Site icon Vistara News

Vijayapura News : ಶಾಲಾ ಕಟ್ಟಡದಿಂದ ಬಿದ್ದು ಯುಕೆಜಿ ಬಾಲಕ ದಾರುಣ ಸಾವು

Boy dies after falling from school building

ವಿಜಯಪುರ: ಶಾಲೆಯ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕನೊರ್ವ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಆರ್‌. ಎಂ ಶಾಹಾ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಇಂಡಿ ತಾಲೂಕಿನ ಮಾವಿನಳ್ಳಿ ಗ್ರಾಮದ ಶಿವರಾಜ್ ರೋಡಗಿ (5) ಮೃತ ದುರ್ದೈವಿ.

ಶಿವರಾಜ್‌ ರೋಡಗಿ ಯು.ಕೆ.ಜಿ ಓದುತ್ತಿದ್ದು, ಬುಧವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದ. ಮೊದಲ ಮಹಡಿಯಿಂದ ಬರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಕೆಳಗಿದ್ದ ನೀರಿನ ಫೀಲ್ಟರ್‌ ಮೇಲೆ ರಭಸವಾಗಿ ಬಿದ್ದ ಪರಿಣಾಮ ಬಾಲಕನ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಾಲಕ ಬಿದ್ದ ವಿಷಯವನ್ನು ಶಾಲೆಯವರು ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆಗೆ ತರುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಮೃತದೇಹವನ್ನು ಆಸ್ಪತ್ರೆಗೆ ತಂದು ಶಾಲಾ ಆಡಳಿತ ಮಂಡಳಿಯವರು ಪರಾರಿಯಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಸುರಕ್ಷಿತ ಕ್ರಮಕೈಗೊಳ್ಳದೆ ಇರುವುದೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಶಾಲೆಯವರು ಯತ್ನಿಸುತ್ತಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಇಂಡಿ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Family Dispute : ಹೆಂಡ್ತಿ ಮೇಲೆ ಸಂಶಯ; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಿಶಾಚಿ ಪತಿ

ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್‌; 3 ವರ್ಷದ ಮಗು ಸಾವು

ಉಡುಪಿ: ಗೆಸ್ಟ್‌ ಹೌಸ್‌ ಒಂದರ ಗೇಟ್‌ (Guest house gate) ಕಳಚಿಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಬಳಿ (Udupi News) ನಡೆದಿದೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು (Child death).

ಪುಟ್ಟ ಮಗು ಸುಶಾಂತ್‌ ಪ್ರತಿನಿತ್ಯವೂ ಮನೆಯ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್‌ ಆಗಿ ಗೆಸ್ಟ್‌ ಹೌಸ್‌ನ ಗೇಟ್‌ ಕಳಚಿ ಬಿದ್ದಿದ್ದು, ಆಟವಾಗುತ್ತಿದ್ದ ಮಗುವಿನ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದು ಬದುಕುಳಿಯಲಿಲ್ಲ. ಗೆಸ್ಟ್ ಹೌಸ್ ನವರ ಬೇಜವಾಬ್ದಾರಿತನದ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Koppala News : ಕನಕಗಿರಿಯಲ್ಲಿ ಅನ್ನದ ಅಗುಳು ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಬಿಎಸ್‌ಎನ್‌ಎಲ್‌ ಕಚೇರಿ ಗೇಟ್‌ ಬಿದ್ದು ಬಾಲಕ ಮೃತ್ಯು

ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ BSNL ಕಚೇರಿ ಗೇಟ್ ಬಿದ್ದು ಬಾಲಕನೊಬ್ಬ ದಾರುಣವಾಗಿ ಸಾವು ಕಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಬಾಗಳಿ ಗ್ರಾಮದ ಎಂಟು ವರ್ಷದ ಗೌತಮ್ ಮೃತ ಬಾಲಕ. ಪೋಷಕರೊಂದಿಗೆ ಆಧಾರ್ ಕಾರ್ಡ್ ಮಾಡಿಸಲು ಬಂದಿದ್ದ ಬಾಲಕ ಗೌತಮ್ ಆಟವಾಡುತ್ತ BSNL ಕಚೇರಿಯ ಬಳಿ ನಿಂತಿದ್ದ. ಈ ವೇಳೆ ಶಿಥಿಲವಾಗಿದ್ದ ಗೇಟ್ ಕಳಚಿ ತಲೆಯ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟಾದುದರಿಂದ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಕಣ್ಣೆದುರಲ್ಲೇ ಆಟ ಆಡುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಂಬಂಧಿಕರು ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಹರಪನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version