ಕೆ.ಆರ್.ಪುರ: ನಗರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಬೆಂಗಳೂರು ಪೂರ್ವ ತಾಲೂಕು ತಹಸೀಲ್ದಾರ್ ಅಜಿತ್ ಕುಮಾರ್ ರೈ ಉದ್ಘಾಟಿಸಿದರು.
ನಂತರ ಮಾತನಾಡಿದ ತಹಸೀಲ್ದಾರ್ ಅಜಿತ್ ಕುಮಾರ್ ರೈ, ಇಡೀ ಸಮಾಜ ಕ್ಯಾಮೆರಾದ ಕಣ್ಗಾವಲಿನಲ್ಲಿದೆ. ಮಾಧ್ಯಮಗಳು ಇಲ್ಲದಿದ್ದಲ್ಲಿ ಸಮಾಜ ಇಷ್ಟೊಂದು ಸುವ್ಯವಸ್ಥಿತವಾಗಿ ಇರುತ್ತಿರಲಿಲ್ಲ. ಜನಸಾಮಾನ್ಯರಿಂದ ಮೇಲ್ದರ್ಜೆಯವರೆಗೂ ಏನೇ ತಪ್ಪು ಮಾಡಿದರೂ ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಹೀಗಾಗಿ ಪ್ರತಿಯೊಬ್ಬರಿಗೂ ಭಯ ಇದೆ. ವಿಸ್ತಾರ ಚಾನೆಲ್ ಸಹ ಅತ್ಯಂತ ಸ್ಪಷ್ಟವಾಗಿ ಸಾಮಾಜಿಕ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ವಿಸ್ತಾರ ಬಳಗಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ | Vistara News Launch | ಅತಿರಂಜಿತ, ನಿರುಪಯುಕ್ತ ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುತ್ತು: ಹರ್ಷವರ್ಧನ್
ಪ್ರಜಾಪ್ರಭುತ್ವದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯಾ ಎಂದು ನಿಗಾ ಇಡುವ ಬಹು ಮುಖ್ಯವಾದ ನಾಲ್ಕನೇ ಅಂಗವೇ ಮಾಧ್ಯಮ ಕ್ಷೇತ್ರವಾಗಿದೆ. ರಾಜ್ಯದಲ್ಲಿ ನಡೆಯುವ ಘಟನಾವಳಿಗಳನ್ನು ಕೆಲ ನಿಮಿಷಗಳಲ್ಲಿ ಮನೆ ಮನೆಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಸರ್ಕಾರಿ ಶಾಲೆಯಲ್ಲಿ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಮೂರ್ತಿ ಮಾತನಾಡಿ, ನಿಖರ ಹಾಗೂ ವಸ್ತುನಿಷ್ಠ ಸುದ್ದಿಗಳನ್ನು ನೀಡುವ ಚಾನೆಲ್‌ಗಳನ್ನು ಜನರು ಹೆಚ್ಚಾಗಿ ನೋಡುತ್ತಾರೆ. ಸಾಮಾಜಿಕ ನ್ಯಾಯ ಒದಗಿಸುವಂತಹ ನಿಟ್ಟಿನಲ್ಲಿ ವಿಸ್ತಾರ ಚಾನೆಲ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದ ಅವರು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರದ ಜತೆಗೆ ಎನ್‌ಜಿಒ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಮುಖಂಡರು ಕೈಜೋಡಿಸುತ್ತಿದ್ದರು. ಈಗ ವಿಸ್ತಾರ ಚಾನೆಲ್ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನ ಹಮ್ಮಿಕೊಂಡಿರುವುದು ಮೆಚ್ಚುಗೆಯ ವಿಷಯ ಎಂದರು.
ನಗರಸಭಾ ಮಾಜಿ ಸದಸ್ಯ ಅಂತೋನಿಸ್ವಾಮಿ ಮಾತನಾಡಿ, ಮಾಧ್ಯಮಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ವೈಯಕ್ತಿಕವಾಗಿ ಯಾರೊಬ್ಬರ ತೇಜೋವಧೆ ಮಾಡಬಾರದು. ಯಾರೇ ತಪ್ಪು ಮಾಡಿದರೂ ತಿದ್ದಿ, ಸರಿ ದಾರಿಗೆ ತರಿಸುವ ಕೆಲಸ ಮಾಡಬೇಕು. ವಿಸ್ತಾರದಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.
ಇದನ್ನೂ ಓದಿ | Vistara News Launch | ವಿಸ್ತಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ: ವಿರೂಪಾಕ್ಷಪ್ಪ ಬಳ್ಳಾರಿ