ವಿಜಯಪುರ: ಜಿಲ್ಲೆಯ ಅಭಿವೃದ್ಧಿಗೆ ಕನಸಿನ ಯೋಜನೆ (Dream Project) ಹಾಕಿಕೊಂಡಿದ್ದು, ಅದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸಾರ್ವಜನಿಕರೂ ಇದಕ್ಕೆ ಪೂರಕವಾಗಿ ತಮ್ಮ ಸಲಹೆ- ಸೂಚನೆಗಳನ್ನು ನೀಡಬಹುದಾಗಿದೆ ಎಂದು (Vijayapura News) ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲಾಡಳಿತದಿಂದ ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಜಯಪುರದಲ್ಲಿ ಪಾರಂಪರಿಕ ಸ್ಥಳಗಳ ರಕ್ಷಣೆ, ಪ್ರವಾಸಿ ಸ್ಥಾನಗಳಾಗಿ ಅಭಿವೃದ್ಧಿಪಡಿಸುವುವಿಕೆ ಹಾಗೂ ಯುನಸ್ಕೊ ಹೆರಿಟೇಜ್ ಸೈಟ್‌ನಲ್ಲಿ ಸೇರ್ಪಡೆಗೊಳಿಸಲು ತೆಲಂಗಾಣ ಮಾದರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಐತಿಹಾಸಿಕ ಕೋಟೆ ಗೋಡೆಗಳು ಮತ್ತು ಸುತ್ತಲಿನ ಸ್ಥಳಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನಗರದ ಸಂಚಾರ ದಟ್ಟಣೆ ತಡೆಯಲು ಪ್ಲೈ ಓವರ್ ನಿರ್ಮಾಣ. ಬಸ್ ಸಂಚಾರಕ್ಕೆ ಪ್ರತ್ಯೇಕ ದಾರಿ (ಲೈನ್) ನಿರ್ಮಾಣ ಮಾಡಲಾಗುವುದು, ನಗರದ ಮಾರುಕಟ್ಟೆಯ ದಟ್ಟಣೆಯ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Padma Shri: ಭತ್ತದ ತಳಿಯ ಸಂರಕ್ಷನನ್ನು ಅರಸಿ ಬಂತು ಪದ್ಮಶ್ರೀ ಗೌರವ
ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಾನಾ ಕ್ರೀಡೆಗಳಿಗಾಗಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಸೈಕ್ಲಿಂಗ್ ವೆಲೋಡ್ರಮ್ ಮತ್ತು ಸೈಕ್ಲಿಂಗ್ ಹಾಸ್ಟೆಲ್ ಉನ್ನತೀಕರಣ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಸೈಕ್ಲಿಂಗ್ ಅಕಾಡೆಮಿ ಸ್ಥಾಪಿಸುವುದು, ವಿಮಾನಯಾನ ತರಬೇತಿ ಸಂಸ್ಥೆ ಪ್ರಾರಂಭಿಸುವುದು, ಕೃಷಿ ಕಲ್ಯಾಣ ಅಭಿಯಾನದಡಿ ಕೃಷಿ ಹಾಗೂ ತೋಟಗಾರಿಕೆ ರೈತರಿಗೆ ಉತ್ತೇಜನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಹೈನುಗಾರಿಕೆಗೆ ಉತ್ತೇಜನ ನೀಡಲು ಹೈನುಗಾರಿಕೆ ಸಂಸ್ಥೆ ಪ್ರಾರಂಭಿಸುವುದು. ಸಾರ್ವಜನಿಕ ಶಾಲಾ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು, ಖಾಸಗಿ ಸಹಯೋಗದಲ್ಲಿ ಉತ್ಕೃಷ್ಟ ದರ್ಜೆಯ ಬಿಸಿಯೂಟ ಒದಗಿಸುವುದು, ವಿಜಯಪುರ ನಗರ ಹಾಗೂ ಪಟ್ಟಣಗಳಲ್ಲಿ ಅತ್ಯುತ್ತಮ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು. ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸುಧಾರಣೆಗೆ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳ ಆಧುನೀಕರಣ ಮತ್ತು ಗ್ರಾಮೀಣ ವೈದ್ಯಕೀಯ ಸೇವೆಗೆ ಒತ್ತು. ಆಯುಷ್ ಪದ್ಧತಿ, ನಿಸರ್ಗ ಚಿಕಿತ್ಸೆಗೆ ಪ್ರೋತ್ಸಾಹ ನೀಡಲಾಗುವುದು. ನಗರ ಹಾಗೂ ಪಟ್ಟಣಗಳಲ್ಲಿ ಉಚಿತ ವೈಫೈ ವ್ಯವಸ್ಥೆ ಹಾಗೂ ಕ್ರೀಡಾ ಸೌಲಭ್ಯ ಒದಗಿಸುವ ಯೋಜನೆಯಿದೆ ಎಂದರು.
