ಬೆಂಗಳೂರು: ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಬ್ಬರು (Students Fighting) ಕ್ಲಾಸ್ ರೂಂನಲ್ಲಿಯೇ ಕೈ ಕೈ ಮಿಲಾಯಿಸಿದ್ದಾರೆ. ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ವಿಡಿಯೊ ವೈರಲ್ (Viral Video) ಆಗಿದೆ. ವಿದ್ಯಾರ್ಥಿಗಳ ಹೊಡೆದಾಟದ ವಿಡಿಯೊವನ್ನು ನಗರ ಪೊಲೀಸರ (Bengaluru City police) ಸೋಷಿಯಲ್ ಪೇಜ್‌ಗೆ ಟ್ಯಾಗ್ (Social Media) ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.
ಕ್ಲಾಸ್ ರೂಂನಲ್ಲಿ ಲೆಕ್ಚರರ್ ಇದ್ದರೂ ಅವರ ಮುಂದೆಯೇ ಕೈ ಕೈ ಮಿಲಾಯಿಸಿದ್ದು, ಇತರೆ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಇತ್ತ ವಿದ್ಯಾರ್ಥಿಗಳ ಗಲಾಟೆಯನ್ನು ಉಪನ್ಯಾಸಕರು ಬಿಡಿಸಲು ಹೋಗಿದ್ದಾರೆ. ಆದರೆ, ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಆ ಇಬ್ಬರೂ ಇರಲಿಲ್ಲ ಎಂಬುದು ವಿಡಿಯೊದಲ್ಲಿ ಗೊತ್ತಾಗುತ್ತದೆ. ಬಳಿಕ ಉಪನ್ಯಾಸಕರೂ ಸುಮ್ಮನಾಗಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಇತರೆ ವಿದ್ಯಾರ್ಥಿಗಳು ಅವರಿಬ್ಬರನ್ನು ಹಿಡಿದು ಗಲಾಟೆ ಬಿಡಿಸಿದ್ದಾರೆ.
ಇತ್ತ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ವಿಡಿಯೊವನ್ನು ಬಿಸಿಪಿ ಪೊಲೀಸ್ ಪೇಜ್‌ಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಪೊಲೀಸರು ಘಟನೆಯ ವಿವರ ಹಾಗೂ ಘಟನಾ ಸ್ಥಳದ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಲಾಟೆ ನಡೆದಿದೆ ಎಂಬ ಉತ್ತರ ದೊರೆತಿದೆ ಎಂದು ಹೇಳಲಾಗುತ್ತಿದೆ.
ಬಾಡಿಗೆ ಫ್ಲ್ಯಾಟ್‌ನಲ್ಲಿ ಬ್ಯಾಚುಲರ್‌ಗಳಿಗೆ ಬೆಂಗಳೂರಿನಲ್ಲಿ ಹೊಸ ರೂಲ್ಸ್!
ಬೆಂಗಳೂರು: ನೀವು ಬ್ಯಾಚುಲರಾ? ಅವಿವಾಹಿತ ಯುವತಿಯಾ? ಬೆಂಗಳೂರಿನ ಯಾವುದಾದರೂ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡು ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆ (Bachelors flat Rules) ಮಾಡಿಕೊಂಡಿದ್ದೀರಾ? ಹಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಅದಕ್ಕಿಂತಲೂ ಮುಖ್ಯವಾಗಿ ನಿಮ್ಮ ಫ್ಲ್ಯಾಟ್ ನಿಮ್ಮ ಫ್ರೆಂಡ್ಸ್ ಯಾರಾದರೂ ರಾತ್ರಿ ಬಂದು ಉಳಿದುಕೊಳ್ಳುತ್ತಾರಾ? ಹಾಗಿದ್ದರೆ ಇದನ್ನು ಕಡ್ಡಾಯವಾಗಿ ಓದಲೇಬೇಕು. ನೀವು ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕ/ಯುವತಿಯರ ಅಪ್ಪ-ಅಮ್ಮನಾ? ಪೋಷಕರಾ? ನೀವೂ ಇದರ ಮೇಲೊಮ್ಮೆ ಕಣ್ಣಾಡಿಸಲೇಬೇಕು!
