ಬೆಂಗಳೂರು: ವಿಸ್ತಾರ ನ್ಯೂಸ್ ಚಾನೆಲ್‌ನ ಅದ್ಧೂರಿ ಲೋಕಾರ್ಪಣೆ (Vistara News Launch) ಜತೆಗೆ ವಿಸ್ತಾರ ಮೀಡಿಯಾದ್ದೇ ಅಂಗ ಸಂಸ್ಥೆಯಾದ ವಿಸ್ತಾರ ಪ್ರಕಾಶನಕ್ಕೂ ಚಾಲನೆ ನೀಡಲಾಗಿದೆ. ಹಾಗೆಯೇ, ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ರಚಿಸಿದರು ವಿಸ್ತಾರ ಭಾಗ 1 (ಹೊಸ ತಿಳಿವಿನ ಬಾಗಿಲು) ಹಾಗೂ ವಿಸ್ತಾರ ಭಾಗ 2 (ಹರಿವ ನದಿಗೆ ಸಾವಿರ ಕಾಲು) ಎಂಬ ಪುಸ್ತಕಗಳನ್ನೂ ಬಿಡುಗಡೆ ಮಾಡಲಾಯಿತು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಪುಸ್ತಕ ಪ್ರಕಾಶನ ಹಾಗೂ ಪುಸ್ತಕಗಳ ಬಿಡುಗಡೆ ನೆರವೇರಿಸಿದರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಪುಸ್ತಕಗಳನ್ನು ಪರಿಚಯಿಸಿದ ಹರೀಶ್ ಕೇರ
ಹರಿಪ್ರಕಾಶ್ ಕೋಣೆಮನೆ ಅವರು ಬರೆದಿರುವ ಎರಡೂ ಪುಸ್ತಕಗಳ ಕುರಿತು ವಿಸ್ತಾರ ಡಿಜಿಟಲ್‌ನ ಸುದ್ದಿ ಸಂಪಾದಕ ಹರೀಶ್ ಕೇರ ಮಾಹಿತಿ ನೀಡಿದರು. ಪುಸ್ತಕಗಳಲ್ಲಿರುವ ಅಂಶಗಳು, ಕೃತಿಕಾರರ ಆಶಯ, ಅವರ ಬರಹದ ಅಂತರಾಳ ಸೇರಿ ಹಲವು ವಿಷಯಗಳನ್ನು ನಿದರ್ಶನಗಳ ಸಮೇತ ತಿಳಿಸಿದರು.
ವಿಸ್ತಾರ ಏಕೆ ಮುಖ್ಯ?
“ಆಧುನಿಕ ಯುಗದಲ್ಲಿ ನಾವೆಲ್ಲರೂ ಜನಪರ ನಿಲುವಿಗಿಂತ ಜನಪ್ರಿಯ ನಿಲುವುಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ, ವಿಸ್ತಾರ ನ್ಯೂಸ್ ಜನಪರವಾದ ನಿಲುವಿನಿಂದ ಜನರ ಮುಂದೆ ಬರುತ್ತಿದೆ. ಅದರಲ್ಲೂ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಇದುವರೆಗೆ ಸಕಾರಾತ್ಮಕ ಹಾಗೂ ಜನಪರ ಪತ್ರಿಕೋದ್ಯಮವನ್ನು ಪಾಲಿಸುತ್ತಿದ್ದಾರೆ. ಹಾಗಾಗಿ, ವಿಸ್ತಾರ ನ್ಯೂಸ್ ಚಾನೆಲ್, ವಿಸ್ತಾರಗೊಳ್ಳುವ ಜತೆಗೆ ಆಳಕ್ಕೂ ಇಳಿಯಲಿ. ಈಗಾಗಲೇ ವಿಸ್ತಾರ ಡಿಜಿಟಿಲ್ ಮಾಧ್ಯಮವು ಕರ್ನಾಟಕದ ಅರ್ಧದಷ್ಟು ಜನರನ್ನು ತಲುಪಿರುವುದೇ ವಿಸ್ತಾರದ ವ್ಯಾಪ್ತಿಗೆ ಹಿಡಿದ ಕನ್ನಡಿ” ಎಂದು ವಿಸ್ತಾರ ನ್ಯೂಸ್‌ನ ಹಿತೈಷಿ ಎನ್.ರವಿಶಂಕರ್ ತಿಳಿಸಿದರು.
ಇದನ್ನೂ ಓದಿ | Vistara News Launch | ವಿಸ್ತಾರ ಕನ್ನಡ ಸಂಭ್ರಮ ಹೇಗಿದೆ? ಇಲ್ಲಿವೆ ಫೋಟೊಗಳು