ರಾಮದುರ್ಗ: ಕನ್ನಡ ಭಾಷೆ ಬಳಕೆ ಹೆಚ್ಚಿಸುವ ಜತೆಗೆ ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ತೊಂಡಿಕಟ್ಟಿ ಗ್ರಾಮದ ಗಾಳೇಶ್ವರ ಮಠದ ಅವಧೂತ ಅಭಿನವ ವೆಂಕಟೇಶ ಸ್ವಾಮೀಜಿ ಪ್ರತಿಪಾದಿಸಿದರು.
ಪಟ್ಟಣದ ಮರಾಠಿ ಮಂಗಲ ಕಾರ್ಯಾಲಯದಲ್ಲಿ ವಿಸ್ತಾರ ನ್ಯೂಸ್ ಚಾನೆಲ್ ವತಿಯಿಂದ ಏರ್ಪಡಿಸಲಾಗಿದ್ದ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಪ್ರೇಮ ಹಾಗೂ ಬಳಕೆ ಕ್ಷೀಣವಾಗುತ್ತಿದೆ. ಕನ್ನಡ ಬೆಳೆಸುವ ಕೆಲಸ ಮಾಧ್ಯಮಗಳು ಮಾಡಬೇಕು. ವಿಸ್ತಾರ ನ್ಯೂಸ್ ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂಬ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತಪಡಿಸಿದರು.
ನೈತಿಕತೆ, ಧಾರ್ಮಿಕತೆ, ರಾಷ್ಟ್ರೀಯತೆ ಕುರಿತಾದ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ಆಗಲೇ ಎಲ್ಲ ವರ್ಗದ ಜನರನ್ನು ಸೆಳೆಯಲು ಸಾಧ್ಯವಾಗುತ್ತದೆ. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನೋಡಿದಂತಹ ಖುಷಿಯು ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸಿಕ್ಕಿತು. ರಾಜ್ಯಾದ್ಯಂತ ಕನ್ನಡ ಕಂಪು ಸೂಸುವ ಕೆಲಸವನ್ನು ವಿಸ್ತಾರ ಮಾಡುತ್ತಿರುವುದು ಅಭಿನಂದನೆಗೆ ಅರ್ಹ. ರೈತರ ಪರವಾದ ನಿಲುವನ್ನು ವಿಸ್ತಾರ ತೆಗೆದುಕೊಳ್ಳಬೇಕು, ರೈತರ ಬೆನ್ನಿಗೆ ನಿಲ್ಲುವ ಜತೆಗೆ ರೈತರ ಸಮಸ್ಯೆಗಳ ಬಗ್ಗೆ ವಿಸ್ತಾರ ನ್ಯೂಸ್ ಬೆಳಕು ಚೆಲ್ಲಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮಂಗನ ಕಾಯಿಲೆ ಲಸಿಕೆಯ ಕಾರ್ಯಕ್ಷಮತೆ ಪರೀಕ್ಷೆ ನಡೆಯಲಿ
ಕನ್ನಡಿಗರು ಕಟ್ಟಿರುವ ವಿಸ್ತಾರ ನ್ಯೂಸ್
ಶಾಸಕ ಮಹಾದೇವಪ್ಪ ಯಾದವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಿಗರೇ ಕಟ್ಟಿದ ವಿಸ್ತಾರ ನ್ಯೂಸ್ ಚಾನೆಲ್ ನಾಡಿನುದ್ದಕ್ಕೂ ಪಸರಿಸಲಿ. ಪ್ರತಿಯೊಬ್ಬ ಕನ್ನಡಿಗನೂ ಈ ಸುದ್ದಿವಾಹಿನಿಯನ್ನು ನೋಡುವ ಮೂಲಕ ಈ ಚಾನೆಲ್ ಅನ್ನು ಬೆಳೆಸಬೇಕು. ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿರುವ ಹರಿಪ್ರಕಾಶ ಕೋಣೆಮನೆ ಅವರು ಕನ್ನಡದ ಮಾಧ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ಸಮಾಜ-ಸರ್ಕಾರದ ಕೊಂಡಿಯಾಗಿ ವಿಸ್ತಾರ ಕೆಲಸ ಮಾಡಲಿ ಎಂದು ಆಶಿಸಿದರು.
ಕಾಂಗ್ರೆಸ್ ಮುಖಂಡ ರಾಜೇಂದ್ರ ಪಾಟೀಲ, ಬಿಜೆಪಿ ಮುಖಂಡ ಡಾ. ಕೆ.ವಿ ಪಾಟೀಲ, ರಾಮದುರ್ಗ ತಹಶಿಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಜಿಪಂ ಮಾಜಿ ಸದಸ್ಯ ರೇವಪ್ಪ ಸೋಮನಗೊಂ ಅತಿಥಿಗಳಾಗಿದ್ದರು. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಸಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ವಿಸ್ತಾರ ನ್ಯೂಸ್ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ರೈತ ಸಂಘಟನೆ ಮುಖಂಡರು ವಿಸ್ತಾರ ರಾಮದುರ್ಗ ತಾಲೂಕು ವರದಿಗಾರ ಸಿದ್ದು ಮೋಹಿತೆ ಅವರನ್ನು ಸನ್ಮಾನಿಸಿದರು. ರಾಮದುರ್ಗ ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಇದನ್ನೂ ಓದಿ | ಸವಿಸ್ತಾರ ಅಂಕಣ | ಆರ್‌ಎಸ್‌ಎಸ್ ಚಿಂತನೆಗಳೊಂದಿಗೆ ಬಿಜೆಪಿ ನಾಯಕರ ಆಲೋಚನೆಗಳೇಕೆ ತಾಳೆ ಆಗುತ್ತಿಲ್ಲ?