ಬೆಂಗಳೂರು: ಕುಂದಾಪುರದಲ್ಲಿ ಎಷ್ಟು ಸೊಬಗಿದೆಯೋ ಅಷ್ಟೇ ಸೊಬಗಿನ ಸೊಗಡು ಆ ಭಾಷೆಯಲ್ಲೂ ಇದೆ. ಕುಂದಾಪುರ ಭಾಷೆ ಬದುಕನ್ನು ಪ್ರಚುರಪಡಿಸಲು ವಿಶ್ವಕುಂದಾಪ್ರ ಕನ್ನಡ ದಿನವನ್ನು ಗುರುವಾರ (ಜುಲೈ ೨೮) ಅದ್ಧೂರಿಯಾಗಿ ನಡೆಯಿತು.
ಆಸಾಡಿ ಅಮವಾಸ್ಯೆ ಪ್ರಯುಕ್ತ ಬೆಂಗಳೂರಿನ ವಿಜಯ ನಗರದ ಬಂಟರ ಸಂಘದ ಸಭಾಭವನದಲ್ಲಿ ವಿಶ್ವ ಕುಂದಾಪ್ರ ದಿನವನ್ನು ಆಚರಿಸಲಾಗಿದ್ದು, ಹಲವು ಕಾರ್ಯಕ್ರಮಗಳು, ಕುಂದಾಪುರದ ಸ್ಥಳೀಯತೆಯ ಸೊಬಗನ್ನು ಅನಾವರಣಗೊಳಿಸಿತು.
ಕುಂದಾಪ್ರ ಕನ್ನಡ ಗೀತೆಯನ್ನು ಯುವ ಗಾಯಕಿ ಸಾನ್ವಿ ಶೆಟ್ಟಿ ಹಾಡಿ ಜನರನ್ನು ರಂಜಿಸಿದರು. ಚೇತನ್ ನೈಲಾಡಿ ನೇತೃತ್ವದಲ್ಲಿ “ಹೆಂಗಸರ ಪಂಚಾಯ್ತಿ” ಕಾರ್ಯಕ್ರಮದ ಮೂಲಕ ಸಂಸ್ಕೃತಿ ಬಿಂಬಿಸುತ್ತಾ ಹಾಸ್ಯದ ಮೂಲಕ ಭಾಷಿ, ಬದ್ಕನ್ನು ತೋರಿಸಿಕೊಟ್ಟರು. ಕುಂದಾಪ್ರ ಕನ್ನಡದ ರಾಯಭಾರಿ ಎಂದೇ ಖ್ಯಾತಿಯಾಗಿರುವ ಮನು ಹಂದಾಡಿ ಕುಂದಾಪ್ರ ಭಾಷೆಯಲ್ಲಿ ಹಾಸ್ಯದ ಮೂಲಕವೇ ಭಾಷೆ ಮಹತ್ವ ಸಾರಿದರು. ತಮ್ಮ ಮಾತಿನ ಕೊನೆಯವರೆಗೂ ಪ್ರೇಕ್ಷಕರನ್ನು ನೆಗೆಗಡಲಲ್ಲಿ ತೇಲಿಸಿದರು.
“ಕುಂದಾಪ್ರ ಕಟ್ಕಟ್ಲೆ” ಕಾರ್ಯಕ್ರಮದ ಮೂಲಕ ಈ ಭಾಗದ ಮಹತ್ವದ ಸಂಸ್ಕೃತಿಯನ್ನು ಪರಿಚಯಿಸಲಾಯಿತು. ಬೆಂಗಳೂರಿನ ಹಲವರಿಗೆ ಕುಂದಾಪುರ ವೈಶಿಷ್ಟ್ಯ ವಿಭಿನ್ನ ಹಬ್ಬದ ಬಗೆಗಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನವರಾತ್ರಿಯ ಸಮಯದಲ್ಲಿನ ಕಟ್ಟೆ ಪೂಜೆ, ಹುಲಿ ವೇಷ ಆರ್ಭಟವನ್ನು ಪರಿಚಯಿಸಲಾಯಿತು. ಬಲೀಂದ್ರ ಪೂಜೆಯ ಮೌಲ್ಯವನ್ನು ಕಾರ್ಯಕ್ರಮದ ಮೂಲಕ ತಿಳಿಸಲಾಯಿತು. ಇದೀಗ ವಿರಳವಾಗಿ ಕಾಣಸಿಗುವ ವಸಂತ ಕುಣಿತದ ಹೌದರಾಯನ ವಾಲಗದ ಕುಣಿತವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಹಾಗೇ ಭಜನಾ ಕುಣಿತವನ್ನು ಪ್ರದರ್ಶಿಸಿ ಭಕ್ತಿ ಭಾವ ಮೆರೆಯಲಾಯಿತು.
