Site icon Vistara News

Vivekananda Jayanti 2023 | ಶಾಲಾ ಮಕ್ಕಳಿಂದ ಬೃಹತ್ ಕಾಲ್ನಡಿಗೆ ಜಾಥಾ; ವಿವೇಕಾನಂದರ ಸಂದೇಶಗಳ ಬಗ್ಗೆ ಜಾಗೃತಿ

Vivekananda Jayanti 2023

ಪೀಣ್ಯ ದಾಸರಹಳ್ಳಿ: ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಜಿ.ಎನ್.ಆರ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯುವ ಮುಖಂಡ ಜಿ. ಮಧುಸೂದನ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶಾಲಾ ಮಕ್ಕಳೊಂದಿಗೆ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರ ಜಾಗೃತಿಗಾಗಿ ನಡೆದ ಈ ಜಾಥಾ ಕಮ್ಮಗೊಂಡನಹಳ್ಳಿಯ ಎಇಎಸ್ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಾರಂಭವಾಗಿ, ಕಮ್ಮಗೊಂಡನಹಳ್ಳಿಯ ರಾಜ ಬೀದಿಗಳಲ್ಲಿ ಸಾಗಿ ಎಂಎನ್‌ಟಿಐ ಕಾಲೇಜು ಮುಖಾಂತರ ಸಾಗಿ ಸರ್ಕಲ್ ಮೂಲಕ ಮತ್ತೆ ಎಇಎಸ್ ಶಾಲೆ ಬಳಿಗೆ ಜಾಥಾ ಆಗಮಿಸಿತು.

ರಸ್ತೆಯುದ್ದಕ್ಕೂ ಶಾಲಾ ಮಕ್ಕಳು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ, ಜನರಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಸುತ್ತಾ ಜಾಗೃತಿ ಮೂಡಿಸಿದರು. ಇದೇ ವೇಳೆ ಸಾರ್ವಜನಿಕರಿಗೆ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕಗಳನ್ನು ಹಂಚಲಾಯಿತು.

ಇದನ್ನೂ ಓದಿ | National Youth Day | ವಿವೇಕಾನಂದರ ಆದರ್ಶ, ವಿಚಾರಗಳಿಂದ ದೇಶವಾಸಿಗಳಿಗೆ ನಿರಂತರ ಮಾರ್ಗದರ್ಶನ: ಮೋದಿ

ಅಮೆರಿಕದಲ್ಲಿ ನೌಕರಿ ಮಾಡುತ್ತಿದ್ದ ಜಿ.ಮಧುಸೂದನ್ ರೆಡ್ಡಿ ಅವರು ತಂದೆಯವರ ಊರಾದ ದಾಸರಹಳ್ಳಿ ಕ್ಷೇತ್ರದ ಕಮ್ಮಗೊಂಡನಹಳ್ಳಿಯ ಋಣ ತೀರಿಸಲು ಹಾಗೂ ಜನರಿಗೆ ನೆರವಾಗಲು ಜಿ.ಎನ್.ಆರ್ ಫೌಂಡೇಶನ್ ಮೂಲಕ ನೆರವಾಗುತ್ತಿದ್ದಾರೆ. ಎಇಎಸ್ ಶಾಲೆಯ ಮಕ್ಕಳಿಗೆ ಶುದ್ಧ ನೀರು ದೊರಕಲು ವಾಟರ್ ಪ್ಯೂರಿಫೈಯರ್ ಅನ್ನು ದಾನವಾಗಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಜಿ.ಎನ್.ಆರ್ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಜಿ.ಮಧುಸೂದನ್ ರೆಡ್ಡಿ, ‘ಜಗತ್ತಿಗೆ ಸ್ಫೂರ್ತಿಯಾಗುವ ನೀವು, ಗುರಿಯಿದ್ದರೆ ಅದನ್ನು ಸಾಧಿಸುವವರೆಗೆ ಸತತ ಪ್ರಯತ್ನ ಮಾಡುವ ಮೂಲಕ ಗುರಿ ಮುಟ್ಟುವವರೆಗೆ ವಿಶ್ರಮಿಸಬಾರದುʼ ಎಂಬ ಸ್ವಾಮಿ ವಿವೇಕಾನಂದರ ನುಡಿಯನ್ನು ನನ್ನ ಜೀವನದಲ್ಲೂ ಅಳವಡಿಸಿಕೊಂಡಿದ್ದೇನೆ. ನಾವೆಲ್ಲರೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಎತ್ತಿ ಹಿಡಿಯುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದ ಅವರು, ಸ್ವಾಮಿ ವಿವೇಕಾನಂದರು ಈ ದೇಶದ ಮಹಾನ್ ವೀರ ಕೇಸರಿ ಎನ್ನಿಸಿಕೊಂಡವರು, ವೀರ ಅನ್ನಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಚಿಕಾಗೊ ಸರ್ವ ಧರ್ಮ ಸಮ್ಮೇಳದನ ಭಾಷಣ ಇಂದಿಗೂ ಜಗತ್ತು ಮರೆತಿಲ್ಲ, ಅದು ಆ ಭಾಷಣಕ್ಕೆ ಇರುವ ತಾಕತ್ತು ಎಂದು ಹೇಳಿದರು.

ಹನಶ್ರೀ ಮಂಜುನಾಥ್ ಮಾತನಾಡಿ, ಅಮೆರಿಕ ದೇಶದ ಜನತೆಗೆ ಸಹೋದರ, ಸಹೋದರಿಯರೇ ಎಂದು ಹೇಳುವ ಮೂಲಕ ಇಡೀ ಅಮೆರಿಕ ದೇಶಕ್ಕೆ ಭಾರತದ ಸಂಸ್ಕೃತಿಯ ಪರಿಚಯವನ್ನು ವಿವೇಕಾನಂದರು ಮಾಡಿದ್ದರು. ದೇಶವನ್ನು ಕಟ್ಟುವಲ್ಲಿ ಯುವಕರ ಪಾತ್ರ ಏನೆಂಬುದನ್ನು ಮನಗಂಡಿದ್ದ ಅವರು, ಯುವಕರಿಂದಲೇ ದೇಶ ಅಭಿವೃದ್ಧಿ ಸಾಧ್ಯ ಎಂದರಿತು ಯುವಕರಿಗೆ ಮಾರ್ಗದರ್ಶಿಯಾಗುವ ಮೂಲಕ ಆದರ್ಶಪ್ರಾಯವಾದರು ಎಂದರು.

ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ, ಲಕ್ಷ್ಮಿ ನಾರಾಯಣ್, ಮಲ್ಯಾದ್ರಿ ರೆಡ್ಡಿ, ಸುಧಾಕರ್ ರೆಡ್ಡಿ, ಪ್ರಸಾದ್, ಎಇಎಸ್ ಶಾಲೆಯ ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ | National Youth Festival | ಆ ನರೇಂದ್ರನ ಕನಸು ಈ ನರೇಂದ್ರನಿಂದ ನನಸಾಗುತ್ತಿದೆ: ಕೇಂದ್ರ ಸಚಿವ ಅನುರಾಗ್‌ ಠಾಕೂರ್‌

Exit mobile version