ಕಾರವಾರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳೆಂದರೆ ಒಮ್ಮೆ ನಿರ್ಮಾಣವಾದ ಬಳಿಕ ಸರ್ಕಾರವೇ ಅದರತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ದಶಕಗಳಷ್ಟು ಹಳೆಯ ಸರ್ಕಾರಿ ಶಾಲೆಗಳು ಸೂಕ್ತ ಸೌಲಭ್ಯಗಳು ಸಿಗದೇ ಪರದಾಡುತ್ತಿರುವುದು. ಇದಕ್ಕೆ ಉದಾಹರಣೆ ಎಂದರೆ ಕರ್ನಾಟಕದ ಬಾರ್ಡೋಲಿ ಎಂದೇ ಕರೆಸಿಕೊಳ್ಳುವ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಗಾಬಿತವಾಡ (Gabitawada) ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿದೆ. ಈ ಶಾಲೆಯು ಈಗ ನೆರವಿಗಾಗಿ ಕಾದು ಕುಳಿತಿದೆ. ಇದಕ್ಕೆ ವಿಸ್ತಾರ ನ್ಯೂಸ್ ಅಭಿಯಾನವಾದ (Vistara Campaign) ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಅಡಿ ಪರಿಹಾರ ಕಲ್ಪಿಸಲು ಮುಂದಾಗಿದೆ.
50 ವರ್ಷಗಳಷ್ಟು ಹಳೆಯ ಗ್ರಾಮೀಣ ಶಾಲೆ
ಗಾಬಿತವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 50 ವರ್ಷಗಳಷ್ಟು ಹಿಂದೆ ನಿರ್ಮಾಣವಾಗಿದೆ. ಒಂದರಿಂದ ಏಳರವರೆಗಿನ ತರಗತಿಗಳು ಈ ಶಾಲೆಯಲ್ಲಿ ಇವೆ. ಶಾಲೆಯಲ್ಲಿ ಸದ್ಯ 53 ವಿದ್ಯಾರ್ಥಿಗಳಿದ್ದು ನಾಲ್ವರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆಯಾಗಿರುವುದರಿಂದ ಹಿಂದುಳಿದ, ಬಡ ಕುಟುಂಬದ ಮಕ್ಕಳೇ ಹೆಚ್ಚಾಗಿ ಇಲ್ಲಿ ಕಲಿಯುತ್ತಿದ್ದಾರೆ. ಆದರೆ, ಶಾಲೆಯ ಕಟ್ಟಡ ಹಳೆಯದಾಗಿದ್ದು ಶಿಥಿಲಾವಸ್ಥೆಯನ್ನು ತಲುಪಿದೆ. ಹೀಗಾಗಿ ಶಾಲೆಯಲ್ಲಿ ಮಕ್ಕಳು ಆತಂಕದಲ್ಲೇ ಶಿಕ್ಷಣ ಪಡೆಯಬೇಕಾದ ಸ್ಥಿತಿಯಿದ್ದು ಶಿಕ್ಷಕರೂ ಭಯದಲ್ಲೇ ಪಾಠ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಅನುದಾನ ಸಿಗದಿರುವುದರಿಂದ ಶಾಲಾ ಕಟ್ಟಡದ ರಿಪೇರಿ ಕೆಲಸವನ್ನಷ್ಟೇ ಮಾಡಲಾಗಿದೆ.
ಇದನ್ನೂ ಓದಿ: Weekend With Ramesh: ‘ವೀಕೆಂಡ್ ವಿಥ್ ರಮೇಶ್ 5’ ಸೀಸನ್ ಮೊದಲ ಅತಿಥಿ ಯಾರು?
ಮೀನುಗಾರರು, ನೌಕಾನೆಲೆ ನಿರಾಶ್ರಿತರ ಪ್ರದೇಶ
ಗಾಬಿತವಾಡ ಬಹುಪಾಲು ಮೀನುಗಾರ ಸಮುದಾಯ ಹಾಗೂ ನೌಕಾನೆಲೆ ನಿರಾಶ್ರಿತರ ಕುಟುಂಬಗಳು ವಾಸವಾಗಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಹಿಂದುಳಿದ ಸಮುದಾಯದ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ಶಾಲೆಯನ್ನು ಸ್ಥಾಪನೆ ಮಾಡಲಾಗಿದೆ. ಆಧುನಿಕತೆಯ ಇಂಗ್ಲಿಷ್ ಶಿಕ್ಷಣದ ಭರಾಟೆಯಲ್ಲೂ ಕನ್ನಡ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿರುವುದು ಸಂತೋಷದ ವಿಷಯ. ಆದರೆ ಶಾಲಾ ಕಟ್ಟಡ ದುಃಸ್ಥಿತಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾದಲ್ಲಿ ಶಾಲೆಯತ್ತ ಇನ್ನಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಈ ಭಾಗದ ಮಕ್ಕಳು ಶಿಕ್ಷಣ ಪಡೆಯಲು ದೂರದ ಶಾಲೆಗಳು ಇಲ್ಲವೇ ಖಾಸಗಿ ಶಾಲೆಗಳತ್ತ ಮುಖಮಾಡಬೇಕಿದೆ ಎಂಬುದು ಶಾಲಾಡಳಿತ ಮಂಡಳಿಯ ಅಭಿಪ್ರಾಯವಾಗಿದೆ.
