ಬೆಂಗಳೂರು: ವಿಸ್ತಾರ ವಾಹಿನಿ ಆರಂಭಿಸುವಾಗ, ನೀವು ವ್ಯವಹಾರದಲ್ಲಿರುವವರು, ನಿಮಗೆ ಈ ಮಾಧ್ಯಮದ ವ್ಯವಹಾರ ಯಾಕೆ ಬೇಕು ಎಂದು ಕೆಲವರು ಪ್ರಶ್ನಿಸಿದ್ದರು. ಆದರೆ, ನಾವು ಖಂಡಿತವಾಗಿಯೂ ಮಾಧ್ಯಮವನ್ನು ಹಣಕ್ಕಾಗಿ ಅಥವಾ ಲಾಭದ ಉದ್ದೇಶಕ್ಕೆ ಮಾಡಿಲ್ಲ. ಒಂದು ಉತ್ತಮ ಧ್ಯೇಯವನ್ನು ಇಟ್ಟುಕೊಂಡು ಚಾನೆಲ್ (Vistara Kannada Sambhrama) ಮಾಡಿದ್ದೇವೆ ಎಂದು ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಚೇರ್ಮನ್ ಡಾ. ಎಚ್. ಎಸ್. ಶೆಟ್ಟಿ ತಿಳಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಮನುಷ್ಯನಿಗೆ ಬೇರೆ ಬೇರೆ ಕನಸುಗಳು, ಆಶಯ ಇರುತ್ತದೆ. ನಮಗೆ ಯಾವುದು ಮಾಡಲು ಸಾಧ್ಯವಿಲ್ಲವೋ, ಬೇರೆ ಯಾರಾದರೂ ಒಳ್ಳೆ ಕೆಲಸ ಮಾಡುತ್ತಿದ್ದರೆ ಅಂತಹವರಿಗೆ ಸಹಕಾರ ಕೊಡಬೇಕು ಎಂದು ನಾವೆಲ್ಲಾ ಸೇರಿ ವಿಸ್ತಾರ ನ್ಯೂಸ್ ಶುರು ಮಾಡಿದ್ದೇವೆ ಎಂದು ಹೇಳಿದರು.
ಒಂದು ವರ್ಷವನ್ನು ನಾವು ಕಳೆದಿದ್ದೇವೆ, ಈ ಸಂದರ್ಭದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಕಷ್ಟ ಸುಖವನ್ನು ಕರಗತ ಮಾಡಿಕೊಂಡಿದ್ದೇವೆ. ಕೆಲವರು ಈ ಚಾನೆಲ್ ಎರಡು ಮೂರು ತಿಂಗಳಲ್ಲಿ ಚಾನೆಲ್ ಮುಚ್ಚಿಹೋಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ಒಂದು ವರ್ಷ ಸುಗಮ, ಸುಸೂತ್ರವಾಗಿ ಚಾನೆಲ್ ನಡೆಸಿದ್ದೇವೆ. ಇನ್ನು ಮುಂದೆ ಕೂಡ ಈ ಅನುಭವವನ್ನು ಬಳಸಿಕೊಂಡು ವಿಸ್ತಾರ ವಾಹಿನಿಯನ್ನು ಉತ್ತಮವಾಗಿ ಮುನ್ನಡೆಸುತ್ತೇವೆ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದ ಎಂದು ತಿಳಿಸಿದರು.
