ಬೆಂಗಳೂರು: ಯುವಾ ಬ್ರಿಗೇಡ್ (Yuva Brigade) ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ (Sodari Nivedita Pratishthana) ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ದಿನದಂದು (Independence Day 2023) ಆಚರಿಸಿಕೊಂಡು ಬರಲಾಗುತ್ತಿರುವ “ಸ್ವಾತಂತ್ರ್ಯ ಶ್ರಾವಣ” ಕಾರ್ಯಕ್ರಮವನ್ನು ಈ ಬಾರಿ “ವಿಶ್ವಗುರು ಭಾರತ” (Vishbaguru Bharata) ಪರಿಕಲ್ಪನೆಯಡಿ ಆಗಸ್ಟ್ 15ರಂದು ಆಚರಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಒಂದು ದಿನದ ‘Spirit of Freedom’ ಎಂಬ ಹೆಸರಿನಿಂದ ಪ್ರಾರಂಭವಾದ ಈ ಸಂಭ್ರಮವು ನಂತರ ಎರಡು ದಿನಗಳ ‘ಸ್ವಾತಂತ್ರ್ಯ ಶ್ರಾವಣ’ (Swatantrya Shravana) ಎಂಬ ಕಾರ್ಯಕ್ರಮವಾಗಿ ಆಚರಿಸಲ್ಪಟ್ಟಿತು. ಬಳಿಕ ಈ ಕಾರ್ಯಕ್ರಮವನ್ನು ಮೂರು ದಿನಗಳ ಉತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಪ್ರತಿ ವರ್ಷವೂ ಒಂದೊಂದು ಧ್ಯೇಯ/ಸಂಕಲ್ಪ (Theme) ದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಯುವಾ ಬ್ರಿಗೇಡ್ ಹೇಳಿದೆ.
ಇದನ್ನೂ ಓದಿ: PM Modi France Visit: ಪ್ಯಾರಿಸ್‌ಗೆ ಬಂದಿಳಿದ ಮೋದಿ, ಭವ್ಯ ಸ್ವಾಗತ ನೀಡಿದ ಫ್ರೆಂಚ್ ಪ್ರಧಾನಿ
ಹುಬ್ಬಳ್ಳಿಯಲ್ಲಿ ನಡೆದಿತ್ತು ಮೊದಲ ಕಾರ್ಯಕ್ರಮ
ಹುಬ್ಬಳ್ಳಿಯಲ್ಲಿ “ಸ್ವಾತಂತ್ರ್ಯ ಶ್ರಾವಣ”ವನ್ನು ಮೊದಲ ಬಾರಿಗೆ ನಡೆಸಲಾಗಿತ್ತು. ಆಗ 1000, 500 ರೂಪಾಯಿ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದರೆ, ಜತೆಗೆ ಏಕ ರೂಪದ ಟ್ಯಾಕ್ಸ್ (ಈಗ GST ಎನ್ನಬಹುದು) ಜಾರಿಗೆ ತಂದರೆ ಕಪ್ಪು ಹಣವನ್ನು ನಿಯಂತ್ರಿಸಬಹುದು ಎಂದು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಅರ್ಥಕ್ರಾಂತಿ’ ಕಲ್ಪನೆಯೊಂದಿಗೆ ಆಚರಿಸಲಾಗಿತ್ತು. ಇದಾದ ಕೆಲವು ವರ್ಷದಲ್ಲಿ ಮೋದಿಯವರ ನೇತೃತ್ವದಲ್ಲಿ ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ (Demonetisation) ನಿರ್ಧಾರವಾಯಿತು ಎಂದು ಯುವಾಬ್ರಿಗೇಡ್ ಪ್ರಕಟಣೆಯಲ್ಲಿ ತಿಳಿಸಿದೆ.
