Site icon Vistara News

Vistara News Launch | ಮೊಳಕಾಲ್ಮೂರಿನಲ್ಲಿ ಸಡಗರದ ವಿಸ್ತಾರ ಕನ್ನಡ ಸಂಭ್ರಮ

Vistara News Launch chithradurga

ಚಿತ್ರದುರ್ಗ: ಇಲ್ಲಿನ ಮೊಳಕಾಲ್ಮೂರು ತಾಲೂಕಿನ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ವಿಸ್ತಾರ ನ್ಯೂಸ್ ಚಾನೆಲ್ ವತಿಯಿಂದ (Vistara News Launch) ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.

ಜನರ ನಾಡಿಮಿಡಿತ ಅರಿಯಲಿ
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಸುರೇಶ್ ಕುಮಾರ್, ವಿಸ್ತಾರ ಸುದ್ದಿವಾಹಿನಿ ನಿಖರ, ಜನಪರ ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭವಾಗಿದೆ. ಜನರ ನಾಡಿಮಿಡಿತ ಅರಿತು ಸುದ್ದಿ ನಿಖರತೆಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಸಾಗಲಿ ಎಂದು ಆಶಿಸಿದರು. ಮಾಧ್ಯಮ ಜಗತ್ತು ವಿಸ್ತಾರವಾಗಿ ಬೆಳೆಯುತ್ತಿರುವ ಇಂದಿನ ದಿನಮಾನದಲ್ಲಿ ಕರ್ನಾಟಕದ ಜನರ ಹೃದಯದಲ್ಲಿ ವಿಸ್ತಾರ ಸುದ್ದಿ ವಾಹಿನಿ ವಿಸ್ತಾರವಾಗಿ ಬೆಳೆಯಲಿ ಎಂದರು‌.

ಮನೆ ಮನೆಗಳಿಗೂ ವಿಸ್ತಾರ
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ್, ವಿಸ್ತಾರ ಸುದ್ದಿ ವಾಹಿನಿ ಈಗಾಗಲೇ ಡಿಜಿಟಲ್ ಮಾಧ್ಯಮದಲ್ಲಿ ತನ್ನದೇ ಆದ ವಿಸ್ತಾರವಾದ ಓದುಗರ ಬಳಗವನ್ನು ಹೊಂದಿದ್ದು, ಇದೀಗ ಪ್ರತಿ ಮನೆ ಮನೆಗಳಿಗೂ ಮೂಡಿ ಬರುತ್ತಿದೆ. ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪತ್ರಿಕೆಗಳ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿ, ಈಗ ತಮ್ಮದೇ ಸ್ವಂತ ಸಂಸ್ಥೆಯ ಮೂಲಕ ಜನಪರ ಕಾಳಜಿಯೊಂದಿಗೆ ಸಮಾಜದ ಬದಲಾವಣೆಗೆ ಮುಂದಾಗಿರುವ ಹರಿಪ್ರಕಾಶ್ ಕೋಣೆಮನೆಯವರ ನೇತೃತ್ವದಲ್ಲಿ ಮೂಡಿಬರುತ್ತಿರುವ ಸುದ್ದಿ ಸಂಸ್ಥೆ ವಿಶಾಲವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ವಿಭಿನ್ನ ಬಗೆಯ ಆಲೋಚನೆಗಳ ಮೂಲಕ ಎಲ್ಲರ ಮನವನ್ನು ತಲುಪಲಿ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮತ್ತು ಸರ್ಕಾರಕ್ಕೆ ಕೊಂಡಿಯಂತೆ ಕೆಲಸ ನಿರ್ವಹಿಸುವ ಮಾಧ್ಯಮಗಳ ಪಾತ್ರ ಹಿರಿದಾದದ್ದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವಲ್ಲಿ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸಿವೆ. ಆಧ್ಯಾತ್ಮಿಕತೆ, ಯೋಗ ಮತ್ತು ಭಕ್ತಿಯನ್ನು ಜನರಿಗೆ ಮೂಡಿಸುವ ಓಂಕಾರ ಯೂಟ್ಯೂಬ್‌ ಚಾನೆಲ್ ಸಹ ಯಶಸ್ವಿಯಾಗಿ ಮೂಡಿಬರುತ್ತಿರುವುದು ಹೊಸ ಪ್ರಯತ್ನವಾಗಿದೆ ಎಂದು ಹೇಳಿದರು.

ವಿಭಿನ್ನ ಬಗೆಯ ಆಲೋಚನೆಗಳ ಮೂಲಕ ಎಲ್ಲರ ಮನವನ್ನು ತಲುಪಲಿ. ಹಿರಿಯ ಪತ್ರಕರ್ತರು,ಅನುಭವಿಗಳು ವಿಮರ್ಶತ್ಮಕ ಬರವಣಿಗೆಯ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹರಿಪ್ರಕಾಶ್ ಕೋಣೆಮನೆಯವರ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಸುದ್ದಿ ವಾಹಿನಿಗೆ ಶುಭವಾಗಲಿ ಎಂದು ಹಾರೈಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಟಿ.ಟಿ. ರವಿಕುಮಾರ್, ಉಪಾಧ್ಯಕ್ಷರಾದ ಮಂಜಣ್ಣ, ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ರೈತ ಸಂಘದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್‌ ಮನೆಮಾತಾಗಲಿ, ಯಶಸ್ಸು ಸಾಧಿಸಲಿ: ಪಿ.ಎಂ.ಪ್ರಸನ್ನ

Exit mobile version