ವಿಜಯಪುರ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಡೋಣಿ ನದಿಯಲ್ಲಿ ಪ್ರವಾಹ ಉಂಟಾಗುವ ಭೀತಿಯು ಎದುರಾಗಿದೆ. ಈಗಾಗಲೇ ತಾಳಿಕೋಟೆ ಪಟ್ಟಣದ ಹೊರವಲಯದ ಹಡಗಿನಾಳ ಸಂಪರ್ಕ ಕಲ್ಪಿಸುವ ಸೇತುವೆ ಮತ್ತೆ ಮುಳುಗಿದೆ.
ತಾಳಿಕೋಟೆಯಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಕೆಳಮಟ್ಟದ ಸೇತುವೆಯ ಮೇಲಿಂದಲೇ ಪ್ರಯಾಸದಿಂದ ಸಂಚಾರ ನಡೆಯುತ್ತಿದೆ. ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮನಗೂಳಿ ದೇವಾಪುರ ಸಂಪರ್ಕದ ಬಿಜ್ಜಳ ರಾಜ್ಯ ಹೆದ್ದಾರಿ ಸಂಚಾರ ಮತ್ತೆ ಬಂದ್ ಆಗುವ ಭೀತಿ ಕೂಡ ಇದೆ.
ಸದ್ಯ ತಳಮಟ್ಟದಲ್ಲಿ ತಾತ್ಕಾಲಿಕವಾಗಿರುವ ಸೇತುವೆಯ ಮೇಲೆ ನೀರು ನಿಂತಿದ್ದರೂ ವಾಹನಗಳು ಸಂಚರಿಸುತ್ತಿವೆ. ಯಾವುದೇ ಸಂದರ್ಭದಲ್ಲಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಚಾರ ಬಂದ್ ಆಗಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ| ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ: ಸಿಲಿಕಿಕೊಂಡ ವಾಹನಗಳು