2016ರಲ್ಲಿ “ಸ್ವಾತಂತ್ರ್ಯ ತಿಲಕ”
“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ಪಡೆಯುತ್ತೇನೆ” ಎಂಬ ಪಂಜಾಬಿನ ಕೇಸರಿ ಬಾಲಗಂಗಾಧರ ತಿಲಕರ ಸಿಂಹವಾಣಿಗೆ 2016ಕ್ಕೆ 100 ವರ್ಷ ತುಂಬಿತ್ತು. ಹಾಗಾಗಿ 2016ರ ಸ್ವಾತಂತ್ರ್ಯದ ಶ್ರಾವಣವನ್ನು “ಸ್ವಾತಂತ್ರ್ಯ ತಿಲಕ” ಎಂಬ ಶೀರ್ಷಿಕೆಯೊಂದಿಗೆ ಆಚರಿಸಿದ್ದೆವು. ರಾಜ್ಯಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮರಾದ ಸೈನಿಕರ ಊರಿನಿಂದ, ಅವರ ಸಮಾಧಿಯ ಸ್ಥಳದಿಂದ ಮೃತ್ತಿಕೆಯನ್ನು ಸಂಗ್ರಹಿಸಿ ಅದನ್ನು ತಿಲಕವಾಗಿ ಹಣೆಗೆ ಹಚ್ಚಿಕೊಂಡು ಹೆಮ್ಮೆಪಟ್ಟಿದ್ದೆವು. ಈ ಸಂಭ್ರಮವೆಲ್ಲ ನಡೆದಿದ್ದು ಕೆರೆಮನೆ ಶಂಭು ಹೆಗಡೆಯವರ ಊರಾದ ಹೊನ್ನಾವರದಲ್ಲಿ ಎಂದು ಯುವಾಬ್ರಿಗೇಡ್ ಮಾಹಿತಿ ನೀಡಿದೆ.
ಒಂದು ವರ್ಷ ದಕ್ಷಿಣ ಕರ್ನಾಟಕದಲ್ಲಿ ನಡೆದರೆ ಮತ್ತೊಮ್ಮೆ ಉತ್ತರ ಕರ್ನಾಟಕದಲ್ಲಿ ಸ್ವಾತಂತ್ರ್ಯ ಶ್ರಾವಣ ನಡೆಯಬೇಕು ಎಂಬುದು ನಮ್ಮ ಅಲಿಖಿತ ನಿಯಮ. ಹಾಗಾಗಿ ಒಮ್ಮೆ ಸ್ವಾತಂತ್ರ್ಯ ಹಬ್ಬಕ್ಕೆ ಕೊಪ್ಪಳದ ಹನುಮನ ಜನ್ಮಸ್ಥಳ ಅಂಜನಾದ್ರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹನುಮನ ನಾಡಿನಿಂದ “ರಾಮರಾಜ್ಯ ಭಾರತ”ದ ಸಂಕಲ್ಪ ಮಾಡಿ ಅಯೋಧ್ಯೆಯಲ್ಲಿ ಮತ್ತೆ ಭವ್ಯ ರಾಮ ಮಂದಿರ ನಿರ್ಮಾಣವಾಗಲೆಂದು ಪ್ರಾರ್ಥಿಸಿ ಈಗಿನ ವಿಜಯನಗರದ ಅರಸರ ರಾಜಮಾತೆಯವರ ಕೈಯಲ್ಲಿ ಧ್ವಜಾರೋಹಣವನ್ನು ಆಯೋಜಿಸಿದ್ದೆವು. ಇದಾದ ಕೆಲವು ತಿಂಗಳಲ್ಲೇ ನ್ಯಾಯಾಲಯದ ಐತಿಹಾಸಿಕ ತೀರ್ಪು ರಾಮ ಮಂದಿರದ ಪರ ಬಂದು ಭವ್ಯ ರಾಮಮಂದಿರಕ್ಕೆ ಅಸ್ತಿಭಾರ ಹಾಕಲಾಯಿತು.
ಮೈಸೂರಿನ ಸುತ್ತೂರು ಮಠದಲ್ಲಿ ನಡೆದ 2021ರ ಸ್ವಾತಂತ್ರ್ಯ ಶ್ರಾವಣ ಅದ್ಧೂರಿಯಾಗಿ ನಡೆಯಿತು. ಆ ಬಾರಿ ‘ಜೈ ಭಾರತ ಜನನಿಯ ತನುಜಾತೆ’ ಎಂಬ ಹೆಸರಿನಲ್ಲಿ ಆಚರಿಸಿದೆವು. ಈ ಕಾರ್ಯಕ್ರಮದಲ್ಲಿ ಖ್ಯಾತ ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ, ಸನಾದಿ ಅಪ್ಪಣ್ಣನವರ ಕುಟುಂಬಸ್ಥರು, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವಿರುವ ಹಲಗಲಿ ಬೇಡರ ವಂಶದವರೂ ಭಾಗವಹಿಸಿದ್ದರು.
