Site icon Vistara News

ಸ್ಮಾರಕವೋ ಮಸೀದಿಯೋ ಎಂದು ವಕ್ಫ್ ಟ್ರಿಬ್ಯುನಲ್ ನಿರ್ಧರಿಸಲು ಸಾಧ್ಯವಿಲ್ಲ: VHP ವಾದ

malali masjid

ಮಂಗಳೂರು: ಮಳಲಿ‌ ಮಸೀದಿ-ಮಂದಿರ ಫೈಟ್‌ ವಿವಾದ ಸಂಬಂಧ ವಿಶ್ವ ಹಿಂದೂ ಪರಿಷತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಗರದ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ಮಂಗಳವಾರ ನಡೆಯಿತು.

ವಿಎಚ್‌ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಂಡಿಸಿದ್ದು, ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿ ವಕ್ಫ್ ಟ್ರಿಬ್ಯುನಲ್‌ ವ್ಯಾಪ್ತಿಗೆ ಬರುವುದಿಲ್ಲ. ನಾವು ಎಲ್ಲೂ ಅದು ವಕ್ಫ್ ಆಸ್ತಿಯೋ ಅಲ್ಲವೋ ಎಂಬ ಬಗ್ಗೆ ಪ್ರಶ್ನಿಸಿಲ್ಲ. ನಮ್ಮ ಅರ್ಜಿದಾರರು ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನ ಅಂತ ಹೇಳಿದ್ದಾರೆ. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿದ್ದಾರೆ. ಮಳಲಿ‌ ಮಸೀದಿ ಐತಿಹಾಸಿಕ ಸ್ಮಾರಕವೋ ಮಸೀದಿಯೋ ಅನ್ನೋದನ್ನು ವಕ್ಫ್ ಟ್ರಿಬ್ಯುನಲ್ ನಿರ್ಧರಿಸಲು ಆಗುವುದಿಲ್ಲ. ಹೀಗಾಗಿ ಅದನ್ನು ಸಿವಿಲ್ ಕೋರ್ಟ್ ತಕ್ಷಣ ನಿರ್ಧರಿಸಬೇಕು. ಹೀಗಾಗಿ ಆ ಜಾಗದ ಸರ್ವೇಗೆ ಆದೇಶ ಮಾಡಿದರೆ ಅಲ್ಲಿನ ಸ್ಮಾರಕ ಏನು ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ.

1991ರ ಪೂಜಾ ಸ್ಥಳ ಕಾಯ್ದೆಯಡಿಯೂ ಅರ್ಜಿ ವಜಾ ಮಾಡಲು ಸಾಧ್ಯವಿಲ್ಲ. ಈ ಕಾಯ್ದೆಯಲ್ಲೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಹೇಳಲಾಗಿದೆ. ಹೀಗಿರುವಾಗ ನಮ್ಮ ಅರ್ಜಿದಾರರ ವಾದದಂತೆ‌ ಅಲ್ಲಿರುವ ಸ್ಮಾರಕ ಏನು ಎಂಬುದು ಗೊತ್ತಾಗಬೇಕು. ಅದು ಸರ್ವೇ ಮೂಲಕ ಗೊತ್ತಾದರೆ ಸಂರಕ್ಷಣೆ ಮಾಡಲು ಸಾಧ್ಯ. ಈಗ ಇರುವ ತಡೆಯಾಜ್ಞೆ ತೆರವು ಮಾಡಿದರೆ ಅಲ್ಲಿ ಮಸೀದಿ ನಿರ್ಮಾಣ ಆಗುತ್ತದೆ. ಇದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆ ಅಸಾಧ್ಯ ಎಂದು ತಿಳಿಸಿದ್ದಾರೆ.

ಇನ್ನು ಮಳಲಿ ಅಸಯ್ಯಿದ್‌ ಅಬ್ದುಲ್ಲಾ ಹಿಲ್‌ ಮದನಿ ಮಸೀದಿ ವಿವಾದದ ಅರ್ಜಿ ವಿಚಾರಣೆಯಲ್ಲಿ ಮಸೀದಿ ಆಡಳಿತ ಮಂಡಳಿ ಹಾಗೂ ವಿಶ್ವಹಿಂದೂ ಪರಿಷತ್‌ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಜೂನ್‌ 10ಕ್ಕೆ ವಿಚಾರಣೆ ಮುಂದೂಡಿದ್ದಾರೆ.

ಇದನ್ನೂ ಓದಿ | ಮಂಗಳೂರು ಕೋರ್ಟ್‌ನಲ್ಲಿ ಮಳಲಿ‌ ಮಸೀದಿ-ಮಂದಿರ ಫೈಟ್

Exit mobile version