ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಅರ್ಥಪೂರ್ಣವಾಗಿ ಹಾಗೂ ಬಹಳ ಸಂಭ್ರಮದಿಂದ ಬುಧವಾರ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ನಾಡಿಗೆ ತಾಜಾ ಸುದ್ದಿಗಳನ್ನು ನೀಡುವ ಮೂಲಕ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ವಿಸ್ತಾರ ಚಾನೆಲ್ ವಿಸ್ತಾರವಾಗಿ, ಬಾನೆತ್ತರಕ್ಕೆ ಬೆಳೆಯಲಿ. ಚಾನೆಲ್ ಆರಂಭಿಸಿರುವ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಮಾಧ್ಯಮ ಧರ್ಮವನ್ನು ಪಾಲನೆ ಮಾಡುವ ಜತೆಗೆ ಸಾರ್ವಜನಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ವಿಸ್ತಾರ ನ್ಯೂಸ್ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ವಿಸ್ತಾರ ಕನ್ನಡ ಸಂಭ್ರಮದಲ್ಲಿ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಗ್ರಾಮೀಣ ಹಾಗೂ ಜಾನಪದ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಸ್ತಾರ ವೇದಿಕೆಯಲ್ಲಿ ಮೇಳೈಸಿದವು. ಕಂಸಾಳೆ, ಕೋಲಾಟ, ಮಹಿಳೆಯರ ಡೊಳ್ಳುಕುಣಿತ, ಭರತನಾಟ್ಯ ಸೇರಿ ಕಾರ್ಯಕ್ರಮಗಳು ಆಕರ್ಷಣೀಯವಾಗಿದ್ದವು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 9 ಮಂದಿ ಸಾಧಕರಿಗೆ ಕಾಯಕಯೋಗಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇದಕ್ಕೂ ಮೈಸೂರು ವೃತ್ತದಲ್ಲಿ ತಹಸೀಲ್ದಾರ್ ಗೋವಿಂದ ರಾಜು ಧ್ವಜಾರೋಹಣ ಮಾಡಿದರು. ಮೈಸೂರು ವೃತ್ತದಿಂದ ಡೊಳ್ಳು ಕುಣಿತದೊಂದಿಗೆ ಮಕ್ಕಳು, ಗಣ್ಯರು ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಲಾಯಿತು.
ಇದನ್ನೂ ಓದಿ | Vistara News Launch | ಮಂಗಳೂರಿನಲ್ಲಿ ವಿಸ್ತಾರ ನ್ಯೂಸ್ ಕನ್ನಡ ಸಂಭ್ರಮ