ಚಿಕ್ಕಬಳ್ಳಾಪುರ: ಮನೆ ಸೇರಿ 9 ಎಕರೆ ಜಮೀನನ್ನು ಕಿತ್ತುಕೊಂಡು ವೃದ್ಧೆಯನ್ನು ಮನೆಯಿಂದ ಹೊರಗೆ ಹಾಕಿದ್ದ ಪ್ರಕರಣದಲ್ಲಿ ಕೊನೆಗೂ ವೃದ್ಧೆಗೆ ನ್ಯಾಯ ಸಿಕ್ಕಿದೆ. ಪ್ರಕರಣದ ಬಗ್ಗೆ “ವಿಸ್ತಾರ ನ್ಯೂಸ್” ಮೂರು ದಿನಗಳ ಹಿಂದೆ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದರ ಪರಿಣಾಮ (vistara Impact) ಇದೀಗ ಮನೆ ಹಾಗೂ ಜಮೀನನ್ನು ವೃದ್ಧೆಗೆ ನೀಡಬೇಕು ಎಂದು ಎಸಿ ಕೋರ್ಟ್ ಆದೇಶ ಹೊರಡಿಸಿದ್ದು, ಆದೇಶ ಪ್ರತಿಯನ್ನು ಎಸಿ ಸಂತೋಷ್ ಕುಮಾರ್ ಅವರು ವೃದ್ಧೆಗೆ ಹಸ್ತಾಂತರಿಸಿದ್ದಾರೆ.
ಚಿಂತಾಮಣಿ ತಾಲೂಕಿನ ನಾಗರಾಜಹಳ್ಳಿ ಗ್ರಾಮದ ನಿವಾಸಿ ರಾಮಲಕ್ಷ್ಮಮ್ಮ (85) ಎಂಬುವವರು ಸೊಸೆ, ಮೊಮ್ಮಕ್ಕಳಿಂದ ಅನ್ಯಾಯಕ್ಕೊಳಗಾಗಿದ್ದರು. ವೃದ್ಧೆಯ ಗಂಡ ಮತ್ತು ಮಗ ಸತ್ತ ಮೇಲೆ ಜಮೀನನ್ನು ಸೊಸೆ ತನ್ನ ಖಾತೆಗೆ ಮಾಡಿಸಿಕೊಂಡಿದ್ದರು. ಬಳಿಕ ಜಮೀನು, ಮನೆ, ಆಸ್ತಿ ಕಿತ್ತುಕೊಂಡು ವೃದ್ಧೆಯನ್ನು ಬೀದಿಗೆ ತಳ್ಳಿದ್ದರು.
ನಾಲ್ಕು ವರ್ಷಗಳಿಂದ ಹೊಲ ಮತ್ತು ಹಿತ್ತಲಲ್ಲಿ ನರಕ ಅನುಭವಿಸುತಿದ್ದ ವೃದ್ಧೆಯ ಸಂಕಷ್ಟದ ಬಗ್ಗೆ ವಿಸ್ತಾರ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ವರದಿಗಾರಿಕೆಗೆ ತೆರಳಿದ್ದಾಗ ವಿಸ್ತಾರ ಪ್ರತಿನಿಧಿ ಮತ್ತು ಕ್ಯಾಮೆರಾಮ್ಯಾನ್ ಮೇಲೆ ವೃದ್ಧೆಯ ಮೊಮಕ್ಕಳಾದ ಶೃತಿ ಮತ್ತು ಶ್ವೇತಾ ಎಂಬುವರು ಹಲ್ಲೆಗೆ ಯತ್ನಿಸಿದ್ದರು. ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು, ವೃದ್ಧೆಗೆ ನ್ಯಾಯ ಕೊಡಿಸಲು ಕ್ರಮ ಕೈಗೊಂಡಿದ್ದಾರೆ.