ಬೆಂಗಳೂರು: ಕೆಆರ್‌ಎಸ್ ಜಲಾಶಯದಲ್ಲಿ ಕಾವೇರಿ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಬೆಂಗಳೂರಿಗೆ ಜಲಕ್ಷಾಮದ ಭೀತಿ ಎದುರಾಗಿದ್ದು, ಈಗಾಗಲೇ ರಾಜಧಾನಿಯ ಬಹುತೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಹೀಗಾಗಿ ರಾಜಧಾನಿ ಜನರ ದಾಹ (Water crisis) ತೀರಿಸಲು ಬಿಬಿಎಂಪಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ನಗರದ ಕೆರೆಗಳತ್ತ ಮುಖಮಾಡಿವೆ.
ಹೌದು, ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ 280ಕ್ಕೂ ಹೆಚ್ಚು ಕೆರೆಗಳು ಇದ್ದವು. ಯಾವುದೇ ನದಿ ಇಲ್ಲದ ಕಾರಣ ಕೆರೆಗಳ ಮೇಲೆಯೇ ಜನರು ಅವಲಂಬಿತರಾಗಿದ್ದರು. ಆದರೆ, ನಗರ ಬೆಳೆದಂತೆ ಹಲವು ಕೆರೆಗಳು ಕಣ್ಮರೆಯಾಗುತ್ತಿವೆ. ಪ್ರಸ್ತುತ ರಾಜಧಾನಿಯಲ್ಲಿರುವ ಕೆರೆಗಳ ಸಂಖ್ಯೆ 50 ದಾಟುವುದಿಲ್ಲ. ಈ ನಡುವೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಇರುವ ಕೆರೆಗಳ ಪುನಶ್ಚೇತನ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಕೆರೆ ನೀರು ಶುದ್ಧೀಕರಣ ಮಾಡಿ, ಜನರಿಗೆ ಪೂರೈಸಲು ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ | Water Crisis: ನೀರಿನ ಕೊರತೆಯ ಎಫೆಕ್ಟ್; ಬೆಂಗಳೂರಿನ ಕೆಲವು ಶಾಲೆ, ಕೋಚಿಂಗ್ ಸೆಂಟರ್‌ಗೆ ಬೀಗ!
ಈ ಬಗ್ಗೆ ಬಿಡಬ್ಲ್ಯುಎಸ್‌ಎಸ್‌ಬಿ ಚೇರ್ಮನ್ ರಾಮ್ ಪ್ರಸಾದ್ ಮನೋಹರ್ ಪ್ರತಿಕ್ರಿಯಿಸಿ, ಕೆರೆ ನೀರಿನ ಮರುಬಳಕೆ ಸಂಬಂಧ ದೇವನಹಳ್ಳಿಯಲ್ಲಿ ಐಐಎಸ್‌ಸಿ ಯಶಸ್ವಿ ಪ್ರಯೋಗ ಮಾಡಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಕೆಲವು ಕೆರೆಗಳನ್ನು ನಾವು ಗುರುತಿಸಲಾಗಿದೆ. ಕಾವೇರಿ 5ನೇ ಹಂತ ಯೋಜನೆ ಮುಗಿಯುವವರೆಗೆ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಂಡಿದ್ದು, ಕಾವೇರಿ ನೀರು ಪೂರೈಕೆ ಇಲ್ಲದ ಕಡೆ ಕೆರೆ ನೀರು ಪೂರೈಸುವ ಯೋಜನೆ ಇದೆ. ಇನ್ನು ಕೆರೆ ಸಮೀಪ ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಯೋಗಿಕವಾಗಿ ಈ ಯೋಜನೆಗೆ ಚಿಕ್ಕ ಬಾಣಾವರ ಹಾಗೂ ನಾಯಂಡಹಳ್ಳಿ ಕೆರೆಗಳನ್ನು ಗುರುತಿಸಲಾಗಿದ್ದು, 15 ದಿನದೊಳಗೆ ದೇವನಹಳ್ಳಿ ಮಾದರಿಯನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ದೇವನಹಳ್ಳಿಯಲ್ಲಿ ನೀರಿನ ನೈಸರ್ಗಿಕ ಸೋಸುವಿಕೆ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ. ಜತೆಗೆ ನೀರಿನ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತದೆ. ನಗರದ 336 ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಸಲಾಗುತ್ತಿದ್ದು, 1000 ದಿಂದ 1500 ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ ಎಂದರು.
ಇದನ್ನೂ ಓದಿ | Water Crisis: ಬೆಂಗಳೂರಲ್ಲಿ ಈ 6 ಕೆಲಸಕ್ಕೆ ನೀರು ಬಳಸಿದ್ರೆ 5000 ರೂ. ದಂಡ! ನೀವೂ ದೂರು ಕೊಡಿ
ಇನ್ನು ನಗರದಲ್ಲಿ 1200 ಜಲಮಂಡಳಿಯ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. 400 ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಿದ್ದು, 200 ಬೋರ್‌ವೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿ ಜಲಮಂಡಳಿಯಿಂದ ನೇರವಾಗಿ ಮನೆಗಳ ಸಂಪ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.