ಹುಬ್ಬಳ್ಳಿ: ಇಲ್ಲಿನ ಕಂಪ್ಲಿಕೊಪ್ಪ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಪೂಜೆ ಮಾಡುವ ವಿಷಯಕ್ಕೆ ಗಲಾಟೆ ನಡೆದಿದ್ದು, ವಿಷಯ ತಾರಕಕ್ಕೇರಿ ಅರ್ಚಕನನ್ನೇ ಗ್ರಾಮಸ್ಥರು ಥಳಿಸಿರುವ ಘಟನೆ ನಡೆದಿದೆ.
ಪ್ರಕಾಶ್ ಕುಂದಗೋಳಮಠ ಎಂಬುವವರೇ ಥಳಿತಕ್ಕೊಳಗಾದ ಅರ್ಚಕರಾಗಿದ್ದಾರೆ. ಇವರನ್ನು ಗ್ರಾಮಸ್ಥರು ದೇವಸ್ಥಾನದಲ್ಲಿಯೇ ಥಳಿಸಿದ್ದಾರೆ. ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆಯು ಹೊಡೆದಾಟಕ್ಕೆ ತಿರುಗಿದೆ. ಸದ್ಯ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರಕಾಶ್ ಕುಂದಗೋಳಮಠ ಅವರು ಕಳೆದ ಮೂವತ್ತು ವರ್ಷಗಳಿಂದ ಈ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬೇರೆ ಅರ್ಚಕರನ್ನು ನೇಮಿಸಲು ಗ್ರಾಮಸ್ಥರು ಒಮ್ಮತದ ತೀರ್ಮಾನಕ್ಕೆ ಬಂದಿದ್ದರು. ಬಳಿಕ ಈ ಬಗ್ಗೆ ತಮ್ಮ ನಿರ್ಧಾರವನ್ನೂ ಪ್ರಕಟಿಸಿದ್ದರು.
ಇದನ್ನೂ ಓದಿ: Karnataka Election 2023: ಸಚಿವ ಅಶ್ವತ್ಥನಾರಾಯಣ ವರ್ಸಸ್ ಶಾಸಕಿ ಅನಿತಾ ಕುಮಾರಸ್ವಾಮಿ; ಏನಿದು ಅಭಿವೃದ್ಧಿ ಜಟಾಪಟಿ?
ನಾನೇ ಪೂಜೆ ಮಾಡುತ್ತೇನೆ ಎಂದಿದ್ದಕ್ಕೆ ಗಲಾಟೆ
ಗ್ರಾಮಸ್ಥರು ಬೇರೆ ಅರ್ಚಕರನ್ನು ನೇಮಕ ಮಾಡುತ್ತೇವೆ ಎಂದು ನಿರ್ಧಾರ ಪ್ರಕಟಿಸುತ್ತಿದ್ದಂತೆ ತೀವ್ರ ಆಕ್ರೋಶ ಹೊರಹಾಕಿದ ಅರ್ಚಕ ಪ್ರಕಾಶ್, ನಾನೇ ಪೂಜೆ ಮಾಡುತ್ತೇನೆ. ಬೇರೆಯವರನ್ನು ನೇಮಕ ಮಾಡುವುದು ಬೇಡ ಎಂದು ಪಟ್ಟು ಹಿಡಿದರು. ಇದರಿಂದ ಕೆಲಕಾಲ ದೇವಸ್ಥಾನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ವಾಗ್ವಾದ ತಾರಕಕ್ಕೇರಿ ಅರ್ಚಕನನ್ನು ಗ್ರಾಮಸ್ಥರು ಥಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.