ವಿಜಯಪುರ: ವಿಜಯಪುರ ನಗರದ ಹೊರ ಭಾಗದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ನಾಲ್ಕು ಮಂದಿಯ ಮೇಲೆ ಲಾರಿ ಚಾಲಕನೊಬ್ಬ ಯಮನಂತೆ ಎರಗಿ ಜೀವ ತೆಗೆದು ಪರಾರಿಯಾಗಿದ್ದಾನೆ (Hit and Run).
ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಹಿಟ್ನಳ್ಳಿ ಟೋಲ್ ನಾಕಾ ಬಳಿಯ ಟ್ರಕ್ ಬೈಲೈನ್ ಬಳಿ ದುರ್ಘಟನೆ ನಡೆದಿದೆ. ಟ್ರಕ್ ಬೇಲೈನ್ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನ ನಿರ್ದಯವಾಗಿ ಹರಿದಿದೆ. ಸ್ಥಳದಲ್ಲೇ ನಾಲ್ವರೂ ಸಾವಿಗೀಡಾಗಿದ್ದಾರೆ.
ಊಟಕ್ಕೆ ಹೋಗಿದ್ದ ಯುವಕರು ಬೈಕ್ ಸಮೇತ ಹೈವೇ ಪಕ್ಕ ಬದಿಗೆ ನಿಂತು ಮಾತನಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ನಾಲ್ವರು ವ್ಯಕ್ತಿಗಳು ಹಾಗೂ ಬೈಕ್ಗಳ ಮೇಲೆ ಹರಿದು ಛಿದ್ರಛಿದ್ರವಾಗಿಸಿದೆ. ನಾಲ್ವರೂ ಸ್ಥಳದಲ್ಲೇ ಜೀವ ಬಿಟ್ಟಿದ್ದು, ಎರಡೂ ಬೈಕ್ಗಳು ಪೂರ್ಣ ಜಖಂ ಆಗಿವೆ.
ಮೃತಪಟ್ಟವರನ್ನು ಶಿವಾನಂದ ಚೌಧರಿ ( 25), ಸುನೀಲ ಖಾನಾಪೂರ(26), ಈರಣ್ಣ ಕೋಲಾರ (26), ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ. ಎಲ್ಲರೂ ವಿಜಯಪುರ ನಗರದ ವಜ್ರ ಹನುಮಾನ ನಗರದ ನಿವಾಸಿಗಳು.
ಅಪಘಾತಕ್ಕೀಡಾಗಿರುವುದು KA28 EZ 7126 ಹಾಗೂ KA28 W 9952 ನಂಬರಿನ ಪಲ್ಸರ್ ಹಾಗೂ ಸಿಬಿಝಡ್ ಬೈಕುಗಳಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಇವರ ಮೇಲೆ ಹರಿದಿರುವುದು MH12 QW 8521 ನಂಬರಿನ ಲಾರಿ ಎನ್ನಲಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Hit and Run: ಎರಡೇ ದಿನಗಳಲ್ಲಿ ರಾಜಧಾನಿಯಲ್ಲಿ ಎರಡು ಹಿಟ್ ಆ್ಯಂಡ್ ರನ್; ಇಬ್ಬರ ಬಲಿ