ವಿಷಯ ಏನು ಅಂದರೆ, ಬೆಂಗಳೂರಿನಲ್ಲಿ ಫ್ಲ್ಯಾಟ್‌ನಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿರುವ ಅವಿವಾಹಿತ ಹುಡುಗ/ಹುಡುಗಿಯರು ಇನ್ನು ಮುಂದೆ ರಾತ್ರಿಯ ಹೊತ್ತು ತಮ್ಮ ಗೆಳೆಯ/ಗೆಳತಿಯರನ್ನು ಮನೆಗೆ ಕರೆದುಕೊಂಡು ಬರುವಂತಿಲ್ಲ. ರಾತ್ರಿ ಅವರನ್ನು ತಮ್ಮ ಮನೆಗಳಲ್ಲಿ ಉಳಿಸಿಕೊಳ್ಳುವಂತಿಲ್ಲ. ಏನಿದ್ದರೂ ರಾತ್ರಿ 10 ಗಂಟೆಗೆ ಅವರನ್ನು ಹೊರಗೆ ಕಳುಹಿಸಲೇಬೇಕು.
ಹೀಗೊಂದು ಹೊಸ ನಿಯಮವನ್ನು ಅಪಾರ್ಟ್‌ಮೆಂಟ್ ನಿವಾಸಿಗಳ ಅಸೋಸಿಯೇಷನ್ ಜಾರಿಗೆ ತಂದಿದೆ. ಮಾರತ್ತಹಳ್ಳಿಯ ಒಂದು ಫ್ಲ್ಯಾಟ್‌ನಲ್ಲಿ ಜಾರಿಗೆ ಬಂದಿರುವ ನಿಯಮ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿರುವ ನಡುವೆಯೇ ಇನ್ನೂ ಹಲವು ಫ್ಲ್ಯಾಟ್‌ಗಳು ಇದನ್ನು ಅನ್ವಯಗೊಳಿಸುವ ಚರ್ಚೆಯನ್ನೂ ನಡೆಸಿವೆ.
ಈ ನಿಯಮ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಯುವಜನರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರ್ ಈಸ್ ನಾಟ್ ಫಾರ್ ಬ್ಯಾಚುಲರ್ಸ್ ಎಂಬ ಶೀರ್ಷಿಕೆಯಡಿ ಕಮೆಂಟ್ ಮಾಡುತ್ತಾ ನೆಟ್ಟಿಗರು ಕೆರಳಿ ನಿಂತಿದ್ದಾರೆ.
ಏನಿದೆ ನಿಯಮದಲ್ಲಿ?
ಬೆಂಗಳೂರಿನ ಮಾರತಹಳ್ಳಿ ಸಮೀಪದ ಕುಂದನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ.
- ಅವಿವಾಹಿತ ಯುವಕ ಅಥವಾ ಯುವತಿ ವಾಸಿಸುವ ಬಾಡಿಗೆ ಫ್ಲ್ಯಾಟ್‌ಗೆ ರಾತ್ರಿ 10ರ ನಂತರ ಯಾರೂ ಬರುವಂತಿಲ್ಲ.
- ಹಗಲು ಹೊತ್ತಿನಲ್ಲಿ ಬಂದವರು ಇದ್ದರೂ ಅವರು ರಾತ್ರಿ ಈ ಮನೆಯಲ್ಲಿ ತಂಗುವಂತಿಲ್ಲ.
- ಒಂದು ವೇಳೆ ಅನಿವಾರ್ಯವಾಗಿ ತಂಗಲೇಬೇಕು ಎಂದಾದರೆ ಫ್ಲ್ಯಾಟ್‌ನ ಮಾಲೀಕರು ಇಲ್ಲವೇ ಅಸೋಸಿಯೇಷನ್‌ನಿಂದ ಪೂರ್ವಾನುಮತಿ ಪಡೆಯಬೇಕು. ಯಾರು ತಂಗುತ್ತಾರೋ ಅವರ ಐಡಿ ಕಾರ್ಡ್ ನೀಡಬೇಕು.
