Site icon Vistara News

ವಿಸ್ತಾರ ಗ್ರಾಮ ದನಿ: ಅಡಿಕೆ ತೋಟಗಳಲ್ಲಿ ಈಗ ಪ್ರೆಸ್‌ಮಡ್ ಗೊಬ್ಬರಗಳದ್ದೇ ದಾಂಗುಡಿ!

vistara grama dani ವಿಸ್ತಾರ ಗ್ರಾಮ ದನಿ

| ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ಕಾಲದಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಅಡಿಕೆ ತೋಟಗಳ ಬೇಸಾಯಕ್ಕೆ ಕೊಟ್ಟಿಗೆ ಗೊಬ್ಬರವೇ ಪ್ರಮುಖವಾಗಿತ್ತು. ಸಣ್ಣ ಮಧ್ಯಮ ರೈತರ ಮನೆಗಳಲ್ಲಿ ಹಾಲು, ಗೊಬ್ಬರಕ್ಕೆ ಅಂತ ಕನಿಷ್ಠ ಒಂದೆರಡು ದನಗಳನ್ನಾದರೂ ಸಾಕುತ್ತಿದ್ದರು. ಕಾಲ ಬದಲಾದಂತೆ, ಹಿಂಡಿ, ಮೇವುಗಳ ಬೆಲೆ ದುಬಾರಿಯಾಗಿ ಒಂದೆರಡು ದನ ಸಾಕುವುದು ನಷ್ಟದಾಯಕ ಅಂತಾಯ್ತು. ಗೋಮಾಳದ ಜಾಗಗಳೆಲ್ಲ ಕೃಷಿ ಭೂಮಿಯಾಗಿ ವಿಸ್ತರಿಸಿತು ಅಥವಾ ಮನೆದಳ ಜಾಗವಾಯಿತು. ಕುಟುಂಬ ಚಿಕ್ಕದಾಗಿದ್ದು, ಹೊಸ ತಲೆಮಾರು ಕೊಟ್ಟಿಗೆ ಕೆಲಸಗಳಿಂದ ದೂರವಾದರು. ಉಳುಮೆ ಮಾಡುವುದಕ್ಕೆ ಯಂತ್ರಗಳು ಬಂದವು. ಕೊಟ್ಟಿಗೆಗೆ ಬೇಕಿದ್ದ ಸೊಪ್ಪು, ದರಗು ತರುವುದಕ್ಕೆ ಆಳುಗಳು ಸಿಗದ ಪರಿಸ್ಥಿತಿ ಬಂತು. ಹೀಗೆ ಹಲವಾರು ಕಾರಣಗಳಿಂದ ಹಳ್ಳಿಯ ಪ್ರತೀ ಮನೆಗಳಲ್ಲಿದ್ದ ದನ, ಎತ್ತು, ಎಮ್ಮೆಗಳು ಕ್ರಮೇಣ ಮಾಯವಾದವು. ಪರಿಣಾಮ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಇಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಹೋಯ್ತು.
ಆಗ ಬಂದಿದ್ದು ಕುರಿ ಗೊಬ್ಬರ, ಕೋಳಿ ಗೊಬ್ಬರ ಮತ್ತು ದೊಡ್ಡ ಮಟ್ಟದಲ್ಲಿ 30kg, 40kg, 50kg ಚೀಲಗಳಲ್ಲಿ ಪ್ಯಾಕ್ ಆಗಿ ಬಂದ ‘ಪ್ರಸ್‌ಮಡ್ ಗೊಬ್ಬರ’.

ಏನಿದು ‘ಪ್ರೆಸ್‌ಮಡ್ ಗೊಬ್ಬರ?

