ವಿಜಯಪುರ : ಜಿಲ್ಲೆಯಲ್ಲಿ ಮಳೆಯಿಂದಾಗಿ (Rain News) ಅವಾಂತರ ಸೃಷ್ಟಿಯಾಗಿದೆ. ಡೋಣಿ ನದಿಗೆ ಅಪಾರ ಪ್ರಮಾಣದ ನೀರು…ಹರಿದು ಬಂದಿದ್ದು, ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಬಿಜ್ಜಳ ರಾಜ್ಯ ಹೆದ್ದಾರಿ ಮತ್ತೆ ಬಂದ್ ಆಗಿದೆ. ನದಿಯಲ್ಲಿನ ತಿರುವುಗಳು, ಅತಿಕ್ರಮಣ, ಇಕ್ಕೆಲಗಳಲ್ಲಿ ಲಂಟಾನ (ಮುಳ್ಳುಕಂಟಿ) ಬೆಳೆದಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ ಆಗಿದೆ.
ಮನಗೂಳಿ – ದೇವಾಪುರ (ಬಿಜ್ಜಳ) ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ವಾಣಿಜ್ಯ ಪಟ್ಟಣ ತಾಳಿಕೋಟೆ ಸಂಪರ್ಕ ಖಡಿತಗೊಂಡಿದೆ. ರಾಜ್ಯ ಹೆದ್ದಾರಿ ಮೂಲಕ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲಗೊಂಡಿದ್ದು ಸಂಪೂರ್ಣ ಜಲಾವೃತಗೊಂಡಿದೆ. ತಾಳಿಕೋಟೆ ಪಟ್ಟಣ ಪ್ರವೇಶಿಸಬೇಕಾದಲ್ಲಿ ಜನರು ಹರಸಾಹಸ ಪಡುತ್ತಿದ್ದಾರೆ. ಉತ್ತರ ಭಾಗದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಮೂಲಕ ಮಹಾರಾಷ್ಟ್ರ, ಗೋವಾ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ರಾಜ್ಯ ಹೆದ್ದಾರಿ ಸೇತುವೆ ಇದಾಗಿದೆ.
ದಕ್ಷಿಣ ಭಾಗದಲ್ಲಿ ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳ ಮೂಲಕ ಆಂಧ್ರಪ್ರದೇಶ, ತೆಲಂಗಾಣ ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿದೆ. ರಾಜ್ಯ ಹೆದ್ದಾರಿಯಲ್ಲಿನ ಪ್ರಮುಖ ಸೇತುವೆ ಶಿಥಿಲಗೊಂಡ ಕಾರಣ ವಾಹನ ಸಂಚಾರ ಕೆಲ ತಿಂಗಳುಗಳಿಂದ ಬಂದ್ ಆಗಿದೆ.
