Site icon Vistara News

Rain News: ವಿಜಯಪುರದಲ್ಲಿ ಸಿಡಿಲಿಗೆ ಮತ್ತೊಂದು ಬಲಿ; ಬೀದರ್‌ನಲ್ಲಿ ಮಳೆಗೆ ಧರೆಗುರುಳಿದ ಬೃಹತ್‌ ಮರ

Rain News

ವಿಜಯಪುರ/ಬೀದರ್‌: ವಿಜಯಪುರ ಜಿಲ್ಲೆಯಲ್ಲಿ ಸಿಡಿಲಿಗೆ ಮತ್ತೊಂದು ಬಲಿಯಾಗಿದೆ. ಈವರೆಗೆ ವಿಜಯಪುರದಲ್ಲಿ ನಾಲ್ವರು ಸಿಡಿಲಿಗೆ ಮೃತಪಟ್ಟಿದ್ದಾರೆ. ಮದಭಾವಿ ಎಲ್‌ಟಿ 2ರಲ್ಲಿ ನಿನ್ನೆ ಶುಕ್ರವಾರ ಸಂಜೆ ಸಿಡಿಲು ಬಡಿದು ಲಕ್ಷ್ಮಣ ಸೋಮಲು ರಾಠೋಡ್ (72) ರೈತ ಮೃತಪಟ್ಟಿದ್ದಾರೆ.

ಲಕ್ಷ್ಮಣ ಅವರು ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಿ ಮನೆಗೆ ಬರುವಾಗ ದುರ್ಘಟನೆ ನಡೆದಿದೆ. ಜಮೀನಿನಿಂದ ಮನೆಗೆ ವಾಪಸ್‌ ಆಗುವಾಗ ಗುಡುಗು ಜತೆಗೆ ಜೋರು ಮಳೆ ಶುರುವಾಗಿತ್ತು. ಈ ವೇಳೆ ಆಸರೆಗಾಗಿ ಮರದಡಿ ನಿಂತಿದ್ದರು. ಆಗ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನೂ ಇವರೆಗೆ ಇಂಡಿ ತಾಲೂಕಿನಲ್ಲಿ ಮೂರು, ವಿಜಯಪುರ ತಾಲೂಕಿನಲ್ಲಿ ಓರ್ವ ಸಿಡಿಲಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: Tiger Attack : ಯುವಕನ ಮೇಲೆ ಹುಲಿ ದಾಳಿ; ಬಾಳೆ ತೋಟದಲ್ಲಿ ವ್ಯಾಘ್ರನ ಕಣ್ಣಾ ಮುಚ್ಚಾಲೆ

ಬೀದರ್‌ನಲ್ಲಿ ಗಾಳಿ ಜತೆಗೆ ಜಿಟಿ ಜಿಟಿ ಮಳೆ

ಬೀದರ್‌ನಲ್ಲಿ ಶನಿವಾರ ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಕೂಲ್ ಸಿಟಿಯಾಗಿ ಮಾರ್ಪಾಟಿದೆ. ಹೀಗಾಗಿ ಕೂಲ್‌ ಡ್ರಿಂಕ್ಸ್ ಬದಲಿಗೆ ಚಹಾದ ಮೊರೆ ಹೋಗಿದ್ದಾರೆ. ಕೆಲ ದಿನಗಳಿಂದ ಬಿಸಿಲ ಬೇಗೆಗೆ ತತ್ತರಿಸಿದ್ದ ಬೀದರ್ ಜನತೆಗೆ ಮಳೆಯು ತಂಪೆರೆದಿದೆ. ಗಾಳಿ ರಭಸ ಹೆಚ್ಚಾಗಿ ಇರುವುದರಿಂದ ಜನರು ಜಾಕೆಟ್, ಛತ್ರಿ ಹಿಡಿದು ಓಡಾಡುತ್ತಿದ್ದಾರೆ.