- ಒಂದೊಮ್ಮೆ ಈ ನಿಯಮವನ್ನು ಮುರಿದರೆ 1000 ರೂ. ದಂಡ ವಿಧಿಸಲಾಗುತ್ತದೆ. ಅಥವಾ ಬಾಡಿಗೆ ಮನೆಯಿಂದ ಹೊರಹಾಕಲೂಬಹುದು.
- ರಾತ್ರಿ ಹತ್ತು ಗಂಟೆಯ ನಂತರ ಯಾರೂ ದೊಡ್ಡದಾಗಿ ಮ್ಯೂಸಿಕ್ ಹಾಕುವಂತಿಲ್ಲ.
- ತಡರಾತ್ರಿಯ ಪಾರ್ಟಿಗಳಿಗಂತೂ ಅವಕಾಶವೇ ಇಲ್ಲ.
- ರಾತ್ರಿ 10 ಗಂಟೆಯ ನಂತರ ಬಾಲ್ಕನಿಯಲ್ಲಿ ನಿಂತುಕೊಂಡು, ಕಾರಿಡಾಡಿನಲ್ಲಿ ಓಡಾಡಿಕೊಂಡು ಜೋರಾಗಿ ಫೋನ್‌ನಲ್ಲಿ ಮಾತನಾಡುವಂತಿಲ್ಲ.
ಯುವಜನರಿಂದ ತೀವ್ರ ಆಕ್ರೋಶ
ಈ ನಿಯಮಾವಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಾವು ಒಮ್ಮೆ ಬಾಡಿಗೆ ಮನೆಯನ್ನು ಪಡೆದುಕೊಂಡ ಮೇಲೆ ಒಪ್ಪಂದದ ಪ್ರಕಾರ ಆ ಮನೆ ನಮ್ಮದೆ. ಯಾರು ಬರಬೇಕು, ಯಾರು ಹೋಗಬೇಕು ಎಂದು ನೀವು ನಿರ್ಧರಿಸುವಂತಿಲ್ಲ. ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಬಾಲ್ಕನಿಯಲ್ಲಿ ಏನು ಮಾಡಬೇಕು ಎನ್ನುವುದು ಅವರವರಿಗೆ ಬಿಟ್ಟದ್ದು ಎಂದು ಒಬ್ಬರು ಕಿಡಿಕಾರಿದ್ದಾರೆ.
ಈ ನಿಯಮ ಬ್ಯಾಚುಲರ್‌ಗಳನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಳ್ಳುತ್ತದೆ. ಹಾಸ್ಟೆಲ್‌ಗಳಿಗಿಂತಲೂ ಕೆಟ್ಟದಾದ ನಿಯಮ ಇದು. ಯಾರೂ ಬರಬಾರದು, ಫೋನ್ ಮಾಡಬಾರದು ಎನ್ನುವುದು ಯಾವ ನಿಯಮ ಎಂದು ಸಿಟ್ಟಿಗೆದ್ದಿದ್ದಾರೆ.
ಆದರೆ, ಕೆಲವರು ನಾಗರಿಕ ಸಮಾಜದಲ್ಲಿ ಇಂಥ ಕೆಲವು ನಿಯಮಾವಳಿಗಳ ಅವಶ್ಯಕತೆಯೂ ಇದೆ ಎಂದಿದ್ದಾರೆ. ರಾತ್ರಿ ಲೌಡ್ ಮ್ಯೂಸಿಕ್ ಹಾಕಿಕೊಂಡು ಕುಣಿಯುವುದನ್ನು ತಡೆಯುವುದು ಒಳ್ಳೆಯದು ಎಂದಿದ್ದಾರೆ. ಕೆಲವರು ಅಂಕಲ್‌ಗಳು ಈ ದೇಶವನ್ನು ಮುನ್ನಡೆಸಿದರೆ ಇಂಥ ರೂಲ್ಸ್‌ಗಳು ಬರುತ್ತವೆ ಎನ್ನುತ್ತಾರೆ.
