ಕೊಡಗು: ಜಿಲ್ಲೆಯ ಪ್ರವಾಸಿ ತಾಣಗಳು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಕೂಡ. ಮಳೆಗಾಲ ಆರಂಭವಾದರೆ ಜಲಪಾತಗಳಿಗೆ ಜೀವ ಕಳೆ ಬರುತ್ತದೆ. ಬೆಟ್ಟ ಗುಡ್ಡಗಳ ಮೇಲಿಂದ ಹಾಲಿನ ನೊರೆಯಂತೆ ಹರಿಯುವ ಜಲಪಾತದ ಸೊಬಗು ನೋಡಲು ಇಲ್ಲಿಗೆ ಬರುವ ಎಷ್ಟೋ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಹೌದು. ಮಳೆಗಾಲದಲ್ಲಿ ಇಲ್ಲಿನ ಜಲಪಾತಗಳಿಗೆ ಜೀವ ಬರುತ್ತೆ. 10ಕ್ಕೂ ಹೆಚ್ಚು ಜಲಪಾತಗಳು ತುಂಬಿ ಹರಿಯುತ್ತವೆ. ಅಬ್ಬಿ ಜಲಪಾತ, ಸೋಮವಾರಪೇಟೆ ಮಲಳ್ಳಿ ಜಲಪಾತ, ಇರ್ಪು ಜಲಪಾತ ದುಬಾರೆ ನದಿ, ಚೇಲವಾರ ಫಾಲ್ಸ್ ಹೀಗೆ ವಿವಿಧ ಸ್ಥಳಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಎಚ್ಚರಿಕೆ ಸೂಚನಾ ಫಲಕಗಳು ಇದ್ದರೂ ಪ್ರವಾಸಿಗರು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ನೀರಿನಲ್ಲಿ ಆಟವಾಡಲು ಇಳಿದು ಪ್ರಾಣ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ | Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು
ಇತ್ತೀಚೆಗೆ ಜಿಲ್ಲೆಯ ಕೋಟೆ ಅಬ್ಬಿ ಜಲಾಪಾತ ನೋಡಲು ಬಂದ ಮೂವರು ಪ್ರವಾಸಿಗರು ಜೀವ ಕಳೆದುಕೊಂಡಿದ್ದರು. ಕೊಡಗಿನ ಬೆಟ್ಟ ಗುಡ್ಡಗಳ ಸೌಂದರ್ಯ, ಮಂಜು ಮುಸುಕಿದ ವಾತಾವರಣ, ಮಳೆಗಾಲದಲ್ಲಿ ಕಾಣಸಿಕ್ಕುವ ಜಲಪಾತಗಳನ್ನು ನೋಡಲು ಜಿಲ್ಲೆಗೆ ಹೊರ ರಾಜ್ಯ ಹೊರ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಅಪಾಯದ ಸ್ಥಳಗಳು ಎಂದು ನಾಮ ಫಲಕ, ತಂತಿ ಬೇಲಿ ಹಾಕಿದ್ದರೂ ಕೇಳದೇ ಹೋಗಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಪ್ರವಾಸಿಗರು ಹುಚ್ಚಾಟ ಆಡದೇ ನೀರಿಗೆ ಇಳಿಯದೇ ಸ್ಥಳಗಳನ್ನು ನೋಡಿ ಹೋದರೆ ಯಾವುದೇ ಸಮಸ್ಯೆ ಇರಲ್ಲ ಎನ್ನುತ್ತಾರೆ ಸ್ಥಳೀಯರು.
ಕೊಡಗಿನಲ್ಲಿ ಹಲವು ಪ್ರವಾಸಿತಾಣಗಳು ಇವೆ. ಹೀಗಾಗಿ ನಿತ್ಯ ಸಾವಿರಾರು ಜನ ಜಿಲ್ಲೆಗೆ ಆಗಮಿಸುತ್ತಾರೆ. ಇಲ್ಲಿನ ಜಲಪಾತಗಳನ್ನು ನೋಡಲು ಬರುವ ಪ್ರವಾಸಿಗರು ಅಪಾಯಕಾರಿ ಸ್ಥಳಗಳಿಗೆ ಹೋಗುವುದರಿಂದ ಪ್ರಾಣಾಪಾಯ ತಂದುಕೊಳ್ಳುತ್ತಿದ್ದಾರೆ.
ಹೀಗಾಗಿ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಸ್ಥಳೀಯ ರವಿಗೌಡ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತುಮಾಡಿ ಅಂತಹ ಸ್ಥಳಗಳನ್ನು ದೂರದಿಂದಲೇ ನೋಡಿ ಹೋಗುವ ವ್ಯವಸ್ಥೆ ಮಾಡಬೇಕಿದೆ. ಜಲಪಾತಗಳ ಬಳಿ ಸಿಬ್ಬಂದಿ ನಿಯೋಜನೆ ಮಾಡಿ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈ ಗೊಂಡರೆ ಮಾತ್ರ ಅಪಾಯಗಳನ್ನು ತಡೆಯಬಹುದಾಗಿದೆ.
ವರದಿ: ಲೋಹಿತ್ ಎಂ.ಆರ್, ಕೊಡಗು
ಇದನ್ನೂ ಓದಿ | ಜಿಲ್ಲಾಡಳಿತದಿಂದ ಪ್ರವಾಹ, ಭೂಕುಸಿತದ ಎಚ್ಚರಿಕೆ; ಕೊಡಗಿನ ಜನರಲ್ಲಿ ಆತಂಕ