ಗಂಗಾವತಿ: ತಾಲೂಕಿನ ಬಸವನದುರ್ಗ ಸರ್ಕಾರಿ ಶಾಲೆಯ (Government School) ಕೊಠಡಿಗಳ ದುಸ್ಥಿತಿ ಬಗ್ಗೆ ವಿಸ್ತಾರ ನ್ಯೂಸ್ ವರದಿ ಪ್ರಕಟಿಸುತ್ತಿದ್ದಂತೆ ಶಿಥಿಲಾವಸ್ಥೆಯ (Dilapidated rooms) ಕೊಠಡಿಗಳಿಗೆ ಬೀಗ ಹಾಕಲಾಗಿದೆ.
ಆನೆಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನದುರ್ಗ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 171 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಶಾಲಾ ಕಟ್ಟಡದ ಬಹುತೇಕ ಕೊಠಡಿಗಳ ಮೇಲ್ಛಾವಣಿಗಳು ಶಿಥಿಲಾವಸ್ಥೆ ತಲುಪಿದ್ದು, ಜೀವ ಭಯದಲ್ಲಿ ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.
ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದಾಗಿ ಶಿಥಿಲಾವಸ್ಥೆಯ ಮೇಲ್ಛಾವಣಿಗಳು ಮಳೆ ನೀರಿನಿಂದ ಸೋರುತ್ತಿವೆ. ಈ ಕುರಿತು ಇಂದು ವಿಸ್ತಾರ ನ್ಯೂಸ್ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಆ ಕೊಠಡಿಗಳಿಗೆ ಬೀಗ ಹಾಕಿದ್ದಾರೆ.
ಅಲ್ಲದೆ ಈ ಕುರಿತಂತೆ ಗಂಗಾವತಿ ತಹಸೀಲ್ದಾರ್ ಮಂಜುನಾಥ ಅವರು ವಿಸ್ತಾರ ನ್ಯೂಸ್ ಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಂದು ಸಭೆಯಲ್ಲಿರುವ ಕಾರಣ ನಾಳೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಇತ್ತ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಸಹ ವರದಿ ಗಮನಿಸಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.