ಉಡುಪಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂದೂಗಳ ಸರಣಿ ಹತ್ಯೆಗಳನ್ನು ಕಂಡು ಕಳವಳವಾಗಿದೆ. ಇಂತಹ ದುಷ್ಕೃತ್ಯಗಳ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡ ಮತ್ತೆ ಮುಂದುವರಿದಿರುವುದು ಕಳವಳಕಾರಿ ಸಂಗತಿಯಾಗಿದೆ. ಬುಧವಾರ ಇಬ್ಬರು ಸಹೋದರರ ಮೇಲೆ ಪೈಶಾಚಿಕ ದಾಳಿ ನಡೆದಿದ್ದು, ದುರ್ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಈ ಹತ್ಯೆ ಅತ್ಯಂತ ಖಂಡನಾರ್ಹವಾಗಿದ್ದು, ಸರ್ಕಾರ ಇಂತಹ ಪೈಶಾಚಿಕ ಕೃತ್ಯಗಳಿಗೆ ಸಂಪೂರ್ಣ ವಿರಾಮ ಹಾಕಲು ಕಠಿಣ ಕ್ರಮಕೈಗೊಳ್ಳಬೇಕು ಎಂದು ಶ್ರೀಗಳು ಕೇಂದ್ರವನ್ನು ಕೋರಿದ್ದಾರೆ.
ಕಾಶ್ಮೀರಿ ಪಂಡಿತರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡುವುದು ಅಥವಾ ಪಂಡಿತರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿನ ಘರ್ಷಣೆ ಕುರಿತೂ ಹೇಳಿಕೆಯಲ್ಲಿ ಪ್ರಸ್ತಾಪಿಸಿರುವ ಶ್ರೀಗಳು, ಹರ್ಷ ಕೊಲೆ ನಂತರ ಒಂದಷ್ಟು ತಣ್ಣಗಾಗಿದ್ದ ವಾತಾವರಣ, ಈಗ ಮತ್ತೆ ಹಿಂದೂ ಯುವಕನಿಗೆ ಚಾಕು ಇರಿತ ಪ್ರಕರಣದಿಂದ ಆತಂಕಮಯವಾಗಿದೆ. ಕೋಮು ಸೌಹಾರ್ದ ಕೆಡಿಸುವ ದುಷ್ಕರ್ಮಿಗಳಿಗೆ ಕಠಿಣ ಕಾನೂನುಗಳ ಅಂಕುಶವನ್ನು ಸರ್ಕಾರ ಹಾಕಬೇಕು. ಜನತೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಹಲ್ಲೆಗೊಳಗಾದ ಪ್ರೇಮ್ ಸಿಂಗ್ ಶೀಘ್ರ ಗುಣಮುಖನಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ, ತುಮಕೂರು ಬಳಿಕ ಉಡುಪಿ: ಹಿಂದು ರಾಷ್ಟ್ರ ಎಂಬ ತಲೆಬರಹ ಇರುವ ಬ್ಯಾನರ್ ತೆರವಿಗೆ ಪಿಎಫ್‌ಐ ಆಗ್ರಹ