ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (Yoga Day 2022) ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಸಿದ್ಧತಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಈ ಬಾರಿ ʼಯೋಗ ಫಾರ್ ಹ್ಯೂಮ್ಯಾನಿಟಿʼ ಎಂಬ ಧ್ಯೇಯ ವಾಕ್ಯದಲ್ಲಿ ಯೋಗ ದಿನವನ್ನು ಆಚರಿಸುತ್ತಿದೆ. ಮಹತ್ವದ ಈ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸೇರಿ ಪ್ರತಿಯೊಬ್ಬರ ಸಹಕಾರ ಪಡೆಯಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ| ಪ್ರಧಾನಿ ಭಾಗವಹಿಸುವ ಯೋಗ ದಿನ ಆಚರಣೆ ಸಿದ್ಧತೆ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ
ವಿಜಯಪುರ ಜಿಲ್ಲಾ ಕೇಂದ್ರದಲ್ಲಿ, ಯೋಗ ದಿನವನ್ನು ವಿಶ್ವ ಪ್ರಸಿದ್ಧ ಗೋಲಗುಂಬಜ್ ಆವರಣದಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ 5.45ಕ್ಕೆ ಗುಂಬಜ್ ಆವರಣಕ್ಕೆ ಆಗಮಿಸಬೇಕು. ಬಳಿಕ 6.10 ರಿಂದ 7.45ರವರೆಗೆ ಮೈಸೂರು ಯೋಗ ಕಾರ್ಯಕ್ರಮದ ಲೈವ್ ವೀಕ್ಷಣೆ ಇರಲಿದೆ. ಬಳಿಕ 7.45 ರಿಂದ 8.15ರವರೆಗೆ ಅರ್ಧ ಗಂಟೆಗಳ ಸಮಯ ವೇದಿಕೆಯ ಕಾರ್ಯಕ್ರಮವಿರುತ್ತದೆ. 9 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮೂರು ಪಾರಂಪರಿಕ ಮತ್ತು ಸಾಂಪ್ರದಾಯಿಕ ಸ್ಥಳಗಳನ್ನು ಗುರುತಿಸಿ ಯೋಗ ದಿನಾಚರಣೆ ನಡೆಸಲು ರಾಜ್ಯ ಸರ್ಕಾರದ ಸೂಚನೆಯಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ತಿಕೋಟಾ ತಾಲೂಕಿನ ತೊರವಿಯ ಸಂಗೀತ ಮಹಲ್ ಆವರಣದಲ್ಲಿ, ಬಸವನಬಾಗೆವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಇಂಡಿ ತಾಲೂಕಿನ ಹೋರ್ತಿಯ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಯೋಗ ದಿನಾಚರಣೆಗೆ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು. ಈ ಮೂರು ಕಡೆಗಳಲ್ಲಿ ಬೆಳಗ್ಗೆ 7.30 ರಿಂದ 8.30ರವರೆಗೆ ಯೋಗ ಪ್ರದರ್ಶನ ನಡೆಸಲು ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬಸವನಬಾಗೇವಾಡಿ ಮತ್ತು ತಿಕೋಟಾ ತಾಲೂಕುಗಳಲ್ಲಿನ ಯೋಗ ಕಾರ್ಯಕ್ರಮಕ್ಕೆ ವಿಜಯಪುರ ಸಹಾಯಕ ಆಯುಕ್ತರು ಮತ್ತು ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ತಾಪಂ ಇಒ ಮತ್ತು ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಸೇರಿ ಸಭೆ ನಡೆಸಿ, ಕಾರ್ಯಕ್ರಮಕ್ಕೆ ಏರ್ಪಾಡು ಮಾಡಬೇಕು ಎಂದು ಸೂಚನೆ ನೀಡಿದರು.
ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಎಲ್ಲ ಜನಪ್ರತಿನಿಧಿಗಳು ಮತ್ತು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಸೂಚಿಸಿದರು. ಯೋಗದಲ್ಲಿ ಮತ್ತು ಕ್ರೀಡೆಯಲ್ಲಿ ರಾಷ್ಟ್ರಿಯ ಮತ್ತು ಅಂತಾರಾಷ್ಡ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ವಿಜಯಪುರ ಜಿಲ್ಲೆಯ ಸಾಧಕರಿಗೆ ಯೋಗ ದಿನದಂದು ಸನ್ಮಾನಿಸಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಫಲಕಗಳ ಪ್ರದರ್ಶನ ಮತ್ತು ಬ್ಯಾನರ್ ವ್ಯವಸ್ಥೆ ಮಾಡಲು ಮತ್ತು ಯೋಗ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ಧ ಹೊಸಮನಿ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸಭೆಯಲ್ಲಿ ಮಾತನಾಡಿ, ಆರೋಗ್ಯಯುತ ಬದುಕಿಗೆ ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಯೋಗದ ಬಗ್ಗೆ ಅರಿವು ಮೂಡುವಂತಾಗಬೇಕು. ಈ ಹಿನ್ನೆಲೆಯಲ್ಲಿ ಜೂನ್ 21ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಇದನ್ನೂ ಓದಿ| ಯೋಗ ದಿನಕ್ಕೆ ಮೋದಿ: ಸಿಎಂ ಬೊಮ್ಮಾಯಿ ಜತೆ ಪ್ರಧಾನಿ ಸಭೆ