ವಿವಿಧ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಸಹಯೋಗದಲ್ಲಿ ಈಗಾಗಲೇ ಶಿಕ್ಷಣ ನೀಡುವ ಕಾರ್ಯಕ್ರಮ ಜಾರಿಗೆ ತರಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು 250 ಕ್ಕೂ ಅಧಿಕ ಜನ ಕೈದಿಗಳು ಸಾಕ್ಷರರಾಗಿದ್ದಾರೆ. ಜತೆಗೆ ರವಿಶಂಕರ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮೂಲಕ 15 ದಿನಗಳ ಕಾಲ ಯೋಗ ತರಬೇತಿ ನೀಡಲಾಗಿದೆ.
ಗುರುದೇವ ಆಶ್ರಮದ ಗುರುಗಳಾದ ಅಮೃತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೈಲಿನಲ್ಲಿ 700 ಕ್ಕೂ ಅಧಿಕ ಶಿಕ್ಷೆಗೆ ಒಳಪಟ್ಟ ಹಾಗೂ ಬಂಧಿತ ಕೈದಿಗಳಿದ್ದು ಅವರಲ್ಲಿ ಸುಮಾರು 400 ಜನ ಕೈದಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. ಯೋಗ ಶಿಬಿರದಿಂದಾಗಿ ಕೈದಿಗಳ ಮಾನಸಿಕ ಸ್ಥಿತಿ ಉತ್ತಮಗೊಂಡಿದೆ.
ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಮಾನಸಿಕ ಒತ್ತಡಕ್ಕೊಳಗಾಗುವುದು ಸಾಮಾನ್ಯ.. ಕುಟುಂಬದಿಂದ ದೂರ ಇರುವ ಇವರ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಕಾರಾಗೃಹದ ಅಧಿಕ್ಷಕ ಐ ಜಿ ಮ್ಯಾಗೇರಿ ತಿಳಿಸಿದ್ದಾರೆ.