Site icon Vistara News

world Environment day | ಪರಿಸರ ಕಾಪಾಡುವ ಆವಿಷ್ಕಾರಗಳ ಅಗತ್ಯವಿದೆ: ಕಾಗೇರಿ ಪ್ರತಿಪಾದನೆ

Parisara dina Karwar

ಕಾರವಾರ: ಅನೇಕ ದಶಕಗಳಿಂದಲೂ ವಿಜ್ಞಾನ ಪರಿಸರಕ್ಕೆ ಮಾರಕವೋ ಪೂರಕವೋ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಉಕ್ರೇನ್ ನಂತಹ ದೇಶಗಳನ್ನು ನೋಡಿದಾಗ ಮಾರಕ ಎಂದೆನಿಸದೆ ಇರದು. ಆದ್ದರಿಂದ ಪರಿಸರವನ್ನು ಕಾಪಾಡುವ ಅದಕ್ಕೆ ಪೂರಕವಾದ ವೈಜ್ಞಾನಿಕ ಆವಿಷ್ಕಾರ ಅತ್ಯಗತ್ಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಶಾಲ್ಮಲಾ ನದಿ ತಟದ ಸಹಸ್ರ ಲಿಂಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ನದಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಪರಿಸರ ಹೇಗೆ ನಾಶವಾಗುತ್ತದೆ ಎಂದು ನಾವು ನೋಡಿದ್ದೇವೆ. ಆದರೆ ಈಗ ಹಿಂದಿಗಿಂತಲೂ ಹೆಚ್ಚು ಜನಜಾಗೃತಿ ಉಂಟಾಗಿದೆ. ಕೈಗಾರಿಕೀಕರಣದಿಂದ ಪರಿಸರದ ಮೇಲೆ ದಾಳಿ ಆಗುತ್ತಿದೆ. ಇದನ್ನೆಲ್ಲಾ ತಡೆಗಟ್ಟಿ ಪರಿಸರ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲದೇ ಬೇಡ್ತಿ ಕೊಳ್ಳ ರಕ್ಷಣಾ ಸಮಿತಿ ತೆಗೆದುಕೊಳ್ಳುವ ನಿರ್ಣಯವನ್ನು ಸರ್ಕಾರ ಮಟ್ಟದಲ್ಲಿ ಅನುಷ್ಠಾನ ಮಾಡಲು ಬದ್ಧನಿದ್ದೇನೆ ಎಂದರು.

ಇದನ್ನೂ ಓದಿ | world Environment day: ಶಾಲೆಗೇ ಹೋಗದ ಇವರಿಗೆಲ್ಲ ಪರಿಸರ ಪಾಠ ಹೇಳಿಕೊಟ್ಟಿದ್ಯಾರು?

ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನಾವು ನಿರಂತರವಾಗಿ ಪರಿಸರದ ಜನಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು, ಬೇಡ್ತಿ ಸಂರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಜನರು ಈ ಹಿಂದಿನ ಹಲವು ಯೋಜನೆಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ. ನಿಸರ್ಗ ಸಂಪತ್ತಿನ ರಕ್ಷಣೆಗೆ ನಡೆಸಿದ ಹೋರಾಟಗಳು ಗೆಲುವು ಕಂಡಿವೆ. ಆದ್ದರಿಂದ ಈ ಬಾರಿ ಬೇಡ್ತಿ ಆಂದೋಲನಕ್ಕೆ ಚಾಲನೆ ನೀಡಿದ್ದೇವೆ, ನದಿ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಬೇಕು ಎಂದರು.

ಪತ್ರಕರ್ತ ನಾಗೇಶ ಹೆಗಡೆ ಮಾತನಾಡಿ, ಮುಂದಿನ ಪೀಳಿಗೆಗೆ ತಪ್ಪುಗಳನ್ನು ತಿಳಿಸಬೇಕಿದೆ. ನದಿಯ ಹರಿವಿಗೆ ಅಡ್ಡಿಪಡಿಸಬಾರದು. ಅಘನಾಶಿನಿ, ಬೇಡ್ತಿ ಈ ನಾಡಿನ ಪವಿತ್ರ ಜೋಡಿ ನದಿಗಳು. ಇವೆರಡೂ ನದಿಗಳಿಗೂ ಮಾನವ ಹಕ್ಕು ನಿಯಮ ಘೋಷಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಮೃಗ-ಪಕ್ಷಿಗಳನ್ನು ಉಳಿಸಿ ಮಾದರಿ ಪೂರ್ವಜರಾಗಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಸಿದ್ಧ ಪ್ರವಾಸಿತಾಣ ಸಹಸ್ರಲಿಂಗ, ನದಿಗೆ ಕಾಗೇರಿ ಪೂಜೆ ಸಲ್ಲಿಸಿದರು. ಸಭೆಯ ನಂತರದಲ್ಲಿ ಬೇಡ್ತಿ ಉಳಿಸಿ ಹೋರಾಟದ ಬೃಹತ್ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಲಾಯಿತು.

ಇದನ್ನೂ ಓದಿ | ವಿಶ್ವ ಪರಿಸರ ದಿನಾಚರಣೆ; ಮಣ್ಣಿನ ರಕ್ಷಣೆಯ ಪಂಚಸೂತ್ರಗಳನ್ನು ವಿವರಿಸಿದ ಪ್ರಧಾನಿ ಮೋದಿ

Exit mobile version