ಶಿವಮೊಗ್ಗ: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕ, ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ಬೃಹತ್ ಬೈಕ್ ರ‍್ಯಾಲಿ (Vote for OPS) ನಡೆಸಲಾಯಿತು. ಮೂರು ಸಾವಿರಕ್ಕೂ ಹೆಚ್ಚು ಎನ್‌ಪಿಎಸ್ ನೌಕರರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಗರದ ಪ್ರಮುಖ ರಸ್ತೆಗಳಲ್ಲಿ ನೌಕರರು ರ‍್ಯಾಲಿ ನಡೆಸಿದರು. ಬಳಿಕ ನಗರದ ಫ್ರೀಡಂ ಪಾರ್ಕ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಎನ್‌ಪಿಎಸ್ ನೌಕರರ ಸಮಾವೇಶ ಮತ್ತು ವೋಟ್ ಫಾರ್ ಒಪಿಎಸ್ ಅಭಿಯಾನ, ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿತ್ತು.
ಬಜೆಟ್ ಅಧಿವೇಶನದೊಳಗೆ ಎನ್‌ಪಿಎಸ್ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ
ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಮುಂದಿನ ಬಜೆಟ್ ಅಧಿವೇಶನದೊಳಗೆ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಜತೆ ಎನ್‌ಪಿಎಸ್ ಮುಖಂಡರ ವಿಶೇಷ ಸಭೆ ಆಯೋಜಿಸಿ, ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಮಗಳನ್ನು ಬಾವಿಗೆ ಎಸೆದು ಅಳಿಯ ಕೊಂದಿದ್ದಾನೆ; ಶಿಕ್ಷೆ ಕೊಡಿಸಿ ಎಂದು ಎಚ್.ಡಿ. ಕುಮಾರಸ್ವಾಮಿ ಪಾದ ಹಿಡಿದು ಕಣ್ಣೀರಿಟ್ಟ ಮಹಿಳೆ
ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುವಾಗ ದಬ್ಬಾಳಿಕೆ ನಡೆಯುವುದು ಸಹಜ. ಆದರೆ ಯಾವುದೇ ಒತ್ತಡಕ್ಕೂ ಹೆದರದೇ ನಿರಂತರವಾಗಿ ಹೋರಾಟ ಮುಂದುವರಿಸೋಣ, ಎನ್‌ಪಿಎಸ್ ನೌಕರರ ಬೇಡಿಕೆ ಈಡೇರುವವರೆಗೂ ನಿಮ್ಮ ಹೋರಾಟಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಾಜಕಾರಣಿಗಳಿಗೆ ಮಾತ್ರ ಒಪಿಎಸ್ ವ್ಯವಸ್ಥೆ ಇದ್ದು, ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಜಾರಿಗೊಳಿಸಿರುವುದು ಯಾವ ನ್ಯಾಯ. ಒಂದು ವೇಳೆ ಎನ್‌ಪಿಎಸ್ ಉತ್ತಮ ವ್ಯವಸ್ಥೆಯಾಗಿದ್ದರೆ, ರಾಜಕಾರಣಿಗಳಿಗೂ ಎನ್‌ಪಿಎಸ್ ಅನ್ವಯ ಮಾಡಲಿ. ರಾಜ್ಯ ಸರ್ಕಾರ ಎನ್‌ಪಿಎಸ್‌ನಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಮಾತನಾಡಿ, ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ವೋಟ್ ಫಾರ್ ಒಪಿಎಸ್ ಎಂಬ ಅಭಿಯಾನದ ಮುಖಾಂತರ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Prajadhwani : ಕರಾವಳಿಯಲ್ಲಿ ಶಿಕ್ಷಣಕ್ಕೆ ಮಕ್ಕಳನ್ನು ಕಳಿಸಲು ಪೋಷಕರು ಹೆದರುತ್ತಾರೆ : ಡಿ.ಕೆ. ಶಿವಕುಮಾರ್ ಹೇಳಿಕೆ
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಕೆ.ಎನ್.ಮಾತನಾಡಿ, ಒಪಿಎಸ್ ಯೋಜನೆ ಜಾರಿ ಹೋರಾಟ ಬದುಕಿನ ಹೋರಾಟ ಆಗಿದ್ದು, ಎನ್‌ಪಿಎಸ್‌ನಿಂದ ಆಗುತ್ತಿರುವ ಸಮಸ್ಯೆ ಅನುಭವಿಸಿದವರಿಗೆ ಗೊತ್ತಿದೆ. ರಾಜ್ಯ ಸರ್ಕಾರ ಕೂಡ ಎನ್‌ಪಿಎಸ್ ನೌಕರರ ಸಮಸ್ಯೆಗಳನ್ನು ಅರಿತುಕೊಂಡು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.