ಇದನ್ನೂ ಓದಿ: Reliance Jio: 5ಜಿ ತಂತ್ರಜ್ಞಾನದ ಅನುಭವ ಹೆಚ್ಚಿಸಲು ರಿಲಯನ್ಸ್ ಜಿಯೋ- ಒನ್‌ಪ್ಲಸ್ ಇಂಡಿಯಾ ಪಾಲುದಾರಿಕೆ
ಸಮುದಾಯ ರೇಡಿಯೋ ಕೇಂದ್ರಗಳ ಪ್ರಾರಂಭ, ತ್ಯಾಜ್ಯ ಸಂಸ್ಕರಣಾ ಘಟಕಗಳ ಸುಧಾರಣೆ ಮಾಡುವುದು, ಮೀನುಗಾರಿಕೆ ಕಾಲೇಜು ಹಾಗೂ ಬೃಹತ್ ಮೀನು ಸಂಗ್ರಹಾಲಯ ಪ್ರಾರಂಭಿಸುವುದು, ಶತಮಾನದ ಸಂತ ಶ್ರೀ ಸಿದ್ಧೇಶ್ವರ ಶ್ರೀಗಳು ಸದಾ ಇಷ್ಟಪಡುತ್ತಿದ್ದ ಪರಿಸರ, ಪ್ರಕೃತಿ ಕುರಿತಾಗಿ ಅವರ ನೆನೆಪಿನಲ್ಲಿ ವಿಜಯಪುರ, ಮಮದಾಪುರ ಅಥವಾ ಬಾಬಾನಗರಗಳಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಮಾನವ ನಿರ್ಮಿತ ಕಾಡು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಲ್ಲಿಯೇ ವಿಜ್ಞಾನ ಸಂಶೋಧನ ಕೇಂದ್ರ ಪ್ರಾರಂಭಿಸುವ ಉದ್ದೇಶ ಇದೆ ಎಂದು ಸಚಿವರು ತಿಳಿಸಿದರು.
ಜಗತ್ತಿನ ಪ್ರಮುಖ ಕಂಪನಿಗಳಾದ ಎಚ್.ಪಿ., ಲುಲು, ನೆಸ್ಲೆ, ಬಿಎಲ್ ಆಗ್ರೋ, ಎಚ್.ಸಿ.ಎಲ್, ಮುಂತಾದ ಕಂಪನಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜ್ಯಕ್ಕೆ ರೂ. 22 ಸಾವಿರ ಕೋಟಿಗೂ ಹೆಚ್ಚಿನ ಬಂಡವಾಳ ಆಕರ್ಷಿಸಲಾಗಿದೆ.
ಈ ಪೈಕಿ ಲುಲು ಕಂಪನಿ ವಿಜಯಪುರದಲ್ಲಿ ರೂ. 300 ಕೋಟಿ ರೂ. ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣ ಘಟಕವನ್ನು ತೆರೆಯಲು ಒಪ್ಪಿಕೊಂಡಿದೆ. ಅಲ್ಲದೆ, ಉತ್ತರ ಪ್ರದೇಶ ಮೂಲದ ಬಿ.ಎಲ್. ಆಗ್ರೋ ಕಂಪನಿ ಕೂಡ ನಮ್ಮ ಜಿಲ್ಲೆಯಲ್ಲೇ ತನ್ನ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲು ಮುಂದೆ ಬಂದಿದೆ. ಇದರಿಂದಲೂ ನೂರಾರು ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯಾಗಲಿದೆ. ಇವುಗಳಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಿಲ್ಲೆಯಲ್ಲಿ 5000 ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ವಿಜಯಪುರ- ಬೆಂಗಳೂರು ಎಸಿ ಸ್ಲೀಪರ್ ಬಸ್ಸಿಗೆ ಚಾಲನೆ
ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಚಿವ ಎಂ. ಬಿ. ಪಾಟೀಲ ಅವರು, ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ವಿಜಯಪುರ- ಬೆಂಗಳೂರು ಎಸಿ ಸ್ಲೀಪರ್ ಕೋಚ್ ಬಸ್ಸಿಗೆ ಚಾಲನೆ ನೀಡಿದರು.
ಇದನ್ನೂ ಓದಿ: Maruti Fronx : ಮಾರುತಿ ಸುಜುಕಿಯ ಈ ಜನಪ್ರಿಯ ಕಾರು 10 ತಿಂಗಳಲ್ಲೇ 1 ಲಕ್ಷ ಮಾರಾಟ
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ, ಎಸ್ಪಿ ರಿಷಿಕೇಶ ಸೋನಾವಣೆ, ಜಿ. ಪಂ. ಸಿಇಒ ರಿಷಿ ಆನಂದ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.