ಚಿತ್ರ, ಬರಹ: ಲಕ್ಷ್ಮೀ ಬಾಗಲಕೋಟಿ, ವಿಜಯಪುರ
ಕಲೆ ಎಲ್ಲರಲ್ಲೂ ಇರುವುದಿಲ್ಲ. ಆದರೆ, ಪ್ರಯತ್ನದಿಂದ ಯಾವುದನ್ನೂ ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ. ಒಂದು ಸಾಮಾನ್ಯ ಶಿಲೆಯನ್ನು ತನ್ನ ಅಪಾರವಾದ ಶ್ರಮ, ನೈಪುಣ್ಯತೆ, ಜಾಣ್ಮೆಯಿಂದ ಶಿಲ್ಪವಾಗಿಸಲು (Idol Creator) ಸಾಧ್ಯವಿದೆ. ಎಲ್ಲೋ ಬಿದ್ದಿರುವ ಕಲ್ಲನ್ನು ಸಾವಿರಾರು ಮಂದಿ ಪೂಜಿಸುವ ಮಹಾ ಮೂರ್ತಿಯಾಗಿ ರೂಪಿಸಲು ಸಾಧ್ಯವಿದೆ (Stone turns Idol here). ಆದರೆ, ಇದಕ್ಕೆ ಎಡೆಬಿಡದ ಧ್ಯಾನ ಬೇಕು, ಮೂರ್ತಿಯ (Stone Idol) ಮೇಲೆ ಮುಂದೆ ಜನರು ಭಕ್ತಿ ಇಡಬೇಕಾದರೆ ಕಲೆಗಾರನಿಗೆ ಶ್ರದ್ಧೆ ಬೇಕು.
ಈ ರೀತಿ ಶಿಲೆಗೆ ಜೀವ ಕೊಡುವ ಸಶಕ್ತ ಕಲಾವಿದರಲ್ಲಿ, ಶ್ರದ್ಧೆಯ ಶಿಲ್ಪಿಗಳಲ್ಲಿ ವಿಜಯಪುರದ, ರೋಣಿಹಾಳ ಗ್ರಾಮದ ದೇವೆಂದ್ರ ಬಡಿಗೇರ ಇವರು ಒಬ್ಬರು.
ನಿಜವೆಂದರೆ ಅವರು ಸಣ್ಣ ವಯಸ್ಸಿನಿಂದ ಬಡಗಿ ವೃತ್ತಿ ಮಾಡಿಕೊಂಡಿದ್ದವರು. ಬಡಗಿಯಾಗಿ ಹಲವು ವಿಸ್ಮಯಗಳನ್ನು ಸೃಷ್ಟಿ ಮಾಡಿದವರು. ಮರದಲ್ಲಿ ಮೂರ್ತಿಗಳನ್ನು ಸೃಷ್ಟಿಸಿ ಅಚ್ಚರಿ ಮೂಡಿಸಿದವರು. ಒಂದು ಮೂರ್ತಿಯ ಆಳ ಅಗಲಗಳನ್ನು ಚೆನ್ನಾಗಿ ತಿಳಿದವರು. ಬಳಿಕ ನಿಧಾನವಾಗಿ ಅವರು ಶಿಲ್ಪ ಕಲೆಯತ್ತ ಹೊರಳಿ ಅಲ್ಲೂ ಅದ್ಭುತಗಳನ್ನು ಸೃಷ್ಟಿಸುತ್ತಿರುವವರು.
ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ದೇವೇಂದ್ರ ಅವರು ಅದನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಚಿತ್ರಕಲೆಯಲ್ಲಿ ಕೋರ್ಸ್ ಮಾಡಿದರು. ಹಳ್ಳಿಯಿಂದ ಬಂದವರು ಮಾತ್ರವಲ್ಲ ಉನ್ನತ ಶಿಕ್ಷಣ ಪಡೆದವರೆಲ್ಲ ಜಾಬ್ ಮಾಡಲು ಪರದಾಡುವ ಈ ಕಾಲದಲ್ಲಿ ಇವರು ಮಾತ್ರ ಹೊಸ ಹೊಸ ಪರಿಕಲ್ಪನೆ, ಅಧ್ಯಯನದ ಮೂಲಕ ವೃತ್ತಿಯಲ್ಲಿ ಮೇಲೆ ಬರುತ್ತಿದ್ದಾರೆ. ಕುಟುಂಬ ವೃತ್ತಿಗೇ ಹೊಸ ಆಯಾಮವನ್ನು ನೀಡಿ ಮುನ್ನಡೆಯುತ್ತಿದ್ದಾರೆ.
