ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ (VTU Convocation) ಫೆ. 24ರಂದು ಬೆಳಿಗ್ಗೆ 10.30ಕ್ಕೆ ಜ್ಞಾನಸಂಗಮ ಆವರಣದಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಲಿದೆ. ಒಬ್ಬನೇ ವಿದ್ಯಾರ್ಥಿ ೧೮ ಚಿನ್ನದ ಪದಕಗಳನ್ನು ಗೆದ್ದಿರುವುದು ಈ ಬಾರಿಯ ಘಟಿಕೋತ್ಸವದ ವಿಶೇಷವಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ, ‘ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ (ಮರಣೋತ್ತರ), ವೆಬ್ಕೊ ಇಂಡಿಯಾ ಲಿಮಿಟೆಡ್ ಹಾಗೂ ಟಿವಿಎಸ್ ಮೋಟಾರ್ ಸಲ್ಯೂಷನ್ಸ್‌ನ ಪ್ರೈ.ಲಿಮಿಟೆಡ್ ಅಧ್ಯಕ್ಷ ಎಂ.ಲಕ್ಷ್ಮೀನಾರಾಯಣ್, ಬೆಲಗಮ್ ಫೆರೊಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಸಬ್ನಿಸ್ ವಿಟಿಯು ಗೌರವ ಡಾಕ್ಟರೇಟ್ ಪಡೆಯಲಿದ್ದಾರೆʼʼ ಎಂದರು.
ಈ ಬಾರಿ ಒಟ್ಟು 62,228 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಹಾಗೂ 701 ಮಂದಿಗೆ ಪಿಎಚ್.ಡಿ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅತಿಥಿಗಳಾಗಿ ಭಾಗವಹಿಸುವರು. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡುವರು ಎಂದರು.
ಮುರಳಿಗೆ 18 ಚಿನ್ನದ ಪದಕ!
ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಎಸ್.ಮುರಳಿ ಅವರು ಒಟ್ಟು 18 ಚಿನ್ನದ ಪದಕ ಪಡೆದು, ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿದ್ದಾರೆ. ಒಬ್ಬನೇ ವಿದ್ಯಾರ್ಥಿ ಇಷ್ಟು ಚಿನ್ನದ ಪದಕ ಪಡೆದಿದ್ದು ವಿಟಿಯು 25 ವರ್ಷಗಳ ಇತಿಹಾಸದಲ್ಲೇ ದಾಖಲೆಯಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಕುರಂಜಿ ವೆಂಕಟರಮಣಗೌಡ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿನಿ ಕೃತಿ ಎಸ್. 8 ಚಿನ್ನದ ಪದಕ ಪಡೆದಿದ್ದಾರೆ ಎಂದು ಕುಲಪತಿ ಎಂದು ಪ್ರೊ. ವಿದ್ಯಾಶಂಕರ ತಿಳಿಸಿದರು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ನತಾಷಾ ಪೆರಿನಾಯಗಂ: ಇವಳು ವಿದ್ಯಾರ್ಥಿಗಳ ಪಾಲಿನ ಸ್ಫೂರ್ತಿ ದೇವತೆ!