ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ಬುಧವಾರ ಸಂಜೆ ಎರಡು ವರ್ಷದ ಬಾಲಕ ಕೊಳವೆ ಬಾವಿಗೆ (Borewell Tragedy karnataka) ಬಿದ್ದಿದ್ದಾನೆ.
ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ (2) ಎಂಬ ಬಾಲಕ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಶಂಕರಪ್ಪ ಮುಜಗೊಂಡ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. 500 ಅಡಿಯಷ್ಟು ಕೊರೆದರೂ ನೀರು ಬಂದಿರಲಿಲ್ಲ. ಹಾಗಾಗಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರು ಎನ್ನಲಾಗಿದೆ. ಈಗ ಅವರ ಮೊಮ್ಮಗನೇ ಈ ಕೊಳವೆ ಬಾವಿಗೆ ಬದ್ದಿದ್ದಾನೆ.
ಇದನ್ನೂ ಓದಿ: Blast In Factory: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟಕ್ಕೆ ಐವರು ಬಲಿ
ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೊಳವೆ ಬಾವಿಯಲ್ಲಿರುವ ಮಗುವಿಗೆ ಆಕ್ಸಿಜನ್ ಪೂರೈಸಲು ಯತ್ನ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಇಂಡಿ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸುತ್ತಿದ್ದಾರೆ. ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾಜ್ಯದಲ್ಲಿ ಕೊಳವೆ ಬಾವಿ ದುರಂತಗಳು
ಕೊಳವೆ ಬಾವಿಗೆ ಬಿದ್ದು 2000 ರಲ್ಲಿ ದಾವಣಗೆರೆಯಲ್ಲಿ ಬಾಲಕ ಕರಿಯ ಸಾವು, 2007 ರಲ್ಲಿ ರಾಯಚೂರಿನಲ್ಲಿ ಬಾಲಕ ಸಂದೀಪ್ ಸಾವು, 2014 ರಲ್ಲಿ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬಾಲಕಿ ಅಕ್ಷತಾ ಸಾವು, 2017 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ವರ್ಷದ ಬಾಲಕಿ ಕಾವೇರಿ ಹಾಗೂ ಗದಗ ಜಿಲ್ಲೆಯ ಸವಡಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಕೊಳವೆ ಬಾವಿಗೆ ಬಿದ್ದು ಬದುಕಿದವರು
2006 ರಲ್ಲಿ ಬಾಗಲಕೋಟೆಯ ಸಿಕ್ಕೇರಿ ಗ್ರಾಮದ ಯುವತಿ ಕಲ್ಲವ್ವ, 2007 ರಲ್ಲಿ ಕಲಬುರಗಿಯ ಭೂಸನೂರು ಗ್ರಾಮದ ಬಾಲಕ ನವನಾಥ, 2009 ರಲ್ಲಿ ಇಂಡಿ ತಾಲೂಕಿನ ದೇವರಹಿಂಬರಗಿ ಗ್ರಾಮದ ಬಾಲಕಿ ಕಾಂಚನಾ ಕೊಳವೆ ಬಾವಿಗೆ ಬಿದ್ದು ಬದುಕಿ ಬಂದವರಾಗಿದ್ದಾರೆ.