ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬ್ಲಡ್ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಉಂಟಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಆಸ್ಪತ್ರೆಗೆ (VIMS Bellary) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾನುವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ವಿಮ್ಸ್ ಬ್ಲಡ್ ಬ್ಯಾಂಕ್ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ವಿಮ್ಸ್ ಇತರ ಕಡೆಗಳಲ್ಲಿ ದಟ್ಟವಾಗಿ ಹೊಗೆ ಆವರಿಸಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಬೆಂಕಿ ಕಾಣಿಸಿಕೊಂಡಿದ್ದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇಲ್ಲಿನ ರೋಗಿಗಳಿಗೆ ೩೦೦ ಪ್ಯಾಕೆಟ್ ರಕ್ತವನ್ನು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಿಂದ ವ್ಯವಸ್ಥೆ ಮಾಡಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿಮ್ಸ್‌ಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ, ರೋಗಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಪಾಲಪಾಟಿ ಅವರು ಭೇಟಿ ನೀಡಿದ್ದರು. ಶೀಘ್ರ ದುರಸ್ತಿ ಕಾರ್ಯ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಮ್ಸ್ ಬ್ಲಡ್ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಇಲ್ಲಿನ ಬ್ಲಡ್ ಪ್ಯಾಕೆಟ್‌ಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿನ ರೋಗಿಗಳಿಗೆ ರಕ್ತದ ಕೊರತೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬೇರೆ ಬ್ಲಡ್ ಬ್ಯಾಂಕ್‌ಗಳಿಂದ ರಕ್ತ ತರಿಸಲು ಸೂಚಿಸಲಾಗಿದೆ.
ಬಿ. ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ
ಇದನ್ನೂ ಓದಿ | Road Accident | ಬಸ್- ಕಾರು ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದವರಿಗೆ ಗಂಭೀರ ಗಾಯ