ನಿನ್ನೆ ಶನಿವಾರ ರಾತ್ರಿ ಬೀದರ್ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ ಸುರಿದು ಅವಾಂತರವೇ ಸೃಷ್ಟಿಯಾಗಿತ್ತು. ವಿದ್ಯುತ್ ಕಂಬ ನೆಲಕ್ಕುರುಳಿದ ಪರಿಣಾಮ ಹಲವೆಡೆ ವಿದ್ಯುತ್‌ ಸ್ಥಗಿತಗೊಂಡಿತ್ತು. ಕೆಲವೆಡೆ ಮನೆಯ ತಗಡು ಹಾರಿ ಹೋಗಿತ್ತು. ಒಂದೇ ಮಳೆಗೆ ನಗರದ ಕೆಲ ರಸ್ತೆಗಳು ಕೆರೆಯಂತಾಗಿತ್ತು. ಕಮಲನಗರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಬೃಹತ್‌ ಗಾತ್ರದ ಮರವೊಂದು ಧರೆಗುರುಳಿತ್ತು.

ವೀಕೆಂಡ್‌ನಲ್ಲಿ ಹಲವೆಡೆ ಗಾಳಿ ಜತೆಗೆ ಮಳೆಯಾಟ; ಈ ಜಿಲ್ಲೆಗಳಿಗೆ ತಪ್ಪಲ್ಲ ಬಿಸಿಲಿನ ಕಾಟ

ಬೆಂಗಳೂರು: ರಾಜ್ಯದಲ್ಲಿಂದು ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಮಳೆಗೆ ಗಾಳಿಯು ಸಾಥ್‌ ನೀಡುತ್ತಿದ್ದು, ರಭಸವಾಗಿ ಬೀಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿ ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲೂ ವ್ಯಾಪಕ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ವಿಜಯನಗರ, ಮೈಸೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Rameshwaram Cafe Blast: ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!

ಉತ್ತರ ಒಳನಾಡಿನಲ್ಲಿ ಮಳೆ-ಗಾಳಿ ಒಟ್ಟೊಟ್ಟಿಗೆ ದಾಳಿ

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್‌, ಗದಗ, ಕಲಬುರಗಿ ಹಾಗೂ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಮಾತ್ರವಲ್ಲ ಏಪ್ರಿಲ್‌ 13 ಮತ್ತು 14ರಂದು ಗಂಟೆಗೆ 40-50 ಕಿ.ಮೀ ಮತ್ತು 30-40 ಕಿ.ಮೀ ವೇಗದಲ್ಲಿ ಗಾಳಿಯ ವೇಗವು ರಭಸವಾಗಿ ಬೀಸಲಿದೆ ಎಂದು ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಏಪ್ರಿಲ್‌ 14ರ ಭಾನುವಾರ ದಕ್ಷಿಣ ಕನ್ನಡ, ಉಡುಪಿ‌, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಶಿವಮೊಗ್ಗ, ಮೈಸೂರಿನ ಒಂದೆರಡುಗಳಲ್ಲಿ ಹಗುರ ಮಳೆಯಾಗಲಿದೆ. ಮುಂದಿನ 3 ದಿನಗಳು ದಕ್ಷಿಣ ಒಳನಾಡಿನಲ್ಲಿ ಗಾಳಿ ವೇಗವು 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಏ.14ರವರೆಗೆ ರಾಜ್ಯದ ಒಂದೆರಡು ಕಡೆಗಳಲ್ಲಿ ಸಿಡಿಲು, ಗುಡುಗು ಕೂಡಿದ ಮಳೆಯಾಗಲಿದೆ

ಮಳೆಗಾಗಿ ಕಾದು ಕುಳಿತ ಬೆಂಗಳೂರಿಗರು

ರಾಜಧಾನಿ ಬೆಂಗಳೂರಲ್ಲಿ ಯಾವಾಗ ಮಳೆಯ ದರ್ಶನವಾಗುತ್ತೋ ಎಂದು ಕಾದು ಕುಳಿತುಕೊಳ್ಳುವಂತಾಗಿದೆ. ಶನಿವಾರ-ಭಾನುವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ತಾಪಮಾನದ ಮುನ್ಸೂಚನೆ

ಇನ್ನೂ ಮಳೆ ನಡುವೆಯೂ ಮುಂದಿನ 2 ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version