ವಿಸ್ತಾರ ನ್ಯೂಸ್ ಅಭಿಯಾನದ ನೆರವು
ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್ ತನ್ನ ಮಹತ್ವಾಕಾಂಕ್ಷೆಯ “ನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆ” ಅಭಿಯಾನದಡಿಯಲ್ಲಿ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಶಾಲೆಯ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವತ್ತ ಹೆಜ್ಜೆ ಹಾಕಿದೆ. ಈ ಶಾಲೆಗೆ ಅಗತ್ಯವಿರುವ ನೆರವಿನ ಕುರಿತು ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸೂರ್ಯಕಾಂತ ಭೂತೆ ಅವರಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು, ಗ್ರಾಮೀಣ ಪ್ರದೇಶದ ಸಾಕಷ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಹ ಲಭಿಸುತ್ತಿದೆ. ಆದರೆ ಶಾಲೆ ಹಳೆಯದಾಗಿರುವ ಹಿನ್ನೆಲೆಯಲ್ಲಿ ಎರಡು ನೂತನ ಕೊಠಡಿಗಳ ನಿರ್ಮಾಣವಾದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಸೂರ್ಯಕಾಂತ ಅವರಿಂದ ಬಂದಿರುವುದರಿಂದ ಈ ಕುರಿತು ವಿಸ್ತಾರ ನ್ಯೂಸ್ ಕೂಡಲೇ ಕಾರ್ಯಪ್ರವೃತ್ತವಾಯಿತು. ಶಾಲೆಯ ದುಃಸ್ಥಿತಿಯ ಬಗ್ಗೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರನ್ನು ಸಂಪರ್ಕಿಸಿದ್ದು ಅವರಿಂದ ನೆರವಿನ ಭರವಸೆಯನ್ನು ಒದಗಿಸಿಕೊಟ್ಟಿದೆ.
ಇದನ್ನೂ ಓದಿ: NIMMBUS App : ಬಿಎಂಟಿಸಿಯ ನಿಮ್ಮಬಸ್ ಆ್ಯಪ್ ಮುಂದಿನ ವಾರ ಬಿಡುಗಡೆ
ಅನುದಾನದ ಭರವಸೆಯಿತ್ತ ಶಾಸಕಿ
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ, ಶಾಲೆಗೆ ಅಗತ್ಯವಿರುವ ಕಟ್ಟಡಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ಇದೇ ಶಾಲೆಗೆ ನೂತನ ಅಡುಗೆ ಕೋಣೆಗಾಗಿ ಅನುದಾನ ನೀಡಿದ್ದು, ಕಾಮಗಾರಿ ನಡೆಯುತ್ತಿದೆ. ಉಳಿದಂತೆ ಎರಡು ಕೊಠಡಿಗಳಿಗಾಗಿ ಸರ್ಕಾರದ ವಿವೇಕ ಯೋಜನೆಯಡಿಯಲ್ಲಿ ಶೀಘ್ರದಲ್ಲಿಯೇ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸರ್ಕಾರಿ ಶಾಲೆಗಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್ ನಡೆಸುತ್ತಿರುವ “ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ” ಅಭಿಯಾನವು ನಿಜಕ್ಕೂ ಶ್ಲಾಘನೀಯ. ತುಂಬಾ ಒಳ್ಳೆಯ ಕಾರ್ಯವನ್ನು ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ನಾನು ಸಹ ಅಗತ್ಯ ನೆರವನ್ನು ನೀಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಅಗತ್ಯ ಸಹಕಾರವನ್ನು ನೀಡುತ್ತೇನೆ ಎಂದು ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟಿಗನ ಮನೆಯಿಂದ ಲಕ್ಷಾಂತರ ರೂಪಾಯಿ ದೋಚಿದ ಖದೀಮರು