Site icon Vistara News

Vistara News Launch | ಗಣಿನಾಡಿನಲ್ಲಿ ವಿಸ್ತಾರ ನ್ಯೂಸ್‌ ಚಾನೆಲ್‌ ಚಾಲನೆ ಸಂಭ್ರಮ

Vistara News Launch

| ಶಶಿಧರ್ ಮೇಟಿ, ಬಳ್ಳಾರಿ
ತನು ಮನ ತಂಪುಗೊಳಿಸಿದ ಯಲ್ಲನಗೌಡ ಮತ್ತು ಜಡೆಪ್ಪ ಗಾಯನ ಸುಧೆ, ಕಣ್ಮನ ತಣಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಜಿಲಾನ್ ಭಾಷಾ ತಂಡದ ಸಾಮೂಹಿಕ ನೃತ್ಯ, ನೆರೆದ ಜನರನ್ನು ನಗೆಗಡಲಲ್ಲಿ ತೇಲಿಸಿದ ಎರ‍್ರಿಸ್ವಾಮಿಯವರ ಹಾಸ್ಯ ಚಟಾಕಿಗಳು. ಇಂತಹ ವಿಶೇಷಗಳ ರಸದೌತಣ ಉಣಬಡಿಸಿದ್ದು ಸೋಮವಾರ ಗಣಿನಾಡಿನಲ್ಲಿ ನಡೆದ ವಿಸ್ತಾರ ಕನ್ನಡ ಸಂಭ್ರಮದ ವೇದಿಕೆ (Vistara News Launch).

ಬಳ್ಳಾರಿಯ ಅನಂತಪುರ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಪತಂಜಲಿ ಯೋಗ ಸಮಿತಿ‌ ಸಹಯೋಗದಲ್ಲಿ ಆಯೋಜಿಸಿದ್ದ ʼವಿಸ್ತಾರ ಕನ್ನಡ ಸಂಭ್ರಮʼ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಕಲೆ, ಹಾಸ್ಯ, ಸಂಗೀತ ಸುಧೆಯನ್ನು ಸವಿದರು. 10 ಗಂಟೆಯಿಂದ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 1.30ರವರೆಗೆ ನಡೆಯಿತು.

ಇದನ್ನೂ ಓದಿ | Vistara news launch | ಮಾಧ್ಯಮಗಳು ಜನಪರವಾಗಿರುವುದು ನಿರ್ಣಾಯಕ : ಕೇಂದ್ರ ಸಚಿವ ಎಲ್.‌ ಮುರುಗನ್

ಹಲವು ಹೊಸತನದ ಹರಿಕಾರ ಕೋಣೆಮನೆ
ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮಿ ಅವರು ಮಾತನಾಡಿ, ರಾಜ್ಯದ ಪ್ರಮುಖ ಎರಡು ದಿನ ಪತ್ರಿಕೆಯ ಏಳಿಗೆಗೆ ಕಾರಣವಾಗಿರುವ ಹರಿಪ್ರಕಾಶ ಕೋಣೆಮನೆ ಅವರು ವಿಸ್ತಾರ ನ್ಯೂಸ್ ಆರಂಭಿಸಿದ್ದಾರೆ. ಅವರಿಗೆ ಯಶಸ್ಸು‌ ಸಿಕ್ಕೇ ಸಿಗುತ್ತದೆ. ವಿಸ್ತಾರ ನ್ಯೂಸ್ ಆ್ಯಪ್ ಮೂಲಕ ವಿಸ್ತಾರ ಸಾರ್ವಜನಿಕರ ಗಮನ ಸೆಳೆದಿದೆ. ಎರಡು ಪತ್ರಿಕೆಗಳಲ್ಲಿ ಹಲವು ವಿನೂತನ ಕಾರ್ಯಕ್ರಮದ ಮೂಲಕ ಪತ್ರಿಕೆ ಏಳಿಗೆಗೆ ಶ್ರಮಿಸಿರುವ ಅನುಭವದ ಹರಿಪ್ರಕಾಶ್ ಅವರು ಎಂತಹ ಸವಾಲುಗಳಿದ್ದರೂ ಸುಲಭವಾಗಿ‌ ಜಯಿಸಬಲ್ಲರು ಎಂದು ಹೇಳಿದರು.

ಏಕೀಕರಣ ಕಿಡಿ ಹೊತ್ತಿಸಿದ ಜಿಲ್ಲೆ ಬಳ್ಳಾರಿ
ಕನ್ನಡ ಭಾಷೆ ಹಾಗೂ ಈ ನೆಲದ ಪರಂಪರೆ ಉಳಿಸುವಲ್ಲಿ ಬಳ್ಳಾರಿ ಜಿಲ್ಲೆ ಈ ಹಿಂದೆ ಬಹುದೊಡ್ಡ ಕೆಲಸ ಮಾಡಿದೆ‌. ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ 1953ರ ಅ.2ರಂದು ನಡೆದ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಅಖಂಡ ಕರ್ನಾಟಕವೇ ನನ್ನ ಜೀವನದ ಗುರಿ ಎಂದು ಘೋಷಣೆ ಮಾಡಿದರು. ಇಡೀ ರಾಜ್ಯದಲ್ಲಿ ಈ ರೀತಿಯ ಘೋಷಣೆಯಾದ ಏಕೈಕ ಜಾಗ ಬಳ್ಳಾರಿ. ಏಕೀಕರಣದ ಹೋರಾಟಕ್ಕೆ ಹುತಾತ್ಮರಾದ ಏಕೈಕ ಕನ್ನಡಿಗ ಬಳ್ಳಾರಿಯ ಪೈಲ್ವಾನ್ ರಂಜಾನ್‌ಸಾಬ್ ಎಂಬುದು ಈ ನೆಲದ ಹೆಮ್ಮೆಯಾಗಿದೆ ಎಂದು ವಿರಕ್ತ ಮಠದ ಪ್ರಭುಸ್ವಾಮಿ ಹೇಳಿದರು.

ವಿಸ್ತಾರದ ಸಮಗ್ರ ಚಿತ್ರಣದ ಮಾಹಿತಿ ಪತ್ರ ಬಿಡುಗಡೆ
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ನಗರ ಶಾಸಕ ಸೋಮಶೇಖರ್ ರೆಡ್ಡಿ, ಜೆಡಿಎಸ್ ಮುಖಂಡ ಎನ್ ಪ್ರತಾಪ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಸೇರಿದಂತೆ ನೂರಾರು ಮಂದಿ ವಿಸ್ತಾರ ಕನ್ಮಡ ಸಂಭ್ರಮಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ವಿಸ್ತಾರದ ಸಮಗ್ರ ಚಿತ್ರಣದ ಕಿರು ಮಾಹಿತಿ ಪತ್ರವನ್ನು (brochure) ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ನಂತರ ಅಪ್ಪಟ ಉತ್ತರ ಕರ್ನಾಟಕದ ಭೋಜನವನ್ನು‌ ಸವಿದು, ವಿಸ್ತಾರ ಚಾನಲ್‌ಗೆ ಶುಭ ಹಾರೈಸಿದರು.

ಇದನ್ನೂ ಓದಿ | Vistara mews launch | ವಿಸ್ತಾರ ನ್ಯೂಸ್‌ ಕರ್ನಾಟಕದ ಗಡಿ ದಾಟಲಿ: ವಿಸ್ತಾರ ನ್ಯೂಸ್‌ ಚಾನೆಲ್‌ಗೆ ಮುಖ್ಯಮಂತ್ರಿ ಶುಭ ಹಾರೈಕೆ

Exit mobile version