ಯಕ್ಷಗಾನ ಅಂದರೆ ಕರಾವಳಿ ಭಾಗದಲ್ಲಿ ಆರಾಧಿಸಿ ಪೂಜಿಸುವವರಿದ್ದಾರೆ. ವಿಶ್ವಕುಂದಾಪ್ರ ದಿನದ ವಿಶೇಷ ಸಂದರ್ಭದಲ್ಲಿ ವೀರ ಅಭಿಮನ್ಯು ಕಾಳಗದ ಯಕ್ಷಗಾನದಲ್ಲಿ ಅಭಿಮನ್ಯುನನ್ನು ಯುದ್ದಭೂಮಿಗೆ ಸುಭದ್ರೆಯ ನೋವಿನಿಂದಲೇ ಕಳಿಸಿಕೊಡುವ ಸಂದರ್ಭದ ಯಕ್ಷಗಾನ ತುಣುಕನ್ನು ಪ್ರದರ್ಶನ ಮಾಡಲಾಯಿತು.
ಇದನ್ನೂ ಓದಿ | Modi in Nepal: ಬುದ್ಧನ ಜನ್ಮಸ್ಥಾನದಲ್ಲಿ ಮೋದಿ, ಸಂಸ್ಕೃತಿ, ಪರಂಪರೆ ಕೇಂದ್ರಕ್ಕೆ ಶಿಲಾನ್ಯಾಸ
ವಿಶ್ವ ಕುಂದಾಪ್ರ ದಿನ ಪ್ರಯುಕ್ತ ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. “ವೈಶಿಷ್ಟ್ಯಪೂರ್ಣ ಬದುಕು, ವಿಶಿಷ್ಟ ಭಾಷಾಶೈಲಿ ಹೊಂದಿರುವ ಕುಂದಾಪುರ ಈ ನೆಲದ ಬಹುತ್ವ ಸಂಸ್ಕೃತಿಯ ದ್ಯೋತಕ. ಇಲ್ಲಿನ ಭಾಷೆ ಮತ್ತು ಬದುಕನ್ನು ಜಗತ್ತಿನೆದುರು ತೆರೆದಿಡುವ ಪ್ರಯತ್ನವಾಗಿ ಪ್ರತಿ ವರ್ಷ ಅಸಾಡಿ ಅಮವಾಸ್ಯೆಯ ದಿನವನ್ನು ಕುಂದಾಪ್ರ ಕನ್ನಡ ದಿನವಾಗಿ ಆಚರಿಸಲಾಗುತ್ತಿದೆ. ಸಮಸ್ತ ಕುಂದಾಪುರದ ಜನತೆಗೆ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | ಜುಲೈ 28ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಭಾಷಿ ಅಲ್ಲ ಬದ್ಕ್!
“ಕನ್ನಡ ನಾಡಿಗೆ ಕುಂದಾಪುರಿಗರ ಕೊಡುಗೆ ಸಾಕಷ್ಟಿದೆ. ಕೋಟ ಶಿವರಾಮ ಕಾರಂತರು, ಗೋಪಾಲಕೃಷ್ಣ ಅಡಿಗರು ಈ ನೆಲದ ಅನನ್ಯ ಆಸ್ತಿ. ನಾಡಿಗೆ ಹಲವರ ಕೊಡುಗೆ ಅಪಾರ. ತಾಯಿ ಭಾಷೆಯನ್ನು ಮರೆತು ಅನ್ಯಭಾಷೆ ಮೊರೆ ಹೋಗುತ್ತಿರುವ ವೇಳೆಯಲ್ಲಿ ಮಾತೃಭಾಷೆ ಉಳಿವಿಗಾಗಿ ‘ವಿಶ್ವಕುಂದಾಪ್ರ ಕನ್ನಡ ದಿನ’ವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು” ಎಂದು ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.