ಜನರ ಪರವಾಗಿ ಮಿಡಿಯುತ್ತಿರುವ ವಿಸ್ತಾರ ನ್ಯೂಸ್ ಸಾಧನೆ ಬಿಚ್ಚಿಟ್ಟ ಹರಿಪ್ರಕಾಶ್ ಕೋಣೆಮನೆ
ಸದಭಿರುಚಿ ಉದ್ದೇಶದೊಂದಿಗೆ ಪ್ರಾರಂಭವಾದ ವಿಸ್ತಾರ ನ್ಯೂಸ್ ಇಂದು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದೆ. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪಾರದರ್ಶಕ ಮತ್ತು ಗುಣಮಟ್ಟದ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಅಲ್ಲದೆ, ಜನ ಪರ ಅಭಿಯಾನಗಳ ಮೂಲಕ ಜನರನ್ನೂ ಒಳಗೊಂಡು ಮುನ್ನಡೆಯುತ್ತಿದೆ. ಇಂದು ನಮ್ಮೂರ ಶಾಲೆ – ನಮ್ಮೆಲ್ಲರ ಶಾಲೆ ಅಭಿಯಾನದಿಂದ ರಾಜ್ಯದ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ನಾವು ಕಾರಣರಾಗಿದ್ದೇವೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದು ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಈಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರು ನಮ್ಮ ವಿಸ್ತಾರ ಚಾನೆಲ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಅಂದು ಆಡಿದ ಮಾತನ್ನು ನಾನು ನೆನೆಪಿಸಿಕೊಳ್ಳಲು ಇಷ್ಟಪಡುತ್ತೇನೆ. ಒಂದು ಚಾನೆಲ್ ಅನ್ನು ನಡೆಸುವುದು ಕಷ್ಟಸಾಧ್ಯ. ಅದರಲ್ಲೂ ಒಂದು ಸದುದ್ದೇಶ ಇಟ್ಟುಕೊಂಡು, ಸದಭಿರುಚಿಯ ಸುದ್ದಿಗಳನ್ನು ನೀಡಿ ಉಳಿದುಕೊಳ್ಳುವುದು ಬಹಳ ಕಷ್ಟ. ಈ ಸವಾಲುಗಳನ್ನು ಮೀರಿ ವಿಸ್ತಾರ ನ್ಯೂಸ್ ಬೆಳೆಯಲಿ ಎಂದು ಹೇಳಿದ್ದರು. ಈಗ ವಿಸ್ತಾರ ನ್ಯೂಸ್ ಎಲ್ಲ ಸವಾಲುಗಳನ್ನು ಮೀರಿ ಮುನ್ನಡೆಯುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಹೇಳಿದರು.
ನಮ್ಮದು ಸದಾ ನಿಖರ – ಜನಪರ
ಜಗತ್ತು ಯಾವಾಗಲೂ ಚಲನಶೀಲತೆಯನ್ನು ಹೊಂದಿರುತ್ತದೆ. ಇದು ಎಲ್ಲದಕ್ಕೂ ಅನ್ವಯವಾಗುತ್ತದೆ. ಮುದ್ರಣ ಮಾಧ್ಯಮದ ಸಹಿತ ಸುದ್ದಿ ವಾಹಿನಿಯೂ ಸಹ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಎಂಬ ಮಾತು ಈಗ ಕೇಳಿ ಬರುತ್ತಿದೆ. ಆದರೆ, ಈಗಿನ ಬದಲಾವಣೆಗಳಿಗೆ ತಕ್ಕಂತೆ ನಮ್ಮಲ್ಲಿ ನಾವು ಬದಲಾವಣೆಯನ್ನು ತಂದುಕೊಂಡರೆ ಸಾಧನೆ ಸುಲಭವಾಗುತ್ತದೆ. ನಾವು ಆ ನಿಟ್ಟಿನಲ್ಲಿ ಈಗ ಹೆಜ್ಜೆ ಹಾಕಿ ಸಾಧನೆ ಮಾಡಿದ್ದೇವೆ. ನಮ್ಮ ಚಾನೆಲ್‌ನ ಧ್ಯೇಯ ವಾಕ್ಯವೇ ನಿಖರ – ಜನಪರ ಎಂಬುದಾಗಿದೆ. ನಾವು ಸುದ್ದಿಯನ್ನು ನಿಖರವಾಗಿ ಬಿತ್ತರಿಸುವುದರ ಜತೆಗೆ ಜನರ ಪರವಾದಂತಹ ಸುದ್ದಿಗಳನ್ನು ನೀಡುತ್ತೇವೆ. ಅದಕ್ಕೇ ನಾವು ಜನಪ್ರಿಯ ಎಂದು ಹಾಕಿಕೊಂಡಿಲ್ಲ. ಜನಪರ ಎಂದು ಹಾಕಿಕೊಂಡಿರುವುದೇ ಸದಾ ನಾವು ಜನರ ಪರ ಎಂಬುದನ್ನು ಹೇಳಲು ಎಂದು ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಇದನ್ನೂ ಓದಿ | Vistara Kannada Sambhrama : ವಿಸ್ತಾರ ನ್ಯೂಸ್‌ನ ಶೈಕ್ಷಣಿಕ, ಜನಪರ ಕಾಳಜಿ ಶ್ಲಾಘನೀಯ: ಡಿ.ಕೆ. ಶಿವಕುಮಾರ್ ಮೆಚ್ಚುಗೆ
ನಾವು ವಿಷಯವನ್ನು ಎತ್ತರಿಸುತ್ತೇವೆ – ಧ್ವನಿಯನ್ನಲ್ಲ
ನಾವು ಧ್ವನಿಯನ್ನು ಎತ್ತರ ಮಾಡುವುದಿಲ್ಲ. ವಿಷಯವನ್ನು ಎತ್ತರಿಸುತ್ತೇವೆ ಎಂಬುದನ್ನು ನಮ್ಮ ಸುದ್ದಿವಾಹಿನಿಯನ್ನು ಪ್ರಾರಂಭ ಮಾಡುವ ದಿನದಿಂದಲೂ ನಾವು ಹೇಳುತ್ತಾ ಬಂದಿದ್ದೇವೆ. ಅಂದರೆ ನಾವೂ ಹೇಳುತ್ತೇವೆ, ಜನರು ಹೇಳುವುದನ್ನೂ ಕೇಳುತ್ತೇವೆ. ನಮಗೂ ಒಂದು ಹೊಣೆಗಾರಿಕೆ ಇದೆ. ನಾವು ಸಿಎಂ, ಡಿಸಿಎಂ, ಪ್ರಧಾನ ಮಂತ್ರಿ, ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ಹಾಗಾದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬಾರದಾ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ನಾವು ವಿಸ್ತಾರ ನ್ಯೂಸ್ ಚಾನೆಲ್ ಅನ್ನು ಪ್ರಾರಂಭ ಮಾಡಿದ್ದೇವೆ. ಇದಕ್ಕಾಗಿಯೇ ನಾವು ನಮ್ಮ ಘೋಷವಾಕ್ಯವಾಗಿ ನಿಖರ ಹಾಗೂ ಜನಪರ ಎಂದು ಇಟ್ಟಿರುವುದು ಎಂದು ಹೇಳುವ ಮೂಲಕ ವಿಸ್ತಾರ ನ್ಯೂಸ್‌ನ ಸದ್ದುದ್ದೇಶವನ್ನು ಹರಿಪ್ರಕಾಶ್ ಕೋಣೆಮನೆ ಅವರು ಜನರ ಮುಂದೆ ತೆರೆದಿಟ್ಟರು.
ಡಿಸಿಎಂ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ವಿಸ್ತಾರ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಎಚ್. ವಿ. ಧರ್ಮೇಶ್, ನಿರ್ದೇಶಕ ಶ್ರೀನಿವಾಸ ಹೆಬ್ಬಾರ್, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸ್ಪೆಷಲ್ ಆಪರೇಷನ್ಸ್ ಸಂಪಾದಕ ಕಿರಣ್ ಕುಮಾರ್ ಡಿ.ಕೆ. ಸೇರಿ ಹಲವು ಗಣ್ಯರು, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.