Site icon Vistara News

ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿಯಿಂದ ಜನರ ದನಿಯಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿ ಮೂಲಕ ಜನರ ಭಾವನೆಗೆ ಧ್ವನಿಯಾಗಬೇಕು. ಹಾಗೆಯೇ ತಳಮಟ್ಟದ ಅಧ್ಯಯನ ನಡೆಸಿ ವರದಿ ಮಾಡುವ ಮೂಲಕ ಸಮಾಜದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಸಕ್ರಿಯವಾಗಿರಲು ಪತ್ರಿಕಾರಂಗದ ಕೊಡುಗೆ ಮಹತ್ವದ್ದಿದೆ. ಜನರನ್ನು ಸಂಘಟಿಸಲು, ತತ್ವ, ಸಿದ್ಧಾಂತಗಳನ್ನು ಜಾಗೃತಗೊಳಿಸಲು ಮಾಧ್ಯಮ ಅಗತ್ಯವಿದ್ದು, ಸಾಮಾಜಿಕ ಜಾಲತಾಣಗಳು ಪತ್ರಕರ್ತರ ಸುದ್ದಿಮೂಲಕ್ಕೆ ಆಧಾರವಾಗಬಾರದು, ಅದನ್ನೇ ಸುದ್ದಿ ಎಂದು ಪರಿಗಣಿಸಬಾರದು ಎಂದರು.

ಇದನ್ನೂ ಓದಿ | ಶಿರಸಿ ಹುಡುಗಿಗೆ ಒಲಿಯಿತು ಕೆನಡಾ ಲಿಟರೇಚರ್‌ ಪ್ರಶಸ್ತಿ

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಸಕಾರಾತ್ಮಕ ವಿಷಯಗಳಿಗೆ ಮಾಧ್ಯಮಗಳು ಆದ್ಯತೆ ನೀಡಬೇಕು, ಪತ್ರಕರ್ತರು ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
      
ಸ್ಕೊಡ್‌ವೇಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ, ಪತ್ರಿಕೋದ್ಯಮ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಿಕೋದ್ಯಮದ ಅರಿವಿಲ್ಲದವರೂ ಪತ್ರಕರ್ತರಾಗುತ್ತಿರುವುದು ಕಳವಳಕಾರಿ. ಇದು ಪತ್ರಿಕೋದ್ಯಮದ ಮೌಲ್ಯ ಕುಸಿಯಲು ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಮಾತನಾಡಿ, ಸುದ್ದಿಮೂಲ ಕಟ್ಟಿಕೊಳ್ಳುವ, ಪರಿಣಾಮಕಾರಿ ಸುದ್ದಿ ಬರೆಯುವವ ಯಶಸ್ವಿ ಪತ್ರಕರ್ತನಾಗುತ್ತಾನೆ. ಜನರು ಪತ್ರಿಕೆಗಳನ್ನು ಕೊಂಡು ಓದಬೇಕು, ಜಾಹೀರಾತು ನೀಡಿ ಪತ್ರಿಕೆಗಳನ್ನು ಬೆಳೆಸಬೇಕು ಎಂದರು.

ಹಿರಿಯ ಪತ್ರಕರ್ತ ಪ್ರದೀಪ ಶೆಟ್ಟಿ ಅವರಿಗೆ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರದೀಪ ಶೆಟ್ಟಿ ಅವರು, ಪತ್ರಕರ್ತರು ಪೂರ್ವಗ್ರಹ ಪೀಡಿತರಾಗಬಾರದು, ಸಾಮಾಜಿಕ ಬದ್ಧತೆ ಇಟ್ಟು ಕೆಲಸ ಮಾಡಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್, ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ್, ಖಜಾಂಚಿ ಮಹಾದೇವ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ, ರಾಘವೇಂದ್ರ ಬೆಟ್ಕೊಪ್ಪ, ವಿನುತಾ ಹೆಗಡೆ, ಗಣೇಶ್ ಹೆಗಡೆ ಮತ್ತಿತರರಿದ್ದರು.

ಇದನ್ನೂ ಓದಿ | Booker prize: ಬೂಕರ್‌ ಸಾಹಿತ್ಯ ಪ್ರಶಸ್ತಿಯ ಪಟ್ಟಿಯಲ್ಲಿ 13 ಕಾದಂಬರಿಗಳು

Exit mobile version