ಹಾಗಂತ ಇದ್ಯಾವುದೂ ಅವರ ಪಾಲಿಗೆ ಹೂವಿನ ಹಾಸಿಗೆ ಆಗಿರಲಿಲ್ಲ. ತನ್ನ ಬದುಕು ಇದರಲ್ಲೇ ಎಂದು ದೃಢ ನಿಶ್ಚಯ ಮಾಡಿಕೊಂಡ ಅವರು ವಿಜಯಪುರದಲ್ಲಿ ತಮ್ಮದೇ ಆದ ಒಂದು ಸಣ್ಣ ಅಂಗಡಿ ಆರಂಭಿಸಿದರು. ಆರಂಭದಲ್ಲಿ ಕೊಂಚ ತೊಂದರೆಗಳನ್ನು ಅನುಭವಿಸಿದರು. ಆದರೆ ದೇವೇಂದ್ರ ಆ ತೊಂದರೆಗಳಿಗೆ ಎದೆ ಗುಂದದೆ ಕಷ್ಟಗಳನ್ನು ಎದುರಿಸಿ ಎದ್ದು ನಿಂತರು. ‘ಶ್ರೀ ವಿಶ್ವಕರ್ಮ ಪ್ರಸನ್ನʼ ಹೆಸರಿನಿಂದ ಶುರುವಾದ ಅಂಗಡಿ ಇಂದು ನಾಲ್ಕೈದು ಜನರಿಗೆ ಕೆಲಸ ನೀಡುವ ಮೂಲಕ ಅವರ ಜೀವನಕ್ಕೂ ದಾರಿದೀಪವಾಗಿದೆ.
ದೇವೇಂದ್ರ ಅವರ ಕಲೆಗಾರನ ಕೈ ಚಳಕದಿಂದ ಕಲ್ಲಿಗೆ ಜೀವ ಕಳೆ ಬರುತ್ತಿದೆ. ಇವರು ವಿವಿಧ ರೀತಿಯ ಕಲ್ಲುಗಳನ್ನು ಬಳಸಿ ಮೂರ್ತಿ ತಯಾರಿಸಿ ಮಾರುತ್ತಾರೆ. ವಿಜಯಪುರದ ಸುತ್ತಮುತ್ತಲಿನ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಇವರು ತಯಾರಿಸಿದ ಮೂರ್ತಿಯೇ ಬೇಕು ಎಂಬಷ್ಟು ಡಿಮ್ಯಾಂಡ್ ಇದೆ.
ಇದನ್ನೂ ಓದಿ: Best Food : ವಿದ್ಯಾರ್ಥಿಗಳ ಪಾಲಿನ ಫೈವ್ ಸ್ಟಾರ್ ಹೋಟೆಲ್ ಆದಿತ್ಯ ಟಿಫಿನ್ ಸೆಂಟರ್!; ದೋಸೆಗೆ ಕೇವಲ..
ನಾನಾ ದೇವಿಯರ ಮೂರ್ತಿಗಳು, ಗಣೇಶ ಮೂರ್ತಿ, ಶಿವನ ಮೂರ್ತಿ, ಬಸವ ಮೂರ್ತಿ ಹೀಗೆ ನಾನಾ ತರದ ಮೂರ್ತಿಗಳನ್ನು ತಯಾರಿಸುವ ಕುಶಲ ಕಲೆ ಇವರಿಗೆ ಒಲಿದಿದೆ. ಇವರ ಕೆಲಸ ತುಂಬ ಅಚ್ಚುಕಟ್ಟು ಮತ್ತು ಪರ್ಫೆಕ್ಟು ಎಂಬ ಮಾತು ಇದೆ. ವೃತ್ತಿಯ ಜೋತೆಗೆ ಆಸಕ್ತಿ ಇರುವವರಿಗೆ ಈ ಕಲೆಯನ್ನು ಧಾರೆ ಎರೆಯುವ ಗುಣ ಹೊಂದಿದವರು ದೇವೆಂದ್ರ ಬಡಿಗೇರ. ಹೀಗಾಗಿ ಅವರ ಹಿಂದೆ ಶಿಷ್ಯ ಕೋಟಿಯೂ ಸಿದ್ಧವಾಗುತ್ತಿದೆ.
–