ವಿಜಯಪುರ: ಲಿಂಗಾಯತ ಜಾತಿಯ ಎಲ್ಲಾ ಒಳ ಪಂಗಡಗಳು ೨ಎ ಮೀಸಲಾತಿ ಪಡೆದುಕೊಂಡಿವೆ. ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಈಗಿನದ್ದಲ್ಲ, 1994ರಲ್ಲೇ ಆರಂಭವಾಯಿತು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ ೨ಎ ಶೀಘ್ರದಲ್ಲೇ ಮೀಸಲಾತಿ (Panchamasali Reservation) ಕೊಡುತ್ತಾರೆ ಎಂಬ ವಿಶ್ವಾಸವಿದೆ. ಕೇಂದ್ರದಿಂದ ಒಬಿಸಿ ಮೀಸಲಾತಿಯೂ ಸಿಗಲಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ವೀರಶೈವ ಲಿಂಗಾಯತ, ಪಂಚಮಸಾಲಿ ಸಮಾಜ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲಿದ್ದೇವೆ. ವೀರಶೈವ ಮಹಾಸಭಾದಿಂದ ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ಸಭೆ ನಡೆಯಲಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದ ಹೇಳಿದರು.
ಬ್ರೋಕರ್ ಸ್ವಾಮೀಜಿ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯಿಸಿ, ವಸಂತ ಋತು ಬಂದಾಗ ಕಾಗೆ ಯಾವುದು, ಕೋಗಿಲೆ ಯಾವುದೆಂದು ಗೊತ್ತಾಗುತ್ತದೆ. ಶೀಘ್ರದಲ್ಲಿ ವಸಂತ ಋತು ಬರಲಿದೆ, ಆಗ ಗೊತ್ತಾಗಲಿದೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ | Love Jihad | ಲವ್ ಜಿಹಾದ್ ನಿಗ್ರಹ ಪೊಲೀಸ್ ಪಡೆ ಸ್ಥಾಪನೆಗೆ ಹಿಂದೂ ಸಂಘಟನೆಗಳ ಮನವಿ
ಬಿಎಸ್‌ವೈ ಬಳಿ ವಚನಾನಂದ ಸ್ವಾಮೀಜಿ ಹಣ ಪಡೆದಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಅವರು ಸದನದಲ್ಲಿ ಅವಶ್ಯವಾಗಿ ಪ್ರಸ್ತಾಪಿಸಲಿ. 2020ರಲ್ಲಿ ಸರ್ಕಾರ ಅನುದಾನ ನೀಡಿದೆ, ಆಗ ಈ ಮೀಸಲಾತಿ, ಪಾದಯಾತ್ರೆ ಇರಲಿಲ್ಲ. ನಾವು ಪೀಠಕ್ಕೆ ಬಂದ ಮೇಲೆ ಯಾವುದೇ ಹಣಕಾಸಿನ ವ್ಯವಹಾರ ನಡೆಸಿಲ್ಲ. ಮಠದ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ಬಂದಿದೆ, ಅದು ಮೀಸಲಾತಿ ಹೋರಾಟಕ್ಕಲ್ಲ. ಈ ಬಗ್ಗೆ ಚರ್ಚೆಗಳು ಆಗಲಿ, ನಾವು ಹೆದರುವುದಿಲ್ಲ ಎಂದು ಹೇಳಿದರು.
ಪಂಚಮಸಾಲಿ ಪೀಠದ ಎರಡು ಬಣಗಳ ಹೋರಾಟ ವಿಚಾರಕ್ಕೆ ಸ್ಪಂದಿಸಿ, ಈ ಹೋರಾಟ 2018ರಿಂದ ಆರಂಭವಾಗಿದೆ, ಅದಕ್ಕೂ ಮೊದಲು ಯಾಕೆ ಆಗಿರಲಿಲ್ಲ? ನಾವು ಹೋರಾಟ ಆರಂಭಿಸಿದ್ದೇವೆ, ನಾವು ರಾಷ್ಟ್ರಮಟ್ಟದಲ್ಲಿ ಮೊದಲಿನಿಂದಲೂ ಯೋಗ, ಅಧ್ಯಾತ್ಮದಲ್ಲಿ ಇದ್ದೇವೆ. ಯಾರು ನಿಜವಾಗಿ ಹೋರಾಟ ಆರಂಭ ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ, ನಮ್ಮ ಹೋರಾಟ ನಿರಂತರವಾಗಿ ಇದೆ ಎಂದರು.
ಡೆಡ್‌ಲೈನೂ ನೀಡಲ್ಲ, ಹೆಡ್‌ಲೈನೂ ಕೊಡಲ್ಲ!
ರಾಜಕೀಯಕ್ಕೆ ಪಂಚಮಸಾಲಿ ಪೀಠದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಜತೆಗೆ ಎಲ್ಲರೂ ಇದ್ದಾರೆ, ಹರಿಹರದಲ್ಲಿ ಹರ ಜಾತ್ರೆ ಮಾಡಿದಾಗ ಎಲ್ಲರೂ ಇದ್ದರು, ಈಗಲೂ ಇದ್ದಾರೆ. ಒಂದಿಬ್ಬರು ಇಲ್ಲದಿದ್ದರೆ ಸಮಸ್ಯೆ ಇಲ್ಲ, ಎಲ್ಲರೂ ನಮ್ಮೊಂದಿಗೆ ಇದ್ದಾರೆ. ಸರ್ಕಾರಕ್ಕೆ ಡೆಡ್‌ಲೈನ್ ವಿಚಾರಕ್ಕೆ ಉತ್ತರಿಸಿ, ನಾವು ಡೆಡ್‌ಲೈನೂ ನೀಡಲ್ಲಾ, ಹೆಡ್‌ಲೈನೂ ಕೊಡಲ್ಲಾ, ನಮ್ಮ ಸಮುದಾಯಕ್ಕೆ ಲೈಫ್ ಲೈನ್ ಕೊಡುತ್ತೇವೆ ಎಂದು ತಿಳಿಸಿದರು.
ಮೂರನೇ ಪೀಠ ಮೂರಾಬಟ್ಟೆ ಎಂಬುದು ಯತ್ನಾಳ್ ಹೇಳಿಕೆಗೆ ಸ್ಪಂದಿಸಿ, ಮಾತನಾಡುವವರ ಬಗ್ಗೆ ಏನೂ ಮಾಡುವುದಕ್ಕಾಗಲ್ಲ. ಅವರು ಮಾತನಾಡುತ್ತಲೇ ಇರುತ್ತಾರೆ. ಬೈದವರೆನ್ನ ಬಂಧುಗಳು ಎಂದು ಬಸವ ಧರ್ಮ ಹೇಳುತ್ತದೆ. ಎತ್ತರದಲ್ಲಿ ಇರುವುದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತಿರಬೇಕು ಎಂದು ಹೇಳಿದರು.
ಇದನ್ನೂ ಓದಿ | Criminal politics | ರಾಮುಲು ಗೂಂಡಾಗಿರಿ ತಪ್ಪೊಪ್ಪಿಗೆ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿಯನ್ನು ಕೆಣಕಿದ ಕಾಂಗ್ರೆಸ್