ಸರಳವಾಗಿ ಹೇಳುವುದಾದರೆ, ಸಕ್ಕರೆ ಕಾರ್ಖಾನೆಯಿಂದ ಹೊರ ಬೀಳುವ ಅರೆದ ಕಬ್ಬಿನ ಘನತ್ಯಾಜ್ಯ ವಸ್ತುವೇ ಪ್ರೆಸ್‌ಮಡ್. ಸಕ್ಕರೆ ಕಾರ್ಖಾನೆಯಿಂದ ಹೊರಬೀಳುವ ಪ್ರೆಸ್‌ಮಡ್‌ನ್ನು ಸಂಸ್ಕರಿಸಿ, ಕಾಂಪೋಸ್ಟ್ ಮಾಡಿ, ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಸಕ್ಕರೆ ಕಾರ್ಖಾನೆಯ ಹೊರಹೊಮ್ಮುವ ಇನ್ನೊಂದು ಘನತ್ಯಾಜ್ಯ ವಸ್ತು ಮೊಲ್ಯಾಸೆಸ್‌. ಈ ಮೊಲ್ಯಾಸೆಸ್‌ನ್ನು ಬಳಸಿಕೊಂಡು ಸಾರಾಯಿ ತಯಾರಿಸಲಾಗುತ್ತದೆ. ಹಾಗೆ ಸರಾಯಿ ತಯಾರಿಸುವಾಗ ಹೊರಬೀಳುವ ಸ್ಪೆಂಟ್‌ವಾಶ್ ಎಂಬ ನಿರುಪಯುಕ್ತ ನೀರನ್ನು, ಅದೇ ಕಬ್ಬಿನ ತ್ಯಾಜ್ಯದಿಂದ ಉತ್ಪನ್ನವಾದ ಪ್ರೆಸ್‌ಮಡ್ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕಬ್ಬಿನಿಂದ ಬಂದ ತ್ಯಾಜ್ಯ ಪ್ರೆಸ್‌ಮಡ್ ಅನ್ನು ಮೊದಲು ಬಯಲಿನಲ್ಲಿ ರಾಶಿ ಹಾಕಿ, ಒಣಗಿಸಲಾಗುತ್ತದೆ. ಅನೇಕ ಬಾರಿ ಯಂತ್ರಗಳನ್ನು ಬಳಸಿ, ಚನ್ನಾಗಿ ಮಿಶ್ರಣಗೊಳಿಸಲಾಗುತ್ತದೆ. ಸಹಜವಾಗಿ ಪ್ರೆಸ್‌ಮಡ್ ಕಾಂಪೋಸ್ಟ್ ಆಗಿ ಬದಲಾಗಲು 3-4 ತಿಂಗಳುಗಳೇಬೇಕು. ಆದರೆ, 3-4 ತಿಂಗಳುಗಳ ಕಾಲದ, ಪ್ರತಿ ದಿನದ ಕಬ್ಬಿನ ತ್ಯಾಜ್ಯ ಪ್ರೆಸ್‌ಮಡ್‌ನ್ನು ಶೇಖರಿಸುವಷ್ಟು ಸ್ಥಳ ಇಲ್ಲದ ಸಕ್ಕರೆ ಕಾರ್ಖಾನೆಗಳಲ್ಲಿ ಅಥವಾ ಮದ್ಯ ತಯಾರಿಕಾ ಡಿಸ್ಟಿಲರಿಗಳಲ್ಲಿ, ಕೆಲವು ಕೆಮಿಕಲ್‌ಗಳನ್ನೂ, ಇನ್ನು ಕೆಲವು ಕಡೆ ಸೂಕ್ಷ್ಮ ಜೀವಾಣುಗಳನ್ನು ಬಳಸಿ ಬೇಗನೆ ಪ್ರೆಸ್‌ಮಡ್ ಗೊಬ್ಬರ ತಯಾರಿಸಲಾಗುತ್ತದೆಯಂತೆ.

ಬ್ಯಾಕ್ಟೀರಿಯಾ ಮತ್ತು ಆ್ಯಕ್ಟಿನೋ ಮೈಸಿಟಸ್‌ಗಳಂತಹ ಜೀವಾಣು ಕೋಶಗಳನ್ನು ಪ್ರೆಸ್‌ಮಡ್‌ಗೆ ಸೇರಿಸಲಾಗುತ್ತದೆ. ಡಿಸ್ಟಿಲರೀಸ್‌ನಿಂದ ಹೊರಬರುವ ಸ್ಪೆಂಟ್‌ವಾಶ್ ನಿರುಪಯುಕ್ತ ನೀರನ್ನು ಲಾರಿಯ ಸಹಾಯದಿಂದ ಪ್ರೆಸ್‌ಮಡ್‌ಗೆ ಸಿಂಪಡಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸುಮಾರು 3-4 ತಿಂಗಳುಗಳು ನಿರಂತರವಾಗಿ ನಡೆಯುತ್ತದೆ. (ಬೈ ಪಾಸ್ ಸಿಸ್ಟಮ್‌ನಲ್ಲಿ ಕೆಮಿಕಲ್ ಬಳಸಿ, 40-45 ದಿನಗಳಲ್ಲೂ ಪ್ರೆಸ್‌ಮಡ್ ಗೊಬ್ಬರ ತಯಾರಿಸುವ ಸಿಸ್ಟಮ್ ಕೂಡ ಇದೆಯಂತೆ! ನಂತರ ಯಂತ್ರಗಳ ಮೂಲಕ ಈ ಪ್ರೆಸ್‌ಮಡ್ ಗೊಬ್ಬರವನ್ನು ಪುಡಿಮಾಡಿ, ಟ್ರಕೋಡರ್ಮಾ, ಸ್ಯುಡೋಮಾನಸ್‌ನಂತಹ ಕೆಲವು ಅಗತ್ಯ ಸೂಕ್ಷ್ಮ ಜೀವಾಣುಗಳನ್ನು ಬೆರೆಸಿ, ಪ್ಯಾಕ್ ಮಾಡಲಾಗುತ್ತದೆ.