ಇದನ್ನೂ ಓದಿ | Rain News | ನಿಮ್ಮಪ್ಪನ ಮನೆ ಗಂಟೇನೂ ಹೋಗಲ್ಲ, ಸ್ವಲ್ಪ ಲಿಬರಲ್ ಆಗಿ ಪರಿಹಾರ ಕೊಡಿ ಎಂದ ಸಿದ್ದರಾಮಯ್ಯ
ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಆ ಕೆಳಸೇತುವೆ ಸಹ ಮುಳುಗಿದ ಕಾರಣ ಅವಾಂತರ ಸೃಷ್ಟಿಯಾಗಿದೆ. ಕೆಳಸೇತುವೆ ಮುಳುಗಡೆಯಾದಾಗ ಪಟ್ಟಣದ ಉತ್ತರ ಭಾಗದ ಮಿಣಜಗಿ, ಮೂಕಿಹಾಳ, ಸೋಗಲಿ ಹಳ್ಳ, ಹಡಗಿನಾಳ ಸೇತುವೆ ಮೂಲಕ ಸುತ್ತಿ ಬರಬೇಕಾಗುತ್ತಿತ್ತು. ಆದರೆ ಸೋಗಲಿ ಹಳ್ಳದ ಸೇತುವೆ ಸಹ ಕೊಚ್ಚಿಕೊಂಡು ಹೋಗಿದೆ. ಸೋಗಲಿ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ವಿಡಿಯೊ ವೈರಲ್ ಆಗಿತ್ತು. ಈ ರಸ್ತೆಯೂ ಸಹ ಬಂದ್ ಆಗಿತ್ತು. ಆ ಮೂಲಕ ಮೂಕಿಹಾಳ, ಕಲ್ಲದೇವನಹಳ್ಳಿ, ಶಿವಪುರ, ಹಡಗಿನಾಳ ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದವು. ತಾಳಿಕೋಟೆ ಪಟ್ಡಣಕ್ಕೆ ಎಡಭಾಗದಿಂದ ಪ್ರವೇಶಿಸಬೇಕೆಂದರೆ ಮುದ್ದೇಬಿಹಾಳ, ನಾಲತವಾಡ, ನಾರಾಯಣಪುರ, ಕೊಡೆಕಲ್ ಮೂಲಕ ಮಾತ್ರ ಪ್ರವೇಶ ಸಾಧ್ಯವಾಗಿದೆ.
ಬಲಭಾಗದಲ್ಲಿನ ಸಾತಿಹಾಳ, ಅಮಳೂರು ಸೇತುವೆಗಳು ಸಹ ಜಲಾವೃತಗೊಂಡಿವೆ. ಬಲಭಾಗದಲ್ಲಿ ದೇವರ ಹಿಪ್ಪರಗಿ, ಸಿಂದಗಿ, ಕಲಕೇರಿ, ಅಸ್ಕಿ ಮೂಲಕ ಪ್ರವೇಶ ಸಾಧ್ಯತೆ ಇದೆ. ಯಾಳವಾರ ಗ್ರಾಮದ ಬಳಿ ಇದೇ ಡೋಣಿ ನದಿಯಲ್ಲಿ ಕ್ರೂಸರ್ ಒಂದು ಸಿಲುಕಿಕೊಂಡಿತ್ತು. ತಿಕೋಟಾ ತಾಲೂಕು ಸೇರಿದಂತೆ ತಾಳಿಕೋಟೆವರೆಗೆ ಕೆಲ ಗ್ರಾಮಗಳಿಗೆ ಡೋಣಿ ನದಿ ನೀರು ನುಗ್ಗಿತ್ತು. ಅಪಾರ ಪ್ರಮಾಣದ ಬೆಳೆ ಹಾನಿ ಸಹ ಸಂಭವಿಸಿತ್ತು.
ಕಳೆದ ಕೆಲ ದಿನಗಳ ಹಿಂದಷ್ಟೇ, ಜಿಲ್ಲಾ ಉಸ್ತುವಾರಿ ಸಚಿವ ದಿ.ಉಮೇಶ ಕತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ , ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಪರಿಶೀಲನೆ ನಡೆಸಿದ್ದರು. ಮಾಜಿ ಶಾಸಕ, ಸಚಿವ, ಸಿ.ಎಸ್.ನಾಡಗೌಡ ಸಹ ಪರಿಶೀಲಿಸಿ, ಆಕ್ಷೇಪ ವ್ಯಕ್ತಪಡಿಸಿದ್ದರು. ಕೇಂದ್ರ ಅಧ್ಯಯನ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಾಳಿಕೋಟೆ ತಲುಪಬೇಕೆಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಪ್ರಸ್ತುತ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ | Rain News | ಮಳೆಯಬ್ಬರಕ್ಕೆ ವಿಜಯಪುರ ತತ್ತರ; ರಸ್ತೆಗಳೆಲ್ಲ ನೀರು, ಸಂಕಷ್ಟದಲ್ಲಿ ನಿವಾಸಿಗಳು