ಕಳೆದ ವರ್ಷದ ಸ್ವಾತಂತ್ರ್ಯದ ಸಡಗರವನ್ನು ಕರ್ನಾಟಕದ ಕಿರೀಟ ಬೀದರ್‌ನ ಜಯಸಿಂಹ ನಗರದಲ್ಲಿ ಸ್ವಾಭಿಮಾನದ ಸುಂದರಕಾಂಡ ಎಂಬ ಧ್ಯೇಯದೊಂದಿಗೆ ಆಚರಿಸಿದ್ದೇವೆ. ಕರ್ನಾಟಕದ ಯಾವ ಭಾಗವೂ ನಿರ್ಲಕ್ಷ್ಯಗೊಳ್ಳಬಾರದು ಎಂಬ ಉದ್ದೇಶ ಹೊಂದಿತ್ತು. ಅಷ್ಟೇ ಅಲ್ಲ ಈ ಕಾರಣದಿಂದ ಹೈದ್ರಾಬಾದ್ ನಿಜಾಮನ ದುರಾಡಿಳತದ ವಿರುದ್ಧದ ಕಲ್ಯಾಣ ಕರ್ನಾಟಕದ ವಿಮೋಚನಾ ಹೋರಾಟವನ್ನು ನೆನೆಯುವಂತಾಯ್ತು. ಜೀವಂತ ಭಾರತ ಮಾತೆಯನ್ನು ರಥದ ರೂಪದಲ್ಲಿ ಮೆರವಣಿಗೆ ಮಾಡಿದ್ದೂ ನಿಜಕ್ಕೂ ಅವಿಸ್ಮರಣೀಯ ಎಂದು ಯುವಾಬ್ರಿಗೇಡ್ ಹೇಳಿದೆ.
ಕೊರೊನಾ ಕಾಲದಲ್ಲಿ ಸೇವೆ
ಇವೆಲ್ಲದರ ನಡುವೆ ಎರಡು ಬಾರಿ ಸ್ವಾತಂತ್ರ್ಯ ಶ್ರಾವಣವನ್ನು ತಪ್ಪಿಸಿಕೊಂಡಿದ್ದೇವೆ. ಒಮ್ಮೆ ಅನಿವಾರ್ಯವಾಗಿ ಕರಾಳ ಕೊರೊನಾ ಸಮಯದಲ್ಲಿ. ಮತ್ತೊಮ್ಮೆ ಉತ್ತರ ಕರ್ನಾಟಕದ ಭೀಕರ ಪ್ರವಾಹದ ಸಂದರ್ಭದಲ್ಲಿ. ರಾಜ್ಯದ ಒಂದು ಭಾಗವೇ ನೀರಲ್ಲಿ ಮುಳುಗಿರುವಾಗ ಇದು ಸಂಭ್ರಮದ ಸಮಯವಲ್ಲ ಸಹಾಯದ ಸಮಯವೆಂದು ನಿರ್ಧರಿಸಿ ಎಲ್ಲ ಕಾರ್ಯಕರ್ತರು ಪ್ರವಾಹ ಪೀಡಿತ ಪ್ರದೇಶಗಳ ಶಾಲೆಗಳನ್ನು, ದೇವಾಲಯಗಳನ್ನು ಸ್ಬಚ್ಛತೆ ಮಾಡಿ ಶಾಲೆಗಳ ಧ್ವಜಾರೋಹಣದಲ್ಲಿ ಪಾಲ್ಗೊಂಡು ಆಚರಿಸಿದ್ದೆವು.
ಇದನ್ನೂ ಓದಿ: How To Become Rich: ಸುಲಭವಾಗಿ ಶ್ರೀಮಂತರಾಗಿ, ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ?
ಈ ಬಾರಿಯ ಸ್ವಾತಂತ್ರ್ಯ ಶ್ರಾವಣದ ಸಂಕಲ್ಪ ‘ವಿಶ್ವಗುರು ಭಾರತ’. ಜಾಗತಿಕ ಮಟ್ಟದಲ್ಲಿ ಮತ್ತೆ ಛಾಪು ಮೂಡಿಸುತ್ತಿರುವ ನವಭಾರತದ ಬಗ್ಗೆ ಹೆಮ್ಮೆಪಡುತ್ತಾ, ಇತಿಹಾಸವನ್ನು ಮೆಲುಕು ಹಾಕುತ್ತಾ, ಭವಿಷ್ಯದ ಭಾರತಕ್ಕೆ ತಯಾರಾಗುವ ಕಲ್ಪನೆ ಹೊಂದಿದ್ದೇವೆ. ಪ್ರಪಂಚದ ವಿವಿಧ ಭಾಗದಲ್ಲಿ ಕರ್ನಾಟಕ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿರುವ ನೀವೂ ಅಂದು ನಮ್ಮೊಡನೆ ಇರಬೇಕೆಂಬುದು ನಮ್ಮ ಅಪೇಕ್ಷೆ ಎಂದು ಯುವಾಬ್ರಿಗೇಡ್ ಕರೆ ನೀಡಿದೆ.