ಸಾವಯವ ಗೊಬ್ಬರ ಮಾರಾಟ ಮಾಡುವ ಕಂಪೆನಿಗಳು ಇದನ್ನು ಖರೀದಿಸಿ ತಮ್ಮ ಕಂಪೆನಿ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡುತ್ತವೆ. ಅಡಿಕೆ ಮಾರುಕಟ್ಟೆಯಲ್ಲಿ ದೊಡ್ಡ ಹೆಸರಿರುವ ಮ್ಯಾಮ್‌ಕೋಸ್, TSS ನಂತಹ ಸಹಕಾರಿ ಸಂಸ್ಥೆಗಳಲ್ಲದೆ ಹತ್ತಾರು ಖಾಸಗಿ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಈ ಪ್ರೆಸ್‌ಮಡ್ ಗೊಬ್ಬರದ ವ್ಯವಹಾರದಲ್ಲಿ ತೊಡಗಿಸಿಕೊಂಡಿವೆ.

ಒಂದು ಕಾಲದಲ್ಲಿ, ಸಕ್ಕರೆ ಕಾರ್ಖಾನೆಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಹೇಗೆ ಅನ್ನುವ ಸಮಸ್ಯೆ ಇತ್ತು.
ಅಡಿಕೆ ತೋಟಗಳಿಗೆ ಕೊಟ್ಟಿಗೆ ಗೊಬ್ಬರ ಅಭಾವ ಸೃಷ್ಟಿಯಾದಾಗ, ಕಬ್ಬಿನ ತ್ಯಾಜ್ಯ ಪ್ರೆಸ್‌ಮಡ್ ಗೊಬ್ಬರವಾಗಿ ಅಡಿಕೆ ತೋಟಗಳಿಗೆ ಬಂದಿಳಿಯುವಂತಾಯ್ತು. ಈಗ ಮಲೆನಾಡು, ಕರಾವಳಿಯ ಅಡಿಕೆ ತೋಟಗಳಲ್ಲಿ ಪ್ರೆಸ್‌ಮಡ್‌ನದೇ ಬೇಸಾಯದ ಮೂಲವಸ್ತು. ಯಾವಾಗ ಪ್ರೆಸ್‌ಮಡ್ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿ, ವ್ಯಾಪಾರ, ಹಣ, ಲಾಭ ದೊಡ್ಡ ಮಟ್ಟದಲ್ಲಿ ಹರಿಯುವುದಕ್ಕೆ ಪ್ರಾರಂಭವಾಯಿತು, ಆಗ ಅನೇಕ ಕಡೆ, ತ್ವರಿತವಾಗಿ ಅವೈಜ್ಞಾನಿಕವಾಗಿ ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯೂ ಪ್ರಾರಂಭವಾಯಿತು.

ಇದರ ಸಮಸ್ಯೆ ಏನು?