ಯಾಕೆ ಇಂಥ ನಿಯಮ ಬಂತು?
ಬ್ಯಾಚುಲರ್ ಯುವಕ/ಯುವತಿಯರು ನಡೆದುಕೊಳ್ಳುವ ರೀತಿಗಳು ಕೆಲವೊಂದು ಫ್ಲ್ಯಾಟ್‌ಗಳಲ್ಲಿ ಇಂಥ ನಿಯಮ ಜಾರಿಗೆ ಕಾರಣವಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಕೆಲವು ಯುವಕರು ರಾತ್ರಿಯ ಹೊತ್ತು ತಮ್ಮ ಫ್ಲ್ಯಾಟ್‌ಗಳಿಗೆ ಹುಡುಗಿಯರನ್ನು ಕರೆದುಕೊಂಡು ಬರುವುದು, ರಾತ್ರಿ ಪೂರ್ತಿ ಅಲ್ಲೇ ಉಳಿಯುವುದು ಮೊದಲಾದ ಘಟನೆಗಳು ನಡೆಯುತ್ತಿವೆ ಎನ್ನಲಾಗಿದೆ. ಕೆಲವು ಹುಡುಗಿಯರೇ ಇರುವ ಫ್ಲ್ಯಾಟ್‌ಗೆ ಹುಡುಗರನ್ನೂ ಕರೆಸಿಕೊಳ್ಳಲಾಗುತ್ತಿದೆ. ಸ್ನೇಹಿತರು ಎಂಬ ನೆಲೆಯಲ್ಲಿ ಇದು ನಡೆಯುತ್ತದೆ. ಆದರೆ, ಒಳಗೇನು ನಡೆಯುತ್ತದೆ ಎನ್ನುವುದನ್ನು ಯಾರು ನೋಡುತ್ತಾರೆ ಎನ್ನುವುದು ಪ್ರಶ್ನೆ. ಅಪಾರ್ಟ್‌ಮೆಂಟ್‌ಗಳು ಎಂದರೆ ಕುಟುಂಬಿಕರು, ಫ್ಯಾಮಿಲಿಗಳು ವಾಸ ಮಾಡುವ ಜಾಗ ಎಂದೇ ಗುರುತಿಸಲ್ಪಟ್ಟಿವೆ. ಹೀಗಾಗಿ ಕೆಲವೊಂದು ನಿಯಮಗಳನ್ನು ಜಾರಿ ಮಾಡುವುದು ಅನಿವಾರ್ಯ ಎನ್ನುವ ವಾದವೂ ಇದೆ.
ಒಂದೊಮ್ಮೆ ಯಾರಾದರೂ ಅನಿವಾರ್ಯವಾಗಿ ಉಳಿಯಬೇಕು ಎಂದಾದರೆ ನಿಯಮ ಪ್ರಕಾರವೇ ಅವಕಾಶ ಮಾಡಿಕೊಡಲಾಗಿರುವುದರಿಂದ ಬಂದವರು ಸಹಜ ಅತಿಥಿಗಳಾಗಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವ ವಾದವೂ ಇದೆ.
ಇದನ್ನೂ ಓದಿ: Bengaluru karaga 2023: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ; ಚುನಾವಣೆ ನೀತಿ ಸಂಹಿತೆಯ ಎಫೆಕ್ಟ್ ಏನು?
ಅಂತೂ ಬೆಂಗಳೂರಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಆರಂಭಗೊಂಡಿರುವ ಹೊಸ ನಿಯಮ ಅಲ್ಲಿಗೆ ಸೀಮಿತವಾಗುತ್ತದಾ? ಬೇರೆ ಕಡೆಗೂ ವಿಸ್ತರಿಸುತ್ತದಾ ಎಂದು ಕಾದು ನೋಡಬೇಕಾಗಿದೆ.