ಪ್ರೆಸ್‌ಮಡ್ ಗೊಬ್ಬರ ತಯಾರಾಗಬೇಕಾದರೆ, ಪ್ರೆಸ್‌ಮಡ್ ಕಾಂಪೋಸ್ಟ್ ಆಗಿ ಬದಲಾಗಬೇಕಾದರೆ ಬೇಕಾಗುವ ಸಾಮಾನ್ಯ ಸಹಜ ಲೀಡ್ ಟೈಮ್‌ನ್ನು ಕೆಲವು ಮಧ್ಯವರ್ತಿ ಏಜೆಂಟರು, ಸಂಸ್ಥೆಗಳು ಪರಿಗಣಿಸುತ್ತಿಲ್ಲ ಎಂಬುದು ಪ್ರೆಸ್‌ಮಡ್ ಗೊಬ್ಬರದ ಚೀಲ ತೋಟಕ್ಕೆ ಬಂದು ಬಿದ್ದಾಗ ರೈತರ ಅರಿವಿಗೆ ಬರುತ್ತಿದೆ. ಬರಿಗೈಯಲ್ಲಿ ಮುಟ್ಟಲಾರದಷ್ಟು ಬಿಸಿಯಲ್ಲಿ ಆ ಚೀಲಗಳಿರುತ್ತವೆ. ಕಂಪ್ಲೀಟ್ ಕಾಂಪೋಸ್ಟ್ ಆಗುವ ಮುನ್ನವೇ, ಅದನ್ನು ಚೀಲಕ್ಕೆ ತುಂಬಿ ರೈತರಿಗೆ ಮಾರಲಾಗಿರುತ್ತದೆ!

ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ರೈತರು ಕೇಳುವ ಪ್ರಶ್ನೆಗಳಿಗೆ ಅದರ ವರ್ತಕರಲ್ಲಿ, ವ್ಯಾಪಾರಿ ಸಂಸ್ಥೆಗಳಲ್ಲಿ, ವ್ಯಾಪಾರ ಮಾಡುವ ಸಹಕಾರಿ ಸಂಘಗಳಲ್ಲಿ ಸ್ಪಷ್ಟವಾದ ನಿಖರವಾದ ಅಧಿಕೃತ ಉತ್ತರಗಳು ದೊರೆಯುತ್ತಿಲ್ಲ. (ಅತಿ ಹೆಚ್ಚು ಪ್ರೆಸ್ ಮಡ್ ಗೊಬ್ಬರ ಮಾರಾಟ ಮಾಡುವ ಸಹಕಾರಿ ಸಂಸ್ಥೆ ಮ್ಯಾಮ್‌ಕೋಸ್‌ಗೆ, ಈ ಬರಹದ ಲೇಖಕ ಸ್ಪಷ್ಟವಾದ, ನಿಖರವಾದ, ಅಧಿಕೃತ ಮಾಹಿತಿ ಕೇಳಿ ಡಿಸೆಂಬರ್ 2023 ರಲ್ಲಿ ಕೋರಿಕೆ ಸಲ್ಲಿಸಿದ್ದು, ಉತ್ತರ ನಿರೀಕ್ಷಿಸಲಾಗುತ್ತಿದೆ.)

ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ರೈತರಲ್ಲಿ ಪ್ರಸ್ತುತ ಇರುವ ಅನುಮಾನಗಳು ಹತ್ತಾರು:

  1. ಸಕ್ಕರೆ ಕಾರ್ಖಾನೆಗಳು ಮೂರ್ನಾಲ್ಕು ತಿಂಗಳುಗಳು ಕಬ್ಬಿನ ವೇಸ್ಟನ್ನು ಸಹಜ ಕಾಂಪೋಸ್ಟ್ ಆಗುವ ಹಾಗೆ ಸಂಗ್ರಹಿಸಿ ಇಡುತ್ತಾರಾ?
  2. ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯಲ್ಲಿ, ತಕ್ಷಣ ಕಾಂಪೋಸ್ಟ್ ಆಗುವ ಹಾಗೆ ಕೆಮಿಕಲ್ ಬಳಸುವುದು ನಿಜವಾ?
  3. ಕಾಂಪೋಸ್ಟ್ ತಯಾರಿಸುವಾಗ ಜೀವಾಣುಗಳನ್ನು (ಟ್ರೈಕೋಡರ್ಮಾ, ಸ್ಯುಡೋಮಾನಸ್… ಇತ್ಯಾದಿ) ಯಾವಾಗ ಸೇರಿಸುತ್ತಾರೆ?
  4. ಕೆಲವೊಮ್ಮೆ ಪ್ರೆಸ್‌ಮಡ್ ಗೊಬ್ಬರದ ಚೀಲಗಳನ್ನು ಬರೀ ಕೈಯಿಂದ ಮುಟ್ಟಲಾರದಷ್ಟು ಬಿಸಿ ಇರುತ್ತವೆ. ಇದರರ್ಥ, ಬಹುಶಃ ಆರೇಳು ತಿಂಗಳುಗಳು ಕಾದು, ಕಬ್ಬಿನ ವೇಸ್ಟ್ ಸಹಜ ಕಾಂಪೋಸ್ಟ್ ಆದ ಮೇಲೆ, ಗೊಬ್ಬರ ತಯಾರಿಸಿದಂತೆ ಕಾಣುವುದಿಲ್ಲ. ತಯಾರಿಕೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಲಿಖಿತ ಮಾಹಿತಿಗಳು ಪ್ರಾಡಕ್ಟ್‌ನ ಬ್ಯಾಚ್‌ವೈಸ್ ಡೀಟೈಲ್ಸ್ (ಬ್ಯಾಚ್ ಮಾನುಫ್ಯಾಕ್ಚರಿಂಗ್ ರಿಕಾರ್ಡ್ ಜೊತೆಗೆ ಸರ್ಟಿಫಿಕೇಟ್ ಆಫ್ ಅನಾಲಿಸಿಸ್) ಎಲ್ಲಿ ಸಿಗುತ್ತದೆ?
  5. ಪ್ರೆಸ್‌ಮಡ್ ಗೊಬ್ಬರ ತಯಾರಿಕೆಯಲ್ಲಿ ವೇಗಗತಿಯಲ್ಲಿ ಕಾಂಪೋಸ್ಟ್ ಆಗುವುದಕ್ಕೆ ಅನೇಕ ಕೆಮಿಕಲ್‌ಗಳನ್ನು ಬಳಸಲಾಗುತ್ತಿದೆ ಮತ್ತು ಅದರ ಪರಿಣಾಮದಿಂದ ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ರೋಗಗಳು ವಿಸ್ತರಿಸುತ್ತಿರುವುದಕ್ಕೆ ಕಾರಣ ಆಗಿರಬಹುದು ಎಂದು ಕೆಲವು ರೈತರ ಅನುಮಾನ
  6. ಡಿಸ್ಟಿಲರಿ ಸ್ಪೆಂಟ್ ವಾಶ್‌ನ್ನು* (DSW) ಕಬ್ಬಿನ ಕಾಂಪೋಸ್ಟ್ ತಯಾರಿಕೆಯಲ್ಲಿ (ಅಥವಾ ಕಬ್ಬನ್ನು ಅರೆಯುವಿಕೆಯಲ್ಲಿ) ಯಾವ ಪ್ರಮಾಣದಲ್ಲಿ ಬಳಸಲಾಗುತ್ತದೆ? DSWನ್ನು ಸರಿಯಾದ ಪ್ರಮಾಣದ ಬಳಸುವಿಕೆಯಿಂದ ಮಣ್ಣಿನ ಫಲವತ್ತತೆಗೆ ಮತ್ತು ಸಸ್ಯಗಳ ಬೆಳವಣಿಗೆಗೆ ಅನುಕೂಲ ಮತ್ತು ಅಸಮರ್ಪಕ DSW ಬಳಕೆಯಿಂದ ಮಣ್ಣು, ನೀರು, ಸಸ್ಯ, ಜೀವ ಸಂಕುಲಕ್ಕೆ ತೀವ್ರ ಅಪಾಯ ಎಂದು ಜಾಲತಾಣದ ಅಧಿಕೃತ ದಾಖಲೆಗಳಲ್ಲಿ ನಮೂದಾಗಿದೆ. ಸಸ್ಯಗಳ DNA ಗಳನ್ನೂ ಬದಲಿಸಿ, ಶಾಶ್ವತವಾಗಿ ಅದರ ವಂಶವನ್ನೇ ಕುಂಠಿತಗೊಳಿಸುವಷ್ಟು ಅಪಾಯಕಾರಿ ಎಂದು ವರದಿಯಲ್ಲಿ ತಜ್ಞರ ಅಭಿಪ್ರಾಯ ಇದೆ. ಪ್ರಸ್ ಮಡ್ ಗೊಬ್ಬರಗಳ ಬಳಕೆಯ ಬಗ್ಗೆ ಎಲ್ಲ ರೈತರು ಮರು ಚಿಂತನೆ ಮಾಡಬೇಕಾದಷ್ಟು ಭಯಂಕರ ವಿಚಾರಗಳು ಜಾಲತಾಣಗಳಲ್ಲಿ ಈ ಕಬ್ಬಿನ ತ್ಯಾಜ್ಯವನ್ನು ಗೊಬ್ಬರವಾಗಿಸುವಾಗ ಬಳಸುವ DSW ಗಳಲ್ಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ಪ್ರೆಸ್‌ಮಡ್ ಗೊಬ್ಬರಗಳ ತಯಾರಿಕೆಯಲ್ಲಿ ಯಾವ ಪ್ರಮಾಣದ DSW ಬಳಸಲಾಗಿದೆ ಎಂಬ ಸ್ಪಷ್ಟವಾದ ಮತ್ತು ಅಧಿಕೃತ ಮಾಹಿತಿಗಳನ್ನು ಗೊಬ್ಬರ ತಯಾರಿಕಾ ಸಂಸ್ಥೆಗಳು, ಮಾರಾಟ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಗೊಬ್ಬರ ಬಳಸುವ ರೈತರಿಗೆ ನೀಡುತ್ತಿಲ್ಲ ಏಕೆ?
  7. ಕೆಲವು ರೈತರ ಅನುಮಾನ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಗೊಬ್ಬರಗಳಲ್ಲಿ ಪ್ರೆಸ್‌ಮಡ್ ಮಾತ್ರ ಬಳಸಲಾಗುತ್ತದೆಯಾ? ಜೊತೆಗೆ ಸಿಟಿ ವೇಸ್ಟ್ (ಹಸಿ ಕಸ), ಬೇರೆ ಸಸ್ಯ ಜನ್ಯ (ತೆಂಗು ಇತ್ಯಾದಿ) ವೇಸ್ಟ್‌ಗಳನ್ನು ಬಳಸಲಾಗುತ್ತದೆಯಾ? ಎಂದು ಕೇಳುತ್ತಿದ್ದಾರೆ.
  8. ಮೇಲಿನ ವಿಚಾರಗಳಿಗಲ್ಲದೆ, ಸಾವಯವ ಪ್ರೆಸ್ ಮಡ್ ಗೊಬ್ಬರದ ಬಗ್ಗೆ ರೈತರಿಗೆ ಕೊಡಬಹುದಾದ ಇತರ ಮಾಹಿತಿಗಳನ್ನೂ ಸೇರಿಸಿ ಸತ್ಯವಾದ, ಸ್ಪಷ್ಟವಾದ, ನಿಖರವಾದ ಮಾಹಿತಿಗಳನ್ನು, ಬಳಕೆಯ ವಿಧಾನಗಳನ್ನು ಅಧಿಕೃತ ದಾಖಲೆಗಳೊಂದಿಗೆ ಬ್ರೋಷರ್ ರೂಪದಲ್ಲಿ ಕೊಡಬಹುದಲ್ಲ? ಎಂಬುದು. ಆದರೆ, ಪ್ರೆಸ್‌ಮಡ್ ಗೊಬ್ಬರದ ವಿಚಾರದಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತಿಲ್ಲ.

ಆದರೆ, ಮಲೆನಾಡು, ಕರಾವಳಿ, ಬಯಲು ಸೀಮೆಗಳ ತೋಟಗಳಿಗೆ ಪ್ರೆಸ್‌ಮಡ್ ಗೊಬ್ಬರ ಮಸಾಲೆ ದೋಸೆಯಂತೆ ಬಿಕರಿಯಾಗುತ್ತಿದೆ. ಹಸುಗಳ ಕೊಟ್ಟಿಗೆ ಗೊಬ್ಬರ ಕ್ಷೀಣಿಸುತ್ತಿರುವುದರಿಂದ, ಬೇರೆ ದಾರಿ ಇಲ್ಲದೆ ಅಡಿಕೆ ಬೆಳೆಗಾರರು ಪ್ರೆಸ್‌ಮಡ್ ಗೊಬ್ಬರವನ್ನು, ಉತ್ತರ ಸಿಗದ ಪ್ರೆಶ್ನೆಗಳನ್ನೂ ಅಡಿಕೆ ಮರದ ಬುಡಕ್ಕೆ ಹಾಕಿ ಮಣ್ಣು ಮುಚ್ಚಿ ಬೇಸಾಯ ಮಾಡುತ್ತಿದ್ದಾರೆ! ಮಾರ್ಗದರ್ಶನ ನೀಡಬೇಕಾದ ಸರಕಾರದ ತೋಟಗಾರಿಕಾ ಇಲಾಖೆಯೂ ‘ಮೌನ ಬಂಗಾರ’ ಎಂಬಂತಿದೆ!

Exit mobile version